ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಡುಗಡೆಗೊಂಡ ಭಾರತದ ಮೊದಲ ಪರಿಪೂರ್ಣ ಬಾಹ್ಯಾಕಾಶ ಸಿನಿಮಾ ಮಿಷನ್ ಮಂಗಲ್. ದೇಶದಾದ್ಯಂತ ಭಾರಿ ಪ್ರಶಂಸೆಗಳು ವ್ಯಕ್ತವಾಗಿದ್ದಲ್ಲದೇ ಬಾಕ್ಸ್ ಆಫೀಸಿನಲ್ಲಿಯೂ ಸಾಕಷ್ಟು ಕಮಾಲು ಮಾಡುತ್ತಿದೆ. ಮೂರೇ ದಿನದಲ್ಲಿ 30 ಕೋಟಿ ಆದಾಯವನ್ನು ಗಳಿಸಿರುವ ಮಿಷನ್ ಮಂಗಲ್ ಸಕ್ಸಸ್ ಮೂಡ್ ನಲ್ಲಿಯೇ ಮುನ್ನುಗ್ಗುತ್ತಿದೆ. ಇನ್ನು ಮಿಷನ್ ಮಂಗಲ್ ನಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಈ ಚಿತ್ರದ ಮೂಲಕ ಮತ್ತೆ ಯಶಸ್ಸಿನತ್ತ ಮುಖಮಾಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮಂಗಳ ಗ್ರಹ ಯಾನಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿದ್ದ ಸಿನಿಮಾ ಇದಾಗಿದ್ದು, ತಾರಾಗಣದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್, ದತ್ತಣ್ಣ ಮೊದಲಾದವರು ಅಭಿನಯಿಸಿದ್ದರು. ಆದರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸೋನಾಕ್ಷಿ ಸಿನ್ಹಾ ಉಳಿದವರಿಗಿಂತ ಹೆಚ್ಚು ಗಮನಸೆಳೆದಿದ್ದು, ಸಿನಿಮಾ ನೋಡಿದ ಅಭಿಮಾನಿಗಳು ಹಾಗೂ ವಿಮರ್ಶಕರು ಸೋನಾಕ್ಷಿ ಸಿನ್ಹಾ ಅವರನ್ನು ಹಾಡಿ ಹೊಗಳಿಸಿದ್ದಾರೆ. ಸತತ ಸೋಲಿನಿಂದಾಗಿ ಕಂಗೆಟ್ಟಿದ್ದ ಸೋನಾಕ್ಷಿ ಮಿಷನ್ ಮಂಗಲ್ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಸದ್ಯ ಸೋನಾಕ್ಷಿ ದಬಾಂಗ್-3 ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಮತ್ತೊಮ್ಮೆ ರಜ್ಜೋ ಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಅಲ್ಲದೇ ಅಜಯ್ ದೇವಗನ್ ಅಭಿನಯದ ಭುಜ್ : ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾ ಚಿತ್ರೀಕರಣ ದಲ್ಲೂ ಪಾಲ್ಗೊಳ್ಳಲಿದ್ದಾರೆ.