ಈ ಚಿತ್ರರಂಗದಲ್ಲಿ ಎಂತೆಂಥವರೋ ಹೇಗೇಗೋ ಬದುಕುತ್ತಿರುತ್ತಾರೆ. ಸಿನಿಮಾವನ್ನೇ ಉಸಿರಾಗಿಸಿಕೊಂಡವರಿಗೇ ಕೆಲವೊಮ್ಮೆ ಸಂಕಟಗಳು ಒದ್ದುಕೊಂಡುಬರುತ್ತವೆ. ಯಾರದ್ದೋ ಹೆಡ್ ವೇಯ್ಟಿಗೆ ಇನ್ಯಾರೋ ನರಳಾಡುವಂತಾಗಿಬಿಡುತ್ತದೆ. ನಟ ಶಿನು ಮಿತ್ರ ಅದ್ಭುತ ನಟ. ಎಲ್ಲೋ ದುಡಿದು ತಂದು ಸಿನಿಮಾಗೆ ಧಾರೆಯೆರೆಯುವ ಧಾರಾಳಿಗ. ಆದರೆ ಅವರ ಕನಸು ಮಾತ್ರ ಫಲಿಸುತ್ತಲೇ ಇಲ್ಲ…!
ನಟ ಮಿತ್ರನ ನಸೀಬೇ ಸರಿ ಇದ್ದಂತಿಲ್ಲ!
ಕೇರಳದಲ್ಲಿ ಹುಟ್ಟಿ, ಕರಾವಳಿ ಪ್ರದೇಶಗಳಲ್ಲೆಲ್ಲಾ ಓಡಾಡಿಕೊಂಡು, ಹೊಟೇಲ್ ಕೆಲಸಗಳನ್ನು ಮಾಡಿಕೊಂಡಿದ್ದವರು. ಅದರ ಜೊತೆಜೊತೆಗೆ ಕಲಾವಿದನಾಗಿ ಹೆಸರು ಮಾಡಿದವರು ಮಿತ್ರ. ಸರಿಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿರುವ ಮಿತ್ರ ಕಾಮಿಡಿ ನಟನಾಗಿ ಹೆಚ್ಚು ಪಾತ್ರ ನಿರ್ವಹಿಸಿದವರು. ತಾನು ಬರೀ ಕಾಮಿಡಿಗೆ ಮಾತ್ರ ಸೀಮಿತವಾಗಬಾರದು, ಯಾವುದೇ ಗಂಭೀರ ಪಾತ್ರಗಳನ್ನು ನಿಭಾಯಿಸಬಲ್ಲ ದೈತ್ಯ ನಟ ನನ್ನೊಳಗಿದ್ದಾನೆ. ಆತನನ್ನು ಜಗತ್ತಿಗೆ ಪರಿಚಯಿಸಬೇಕು ಅನ್ನೋ ಕಾರಣಕ್ಕೆ ಸ್ವತಃ ನಿರ್ಮಿಸಿ, ʻರಾಗʼ ಚಿತ್ರದಲ್ಲಿ ನಟಿಸಿದ್ದರು. ಅಗತ್ಯಕ್ಕಿಂತಾ ಹೆಚ್ಚು ಖರ್ಚು ಮಾಡಿ, ಅಲ್ಲಿಯವರೆಗೆ ಹೊಟೇಲ್ ಉದ್ಯಮ ಮತ್ತು ಚಿತ್ರರಂಗದಲ್ಲಿ ದುಡಿದ ದುಡ್ಡನ್ನೆಲ್ಲಾ ʻರಾಗʼದ ಮೇಲೆ ಇನ್ವೆಸ್ಟ್ ಮಾಡಿದ್ದರು. ಸಿನಿಮಾ ಮತ್ತು ಮಿತ್ರನ ಪಾತ್ರದ ಬಗ್ಗೆ ಒಳ್ಳೇ ಮಾತುಗಳು ಕೇಳಿಬಂದವಷ್ಟೇ; ಹಾಕಿದ ದುಡ್ಡು ಮಾತ್ರ ʻರಾಗʼದಲ್ಲಿ ಲೀನವಾಯ್ತು!
ಈ ಭಯಾನಕ ಸೋಲಿನಿಂದ ಕಂಗೆಟ್ಟು, ಆರೋಗ್ಯವನ್ನೂ ಕೆಡಿಸಿಕೊಂಡು ಆಸ್ಪತ್ರೆ ಸೇರಿದ್ದ ಮಿತ್ರನನ್ನು ಪರಸಂಗ ಚಿತ್ರಕ್ಕಾಗಿ ಕರೆದು ಒಳ್ಳೆ ಪಾತ್ರ ನೀಡಿದ್ದು ನಿರ್ದೇಶಕ ಕೆ.ಎಂ. ರಘು ಮತ್ತು ನಿರ್ಮಾಪಕ ಕುಮಾರ್. ಪರಸಂಗ ನಿಜಕ್ಕೂ ಈ ನೆಲದ ಕತೆಯನ್ನು ಹೊತ್ತುತಂದ ಚಿತ್ರ. ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನೀಡಿ, ಜೋಗಿ ಪ್ರೇಮ್ ಹಾಡಿದ್ದ ʻಮರಳಿಬಾರದೂರಿಗೆ ನಿನ್ನ ಪಯಣʼ ಎನ್ನುವ ಕಾಡುವ ಹಾಡು ಇವತ್ತಿಗೂ ಎಲ್ಲ ಕಡೆ ಪ್ಲೇ ಆಗುತ್ತಿರುತ್ತದೆ. ಈ ಹಾಡು ಹಿಟ್ ಆದ ಮಟ್ಟಿಗೆ ಸಿನಿಮಾ ಸೌಂಡು ಮಾಡಲಿಲ್ಲ. ಎಲ್ಲ ಸರಿ ಇದ್ದರೂ ಹೇಳಿಕೊಳ್ಳುವಂತಾ ಗೆಲುವು ಮಿತ್ರನ ಕೈ ಹಿಡಿಯಲಿಲ್ಲ.
ಕಾಮಿಡಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದವರು ಒಮ್ಮೆ ಲೀಡ್ ರೋಲಲ್ಲಿ ಕಾಣಿಸಿಕೊಂಡರೆ ಅವರ ಕತೆ ಮುಗಿದಂತೇ. ʻಅವನು ಹೀರೋ ಆದ ಬಿಡಿʼ ಅಂತಾ ತಮ್ಮಷ್ಟಕ್ಕೆ ತಾವು ಬ್ರಾಂಡು ಮಾಡಿ, ಸೈಡಿಗೆ ನಿಲ್ಲಿಸಿಬಿಡುತ್ತಾರೆ. ನಟ ಮಿತ್ರ ಅವರಿಗೆ ಕೂಡಾ ನಿಜಕ್ಕೂ ಇದೇ ಅನುಭವವಾಗಿತ್ತು. ಒಂದು ಕಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಚಿತ್ರಗಳು ನಿಲ್ಲಲಿಲ್ಲ. ಮತ್ತೊಂದು ಕಡೆ ಇದ್ದ ಸಣ್ಣಪುಟ್ಟ ಅವಕಾಶಗಳೂ ಕೈಬಿಟ್ಟುಹೋದವು.
ಇಂಥಾ ಹೊತ್ತಿನಲ್ಲಿ ಮತ್ತೆ ಹೋಟೆಲ್ ಉದ್ಯಮದ ಕಡೆಗೆ ಹೆಚ್ಚು ಗಮನ ನೀಡಿದ್ದ ಮಿತ್ರನ ಕಣ್ಣೆದುರು ನಕ್ಷತ್ರವೊಂದು ಮಿನುಗಿದಂತಾಗಿತ್ತು. ಹಿಂದೆ ಗಿರ್ ಗಿಟ್ಲೆ ಸಿನಿಮಾವನ್ನು ನಿರ್ದೇಶಿಸಿದ್ದ ರವಿಕಿರಣ್ ʻಬ್ಲ್ಯಾಕಿʼ ಹೆಸರಿನ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಅದಕ್ಕೆ ಇದೇ ಮಿತ್ರ ಹೀರೋ. ಈ ಚಿತ್ರಕ್ಕಾಗಿ ಸರಿಸುಮಾರು ಎಂಭತ್ತು ಕೇಜಿಯಷ್ಟು ತೂಗುತ್ತಿದ್ದ ದೇಹವನ್ನು ದಂಡಿಸಿ, ಕಷ್ಟಪಟ್ಟು ಹತ್ತಾರು ಕೇಜಿ ಇಳಿಸಿಕೊಂಡಿದ್ದರು. ಬೆಂಗಳೂರು, ಬ್ಯಾಂಕಾಕುಗಳಲ್ಲಿ ಶೂಟಿಂಗ್ ಮಾಡುವ ಪ್ಲಾನೂ ಸಿದ್ದಗೊಂಡಿತ್ತು. ಆರೇಳು ದಿನಗಳ ಶೂಟಿಂಗ್ ನಡೆಸಿದ್ದರು. ಮಿತ್ರನ ಬರ್ತಡೇ ಪ್ರಯುಕ್ತ ಪೋಸ್ಟರನ್ನೂ ರಿಲೀಸ್ ಮಾಡಿದ್ದರು. ಲಾಕ್ ಡೌನ್ ನಂತರ ಸಿನಿಮಾವನ್ನು ಮುಂದುವರೆಸುವಾಗಿ ಸುದ್ದಿಯೂ ಆಗಿತ್ತು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ʻಬ್ಲ್ಯಾಕಿʼ ಮುಂದುವರೆಯುವ ಯಾವ ಲಕ್ಷಣವೂ ಇಲ್ಲ.
ತಾಂತ್ರಿಕವಾಗಿ ಶ್ರೀಮಂತವಾಗಿದ್ದ ಗಿರ್ ಗಿಟ್ಲೆ ಥೇಟರಲ್ಲಿ ನಿಲ್ಲಲಿಲ್ಲ. ಎಲ್ಲವೂ ಅಂದುಕೊಂಡಿದ್ದೇ ಆಗಿದ್ದಿದ್ದರೆ ಅನಿಲ್ ಮಂಡ್ಯ & ರಾಘು ಶಿವಮೊಗ್ಗ ಬಿಟ್ಟುಬಂದ ಕುಸ್ತಿ ಸಿನಿಮಾದ ನಿರ್ದೇಶನದ ಜವಾಬ್ದಾರಿ ಗಿರ್ ಗಿಟ್ಲೆ ನಿರ್ದೇಶಕ ರವಿಕಿರಣ್ ಪಾಲಾಗಬೇಕಿತ್ತು. ದುನಿಯಾ ವಿಜಯ್ ಜೊತೆ ಕೂತು ಸ್ಕ್ರಿಪ್ಟ್ ಕೆಲಸವನ್ನೂ ಆರಂಭಿಸಿದ್ದರು. ಅದೇನು ಬದಲಾವಣೆಗಳಾದವೋ ಗೊತ್ತಿಲ್ಲ… ಯಾರೂ ಬೇಡ ನಾನೇ ನೋಡ್ಕಂತೀನಿ ಅಂತಾ ವಿಜಿ ʻಸಲಗʼ ಆರಂಭಿಸಿ ಡೈರೆಕ್ಟರ್ ಆದರು. ವರ್ಷಗಟ್ಟಲೆ ಸಮಯ ತೆಗೆದುಕೊಂಡು ರೂಪಿಸಿದ ಗಿರ್ ಗಿಟ್ಲೆ ಬಿಡುಗಡೆಯ ನಂತರ ನಿರ್ಮಾಪಕ ಗಿರೀಶ್ʼಗೆ ಭರ್ತಿ ಸಾಲ ಹೊರಿಸಿತು. ಇತ್ತ ಸಲಗದೊಂದಿಗೆ ಜರ್ನಿ ಮಾಡಲು ಛಾನ್ಸು ಮಿಸ್ ಆಯಿತು. ಈಗ ನೋಡಿದರೆ ಬ್ಲ್ಯಾಕಿಯೂ ಬದುಕುಳಿಯುವ ಲಕ್ಷಣ ಕಾಣುತ್ತಿಲ್ಲ… ರವಿಕಿರಣ್ ಮುಂದೇನು ಮಾಡುತ್ತಾರೋ ಗೊತ್ತಿಲ್ಲ… ನಟ ಮಿತ್ರ ಮತ್ತೆ ಪೋಷಕ ಪಾತ್ರಗಳನ್ನು ಗಿಟ್ಟಿಸಿಕೊಳ್ಳದೇ ಬೇರೆ ವಿಧಿಯಿಲ್ಲ!!
No Comment! Be the first one.