ಪ್ರಥಮ್ ಅಭಿನಯದ ಎರಡನೇ ಚಿತ್ರ ಎಂಎಲ್ಎ ತೆರೆ ಕಂಡಿದೆ. ನಾವೇ ಆಗಾಗ ಕಂಡಿರೋ ಬಿಡಿ ಬಿಡಿಯಾದ ರಾಜಕೀಯ ಸನ್ನಿವೇಷಗಳನ್ನು ಕಥೆಯಾಗಿಸಿ, ಅದಕ್ಕೆ ಪ್ರಥಮ್ಗೆ ಒಪ್ಪುವಂಥಾ ಆಯಾಮಗಳನ್ನು ನೀಡಿ ನಿರ್ದೇಶಕ ಮೌರ್ಯ ಪ್ರೇಕ್ರಕರ ಮುಂದಿಟ್ಟಿದ್ದಾರೆ. ಪ್ರಥಮ್ಗೆ ರಿಯಲ್ ಆಗಿ ಇರೋ ಇಮೇಜಿಗೆ ತಕ್ಕಂಥಾದ್ದೇ ಪಾತ್ರ ಸೃಷ್ಟಿಸುವಲ್ಲಿನ ಜಾಣ್ಮೆಯನ್ನು ಇಡೀ ಚಿತ್ರದಲ್ಲಿಯೂ ಜತನದಿಂದಲೇ ಕಾಯ್ದುಕೊಳ್ಳುವ ಮೂಲಕ ಎಂಎಲ್ಎ ಚಿತ್ರವನ್ನವರು ಕಟ್ಟಿ ಕೊಟ್ಟಿದ್ದಾರೆ.
ರಾಜಕೀಯದ ಬೇಸಿನ ಕಥೆಯೊಂದು ಚಿತ್ರವಾಗುತ್ತದೆ ಅಂದಾಕ್ಷಣವೇ ಜನಸಾಮಾನ್ಯರ ಮನಸಲ್ಲಿಯೂ ಭ್ರಷ್ಟಾಚಾರ, ದುಷ್ಟತನಗಳ ಸಿದ್ಧ ಚಿತ್ರಣವೊಂದು ಮೂಡಿಕೊಳ್ಳುತ್ತದೆ. ಆದರೆ ಇದಕ್ಕೆ ಹೊರತಾದ ಒಂದಷ್ಟು ಹಾಸ್ಯ ಪ್ರವೃತ್ತಿಯ ರಿಯಲ್ ರಾಜಕಾರಣಿಗಳೂ ನಮ್ಮ ನಡುವಿದ್ದಾರೆ. ಅವರ ಮಾತು, ವರ್ತನೆ ಮತ್ತು ಅವರ ಸುತ್ತ ಗಿರಕಿ ಹೊಡೆಯೋ ಕಥಾನಕವಿದೆಯಲ್ಲಾ? ಇಡೀ ಚಿತ್ರವನ್ನು ಅದೇ ಧಾಟಿಯಲ್ಲಿ ಕಟ್ಟಿ ಕೊಡಲಾಗಿದೆ.
ಒಂದು ಚಿತ್ರ ಅಂತ ನೋಡಿದರೂ ಪ್ರಥಮ್ನನ್ನು ಗಂಭೀರವಾಗಿ ಕಲ್ಪಿಸಿಕೊಳ್ಳೋದು ಕಷ್ಟ. ಆ ಸೂಕ್ಷ್ಮತೆಯನ್ನು ಅರಿತು ಪಾತ್ರ ಸೃಷ್ಟಿಸಿರೋದು ಈ ಚಿತ್ರದ ಪ್ಲಸ್ ಪಾಯಿಂಟ್. ಪ್ರಥಮ್ ಇಡೀ ಪಾತ್ರ ಅವರ ರಿಯಲ್ ವ್ಯಕ್ತಿತ್ವ, ಹಾವಭಾವಗಳಿಗೆ ತಕ್ಕುದಾಗಿಯೇ ಸಾಗುತ್ತದೆಯಾದ್ದರಿಂದ ನಟನೆಯ ಪ್ರಶ್ನೆ ಗೌಣವಾಗುತ್ತೆ. ಅದು ತನ್ನ ಪಾಡಿಗೆ ತಾನು ಸಹಜವೆಂಬಂತೆ ಕಲುಷಿತಗೊಂಡಿರೋ ರಾಜಕೀಯ ವ್ಯವಸ್ಥೆ. ಅದರೊಳಗೆ ಶುದ್ಧಹಸ್ತನಾದ, ತನ್ನನ್ನು ಗೆಲ್ಲಿಸಿದ ಜನರಿಗೆ ಒಳ್ಳೆಯದನ್ನೇ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿ ಹೊಂದಿರೋ ಯುವಕನೋರ್ವ ಪ್ರವೇಶಿಸುತ್ತಾನೆ. ಆದರೆ ಒಳ್ಳೆ ಉದ್ದೇಶ ಹೊಂದಿರೋ ಆತನಿಗೆ ಸಾಕಷ್ಟು ಕಂಟಕ, ಸವಾಲುಗಳೇ ಎದುರಾಗುತ್ತವೆ. ಅದನ್ನೆಲ್ಲ ಆತ ಲವಲವಿಕೆಯಿಂದ, ಹಾಸ್ಯ ಪ್ರಜ್ಞೆಯ ಮೂಲಕವೇ ಹಾದು ಹೋಗುತ್ತಾನೆ. ಅದು ಹೇಗೆ, ಆತ ಗುರಿ ತಲುಪುತ್ತಾನಾ ಎಂಬುದು ನಿಜವಾದ ಕುತೂಹಲ.
ಹಾಗಂತ ಇದು ಬರೀ ರಾಜಕೀಯದಾಟಕ್ಕೆ ಸೀಮಿತವಾದ ಚಿತ್ರ ಅಂದುಕೊಳ್ಳಬೇಕಿಲ್ಲ. ಇದರ ನಡುವೆಯೇ ಒಂದು ಪ್ರೇಮಕಥೆ ಅರಳಿಕೊಳ್ಳುತ್ತದೆ. ಕಥೆ ಸಾಗುತ್ತಾ ಫ್ಯಾಮಿಲಿಯತ್ತಲೂ ಹೊರಳಿಕೊಳ್ಳುತ್ತದೆ. ಪ್ರಥಮ್ ರಿಯಲ್ಲಿನಂತೆಯೇ ರೀಲಲ್ಲಿಯೂ ಸಿಕ್ಕಾಪಟ್ಟೆ ಮಾತಾಡಿದ್ದಾರೆ. ಸೋನಲ್ ಮಂತೇರೋ ನಾಯಕಿಯಾಗಿ ಪ್ರಥಮ್ಗೆ ಸಾಥ್ ನೀಡುತ್ತಲೇ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರೇಖಾ ಇಲ್ಲಿ ಖಡಕ್ಕು ರಾಜಕಾರಣಿಯಾಗಿ ನಟಿಸಿದ್ದಾರೆ. ಕುರಿಪ್ರತಾಪ್ ಆಗಾಗ ಮಾತಿನ ಓಘದಿಂದ ವಿಚಲಿತರಾದ ಪ್ರೇಕ್ಷಕರನ್ನು ಹಾಸ್ಯದಿಂದ ರಂಜಿಸಿ ಮತ್ತೆ ಕಥೆಯೊಳಗೆ ತಂದು ಬಿಡುತ್ತಾರೆ.
ಇದೆಲ್ಲದರ ಜೊತೆಯಲ್ಲಿ ಒಂದಷ್ಟು ಕೊರತೆಗಳಿದ್ದರೂ ಪ್ರಥಮ್ರನ್ನು ಇಷ್ಟಪಡೋ ಮಂದಿಗದು ದೊಡ್ಡದೆನ್ನಿಸಲಿಕ್ಕಿಲ್ಲ. ಒಟಾರೆಯಾಗಿ ವೆಂಕಟೇಶ ರೆಡ್ಡಿ ನಿರ್ಮಾಣದ ಈ ಚಿತ್ರ ಪೊಲಿಟಿಕಲ್ ಮೆಲೋಡ್ರಾಮವೊಂದನ್ನು ಬೇರೆಯದ್ದೇ ಜಾಡಿನಲ್ಲಿ ಅನಾವರಣಗೊಳಿಸೋ ಉದ್ದೇಶ ಹೊಂದಿರುವಂತಿದೆ.
#
No Comment! Be the first one.