ಈ ಹಿಂದೆ ’ವೆಳ್ಳೈಕಾರನ್’ ತಮಿಳು ಚಿತ್ರದಲ್ಲಿ ಶಿವಕಾರ್ತಿಕೇಯನ್ ಮತ್ತು ನಯನತಾರಾ ಜೋಡಿಯಾಗಿ ಮಿಂಚಿದ್ದರು. ಇದೀಗ ’ಮಿಸ್ಟರ್ ಲೋಕಲ್’ನಲ್ಲಿ ಮತ್ತೆ ಇಬ್ಬರೂ ಜೋಡಿಯಾಗಿ ನಟಿಸುತ್ತಿದ್ದಾರೆ. ’ಒರು ಕಲ್ ಒರು ಕನ್ನಡಿ’ ಸಿನಿಮಾ ಖ್ಯಾತಿಯ ಎಂ.ರಾಜೇಶ್ ನಿರ್ದೇಶನದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ತನ್ನ ಏರಿಯಾದಲ್ಲಿ ’ಮಿಸ್ಟರ್ ಲೋಕಲ್’ ಎಂದೇ ಕರೆಸಿಕೊಳ್ಳುವ ಮನೋಹರ್ (ಶಿವಕಾರ್ತಿಕೇಯನ್) ಮತ್ತು ಮೀಡಿಯಾ ಕಂಪನಿಯ ಸಿಇಒ ಕೀರ್ತನಾ ವಾಸುದೇವನ್ (ನಯನತಾರಾ) ಮಧ್ಯೆಯ ಜಟಾಪಟಿ ಟ್ರೈಲರ್ ಉದ್ದಕ್ಕೂ ಕಾಣಿಸುತ್ತದೆ. ಕೆಳವರ್ಗದ ಮನೋಹರ್ ಮತ್ತು ಮೇಲ್ವರ್ಗ ಕುಟುಂಬದ ಯುವತಿ ಕೀರ್ತನಾರ ಕೋಳಿಜಗಳವೇ ಇಲ್ಲಿ ಹೆಚ್ಚಾಗಿದ್ದು, ಚಿತ್ರದ ಕತೆ ಬಗ್ಗೆ ಸೂಚನೆ ಸಿಗುವುದಿಲ್ಲ.
ರಜನೀಕಾಂತ್ ಅಭಿನಯದ ’ಮನ್ನನ್’ ತಮಿಳು ಚಿತ್ರದ ಪ್ರೇರಣೆ ಈ ಚಿತ್ರಕ್ಕಿದೆಯಂತೆ. ಇದೊಂದು ಫ್ಯಾಮಿಲಿ ಎಂಟರ್ಟೇನರ್ ಎನ್ನುತ್ತಾರೆ ನಿರ್ದೇಶಕ ರಾಜೇಶ್. ಯೋಗಿ ಬಾಬು, ರಾಧಿಕಾ ಶರತ್ಕುಮಾರ್, ಯೂಟ್ಯೂಬ್ ಸ್ಟಾರ್ ಹಾರಿಜಾ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಸಂಗೀತ ಸಂಯೋಜನೆ ಹಿಪ್ಹಾಪ್ ತಮಿಝಾ ಅವರದು. ಇನ್ನು ಈ ವರ್ಷ ಶಿವಕಾರ್ತಿಕೇಯನ್ ಅವರ ಮತ್ತೆರೆಡು ಚಿತ್ರಗಳು ತೆರೆಕಾಣಲಿವೆ. ’ಇರುಂಬು ಥಿರೈ’ ಸಿನಿಮಾ ಖ್ಯಾತಿಯ ನಿರ್ದೇಶಕ ಮಿತ್ರನ್ ಅವರ ಒಂದು ಸಿನಿಮಾ ಅಲ್ಲದೆ ದುಬಾರಿ ಬಜೆಟ್ನ ಸೈಂಟಿಫಿಕ್ ಫಿಕ್ಷನ್ನಲ್ಲೂ ಶಿವಕಾರ್ತಿಕೇಯನ್ ನಟಿಸುತ್ತಿದ್ದಾರೆ. ನಯನತಾರಾ ಅವರ ’ಐರಾ’ ಮತ್ತು ’ಕೊಲೈಯಿಥಿರ್ ಕಾಲಮ್’ ತಮಿಳು ಚಿತ್ರಗಳು ತೆರೆಗೆ ಸಿದ್ಧವಾಗಿವೆ.
No Comment! Be the first one.