ಥೇಟರಿಗೆ ಬಂದ ಪ್ರತೀ ಪ್ರೇಕ್ಷಕರೊಳಗೂ ಅಮೋಘವಾದ ಖುಷಿ, ಭರಪೂರ ಮನೋರಂಜನೆ ಸಿಕ್ಕ ತೃಪ್ತಿ ಮೂಡಿಸಬೇಕು… ಇಂಥಾದ್ದೊಂದು ಉದ್ದೇಶವನ್ನೇ ಆತ್ಮವಾಗಿಸಿಕೊಂಡ ಅದೆಷ್ಟೋ ಚಿತ್ರಗಳು ಗೆದ್ದಿವೆ. ನಾಳೆ ಬಿಡುಗಡೆಗೊಳ್ಳಲಿರೋ ಪ್ರವೀಣ್ ಭೂಷಣ್ ನಿರ್ದೇಶನದ, ಫಣಿ ಭೂಷಣ್ ನಿರ್ಮಾಣದ ಮುಂದಿನ ಬದಲಾವಣೆ ಚಿತ್ರ ಕೂಡಾ ಆ ಸಾಲಿನಲ್ಲಿಯೇ ಇರುವಂತಿದೆ!
ಮುಂದಿನ ಬದಲಾವಣೆ ಎಂಬುದು ಸಿನಿಮಾ ಪ್ರೇಮಿಗಳಿಗೆ ಚಿರಪರಿಚಿತವಾದ, ಚಿತ್ರಮಂದಿರಗಳಿಗೆ ಹತ್ತಿರಾದ ಪದ. ಈ ಚಿತ್ರದ ತಿರುಳೂ ಕೂಡಾ ಅದಕ್ಕೆ ತಕ್ಕುದಾಗಿರೋದರಿಂದಲೇ ನಿರ್ದೇಶಕ ಪ್ರವೀಣ್ ಈ ಶೀರ್ಷಿಕೆಯನ್ನ ಆಯ್ಕೆ ಮಾಡಿಕೊಂಡಿದ್ದಾರಂತೆ. ಹಾಗಾದರೆ ಈ ಚಿತ್ರ ಯಾವ ಜಾನರಿನದ್ದು, ಕಥೆ ಏನಿದೆ ಎಂಬಂಥಾ ಕುತೂಹಲ ಶುರುವಾಗಿ ಬಹಳಷ್ಟು ಕಾಲವೇ ಕಳೆದಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ನಿರ್ದೇಶಕರು ಈ ಕುರಿತಾದ ಒಂದಷ್ಟು ಮಜವಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ. ತಾಜಾತನಗಳಿಂದ ಕೂಡಿದ ದೃಷ್ಯ ಕಟ್ಟ ಬೇಕೆಂಬ ಆಸೆ ಹೊಂದಿದ್ದ ಪ್ರವೀಣ್ ಅದಕ್ಕೆ ತಕ್ಕುದಾಗಿಯೇ ಇಡೀ ಚಿತ್ರವನ್ನು ರೂಪಿಸಿದ್ದಾರಂತೆ. ಇಲ್ಲಿನ ದೃಷ್ಯಗಳು ಅದೆಷ್ಟು ಸಹಜ ಮತ್ತು ಸುಂದರವಾಗಿವೆಯೆಂದರೆ, ಮರೆಯಲ್ಲೆಲ್ಲೋ ಕ್ಯಾಮರಾ ಇಟ್ಟು ಶೂಟ್ ಮಾಡಿದ್ದಾರೇನೋ ಎಂಬಂಥಾ ಆಹ್ಲಾದ ಪ್ರೇಕ್ಷಕರಿಗೆ ಸಿಗುವಂತಿದೆಯಂತೆ. ಇದು ಸ್ಕ್ರೀನ್ ಪ್ಲೇಯನ್ನೇ ಆತ್ಮವಾಗಿಸಿಕೊಂಡಿರೋ ಪ್ರಯತ್ನ. ಕಥೆಗಿಂತಲೂ ಸ್ಕ್ರೀನ್ಪ್ಲೇಗೆ ಹೆಚ್ಚು ಒತ್ತು ಕೊಟ್ಟಿರೋ ನಿರ್ದೇಶಕರು ಅದರಲ್ಲಿ ಹೊಸಾ ಪ್ರಯತ್ನಗಳನ್ನು ಮಾಡಿದ್ದಾರೆ. ಪ್ರತೀ ಸೀನುಗಳಲ್ಲಿಯೂ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಾ ಭರ್ಜರಿ ಮನೋರಂಜನೆ ನೀಡೋದೇ ಈ ಚಿತ್ರದ ಪ್ರಧಾನ ಉದ್ದೇಶ.
ಒಂದಷ್ಟು ಕಲಾತ್ಮಕ ಟಚ್ ಇರೋ ಶೀರ್ಷಿಕೆಯ ಕಾರಣದಿಂದ ಇದು ಬೇರೆ ಥರದ ಚಿತ್ರ ಅಂದುಕೊಳ್ಳಬೇಕಿಲ್ಲ. ಮುಂದಿನ ಬದಲಾವಣೆ ಪಕ್ಕಾ ಕಮರ್ಶಿಯಲ್ ಅಂಶಗಳೊಂದಿಗೇ ಅಣಿಗೊಂಡಿದೆ. ಹುಡುಗ ಹುಡುಗೀರದ್ದೊಮದು ಗ್ಯಾಂಗು ಕಾಲೇಜಿಗೆ ಮಾಸ್ ಬಂಕ್ ಹಾಕಿ ಚಿತ್ರ ಮಂದಿರಕ್ಕೆ ಹೋದಾಗ ಯಾವ್ಯಾವ ಘಟನೆಗಳು ನಡೆಯುತ್ತವೆಂಬುದರ ಸುತ್ತಾ ಯುವ ಸಮೂಹಕ್ಕೆ ಹತ್ತಿರಾದ ಕಥನವನ್ನು ಈ ಚಿತ್ರ ಹೊಂದಿದೆ. ಇತ್ತೀಚೆಗಂತೂ ಥೇಟರುಗಳು ಸಾಲು ಸಾಲಾಗಿ ನೆಲಸಮ ಗೊಳ್ಳುತ್ತಿವೆ. ಈ ಮೂಲಕ ಒಂದು ಸಿನಿಮಾ ಸಂಸ್ಕೃತಿಯೇ ಸರ್ವನಾಶವಾಗುತ್ತಿವೆ. ಮಲ್ಟಿಫ್ಲೆಕ್ಸುಗಳ ಅಬ್ಬರ ಥೇಟರುಗಳ ಗಾಂಧಿ ಕ್ಲಾಸಿನ ಸಂಭ್ರಮವನ್ನೇ ನುಂಗಿ ಹಾಕುತ್ತಿದೆ. ಇಂಥಾ ಸೂಕ್ಷ್ಮ ಸಂಗತಿಗಳನ್ನೂ ಬೇರೆಯದ್ದೇ ತೆರನಾಗಿ ದಾಖಲಿಸಲಾಗಿರೋ ಈ ಚಿತ್ರದ್ದು ಪಕ್ಕಾ ಕಮರ್ಶಿಯಲ್ ಹಾದಿ.
ಇದು ಪ್ರವೀಣ್ ನಿದೇಶನದ ಮೊದಲ ಚಿತ್ರ. ಗುಬ್ಬಿಯ ನಿಟ್ಟೂರಿನವರಾದ ಪ್ರವೀಣ್ ಪಾಲಿಗೆ ಸಿನಿಮಾ ರಂಗವೆಂಬುದು ಮೊದಲ ಕನಸು. ಏನಾದರೂ ಪರವಾಗಿಲ್ಲ. ಆದರೆ ಚಿತ್ರರಂಗದ ಭಾಗವಾಗಬೇಕೆಂಬ ಹಂಬಲದಿಂದಿದ್ದ ಅವರ ಪಾಲಿಗೆ ಹಾಡೊಂದನ್ನು ಬರೆಯೋ ಅವಕಾಶ ಕೊಟ್ಟವರು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ಕೋಮಲ್ ನಟಿಸಿದ್ದ ರಾಧನ ಗಂಡ ಚಿತ್ರಕ್ಕೆ ಹಾಡು ಬರೆಯೋ ಮೂಲಕ ಅಡಿಯಿರಿಸಿದ್ದ ಪ್ರವೀಣ್ ಆ ಬಳಿಕ ಮಹೇಶ್ ಸುಖಧರೆ ಮುಂತಾದ ನಿರ್ದೇಶಕರ ಗರಡಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಸಿಂಪಲ್ ಸುನಿ ಅವರೊಂದಿಗೂ ಕಾರ್ಯ ನಿರ್ವಹಿಸಿ ಅನುಭವ ಪಡೆದ ಅವರ ಪಾಲಿಗೆ ಮುಂದಿನ ಬದಲಾವಣೆ ಎಂಬುದು ಮೊದಲ ಕನಸು. ಅದು ನಾಳೆ ಅನಾವರಣಗೊಳ್ಳಲಿದೆ.
#