ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ ಕೆಲವರು ಟೈಟಲ್ ಮೂಲಕವೇ ಗಮನ ಸೆಳೆಯುತ್ತಾರೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ `ಮುಂದಿನ ಬದಲಾವಣೆ’!
ಸಿರಪ್ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಫಣಿ ಭೂಷಣ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಪ್ರವೀಣ್ ಭೂಷಣ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರವನ್ನು ಕೆಲಸ ಕಾರ್ಯಗಳ ಮೂಲಕವೇ ಪಡೆಯಬೇಕೆಂಬ ಸೂತ್ರವನ್ನು ನೆಚ್ಚಿಕೊಂಡಿರುವ ಚಿತ್ರ ತಂಡ ಸುಸೂತ್ರವಾಗಿ ಚಿತ್ರೀಕರಣ ಮುಗಿಸಿಕೊಂಡು, ಡಬ್ಬಿಂಗ್ ಅನ್ನೂ ಪೂರೈಸಿಕೊಂಡು ಬಿಡುಗಡೆಗಾಗಿ ಮುಹೂರ್ತ ಹುಡುಕಲಾರಂಭಿಸಿದೆ.
ಪ್ರವೀಣ್ ಭೂಷಣ್, ಸಂಗೀತಾ, ಸತೀಶ್, ಪಂಚಗೌರಿ, ಆರ್ಯನ್, ಚಕ್ರವರ್ತಿ, ಮಾಲಾಶ್ರೀ ಮುಂತಾದವರ ತಾರಾಗಣ ಹೊಂದಿರೋ ಈ ಚಿತ್ರ ಯಾವ ಥರದ್ದೆಂಬ ಬಗ್ಗೆ ಪ್ರೇಕ್ಷಕರೇ ಕುತೂಹಲಗೊಂಡಿದ್ದಾರೆ. ಆದರೆ ಚಿತ್ರತಂಡ ಕಥೆಯ ಬಗೆಗಿನ ಯಾವ ಅಂಶವನ್ನು ಬಿಟ್ಟು ಕೊಡದೇ ಗೌಪ್ಯತೆ ಕಾಪಾಡಿಕೊಂಡಿದೆ. ಮುಂದಿನ ಬದಲಾವಣೆ ಎಂಬುದು ಹಾಸ್ಯ ಪ್ರಧಾನವಾದ ಚಿತ್ರ ಎಂಬುದೊಂದೇ ಸುಳಿವು ಸದ್ಯಕ್ಕೆ ಹೊರ ಬಿದ್ದಿದೆ.
ಟೈಟಲ್ಲಿನಂತೆಯೇ ಭಿನ್ನವಾದ ಕಥೆಯೊಂದನ್ನು ಈ ಚಿತ್ರ ಹೊಂದಿದೆಯಂತೆ. ಈಗ ಟೈಟಲ್ ಕಾರಣದಿಂದಲೇ ಗಮನ ಸೆಳೆದಿರೋ ಈ ಚಿತ್ರ ಮುಂದೆ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯೊಂದಕ್ಕೆ ನಾಂದಿ ಹಾಡಲಿದೆಯಾ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
#
No Comment! Be the first one.