ಲೇಡಿ ಡಾಕ್ಟರ್ ಮತ್ತು ಆಕೆಯ ಸುತ್ತ ಸುತ್ತುವ ಹೊಟೇಲ್ ನಡೆಸುವ ಹುಡುಗ, ಬ್ಯಾಂಡ್ ಬಾಯ್ ಜೊತೆಗೆ ಲಿವಿನ್ ರಿಲೇಷನ್ನಿನಲ್ಲಿರುವ ಫ್ರೀಲಾನ್ಸ್ ಜರ್ನಲಿಸ್ಟ್. ಪ್ರಾಮಾಣಿಕ ಎಂಎಲ್ಎ, ಅಪ್ರಾಮಾಣಿಕ ಕಂಟ್ರಾಕ್ಟರ್, ಒಬ್ಬ ಪೊಲೀಸ್ ಅಧಿಕಾರಿ, ಕಿತ್ತು ಹೋದ ಸ್ತೆ ರಿಪೇರಿ ಮಾಡಿಸುವ ಸೀನಿಯರ್ ಸಿಟಿಜ಼ನ್, ಅವರ ಜೊತೆ ಮೂವರು ಹುಡುಗರು… – ಇಷ್ಟು ಜನರ ನಡುವೆ ಕಂಟ್ರಾಕ್ಟರ್ ಕೊಲೆಯಾಗಿ ಬೀಳುತ್ತಾನೆ.
ಕೊಲೆಯ ಜಾಡು ಹಿಡಿದು ತನಿಖೆ ಆರಂಭಿಸಲು ಎಸಿಪಿ ಬಾಲನಾಗಿ ಎಂಟ್ರಿ ಕೊಡೋದು ಆದಿತ್ಯ. ಇಷ್ಟು ಪಾತ್ರಗಳಲ್ಲಿ ಕಂಟ್ರಾಕ್ಟರನ್ನು ಕೊಂದವರು ಯಾರು? ಆತನ ಜೀವ ತೆಗೆಯುವುದರ ಉದ್ದೇಶ ಯಾವುದು? ಡಾಕ್ಟರ್ ಏನಾಗುತ್ತಾಳೆ? ಜರ್ನಲಿಸ್ಟ್ ಎಲ್ಲಿ ಸಿಕ್ಕಿಕೊಂಡಿದ್ದಾಳೆ? ಅಂತೆಲ್ಲಾ ಹುಡುಕಹೊರಟ ಎಸಿಪಿಯ ಮುಂದೆ ಭಿನ್ನ ಆಯಾಮಗಳು ತೆರೆದುಕೊಳ್ಳುತ್ತವೆ. ಡ್ರಗ್ ಮಾಫಿಯಾದ ಸ್ಮೆಲ್ಲು ರಾಚುತ್ತದೆ. ತಾಯಿಯನ್ನು ಉಳಿಸಿಕೊಳ್ಳಲು ಕಿರಾತಕರ ಜೊತೆ ಕೈಜೋಡಿಸುವ ಹುಡುಗನ ವಿಚಾರ ಎದುರಾಗುತ್ತದೆ.
ʻಕೆಟ್ಟವರಿಗೆ ಕೆಲವರು ಮಾತ್ರ ಶತ್ರುಗಳು.. ಅದೇ ಒಳ್ಳೇವ್ರಿಗೆ ಕೆಟ್ಟೋರೆಲ್ಲಾ ಶತ್ರುಗಳು…ʼ ಅಂತಾ ಚಿತ್ರದಲ್ಲಿ ಬಳಸಿರುವ ಸಂಭಾಷಣೆ ಕಥೆಯಲ್ಲೂ ಪ್ರತಿಫಲಿಸಿದೆ. ಉತ್ತಮ ಕೆಲಸ ಮಾಡಲು ಮುಂದಾದ ಯಾರೇ ಆದರೂ ಅನ್ಯಾಯ, ಅನಾಚಾರಗಳಿಗೆ ಎದೆಯೊಡ್ಡಬೇಕಾಗುತ್ತದೆ. ಏನೇನೂ ಗೊತ್ತಿಲ್ಲದ ಅಮಾಯಕರ ಕೈಗಳಿಗೂ ಕೆಲವೊಂದು ಸಂದರ್ಭ ರಕ್ತ ಮೆತ್ತಿಬಿಡುತ್ತದೆ.
ಆದರೆ, ಸತ್ತ ಕೇಡುಗನಿಗಾಗಿ ಯಾರನ್ನೋ ಅಪರಾಧಿಗಳನ್ನಾಗಿಸುವುದು ಎಸಿಪಿಯ ಮನಸ್ಸಿಗೊಪ್ಪುವುದಿಲ್ಲ. ಹೀಗಾಗಿ ದುಷ್ಟರನ್ನು ಕೊನೆಗಾಣಿಸುವುದರ ಜೊತೆಗೆ ಒಳ್ಳೆಯವರನ್ನು ರಕ್ಷಿಸುವುದು ತನಿಖಾಧಿಕಾರಿಯ ಪರಮ ಗುರಿ. ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನು ತಿಳಿಯಲು ʻಮುಂದುವರೆದ ಅಧ್ಯಾಯʼವನ್ನು ನೋಡಲೇಬೇಕು. ಮನುಷ್ಯ ಸತ್ತನಂತರ ಅವನ ಕತೆ ಮುಗಿಯೋದಿಲ್ಲ. ಅವನು ಮಾಡಿರುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಅಧ್ಯಾಯವಾಗಿ ಮುಂದುವರೆಯುತ್ತದೆ. ಆ ಅಧ್ಯಾಯದಿಂದ ಕಥೆಗಳ ಜೊತೆಗೆ ಪಾತ್ರಗಳೂ ಹುಟ್ಟುತ್ತವೆ ಅನ್ನೋದನ್ನು ನಿರ್ದೇಶಕ ಬಾಲು ಚಂದ್ರಶೇಖರ್ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ.
ಮೊದಲ ಭಾಗದಲ್ಲಿ ಬಿಡಿ ಬಿಡಿ ದೃಶ್ಯಗಳು ಬಂದು ಹೋಗುವುದರಿಂದ ವಿರಾಮಕ್ಕೆ ಮೊದಲೇ ಪ್ರೇಕ್ಷಕರಿಗೆ ಅಲ್ಲೀತನಕ ಆದ ವಿಚಾರಗಳನ್ನು ನಿರೂಪಣೆಯ ಮೂಲಕ ವಿವರಿಸುತ್ತಾರೆ. ಮತ್ತೆ ಕ್ಲೈಮ್ಯಾಕ್ಸಿನಲ್ಲಿ ಕೂಡಾ ನೋಡುಗರು ಗೊಂದಲಕ್ಕೊಳಗಾಗದಂತೆ ಫೈನಲ್ ಥಿಯರಿ ಮಂಡಿಸುತ್ತಾರೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ತಮ್ಮ ಕಾಡಿನ ಕಥೆಗಳು ಮತ್ತು ಅಲ್ಲಿನ ಪಾತ್ರಗಳನ್ನು ಪರಿಚಯಿಸಲು ಬಳಸುತ್ತಿದ್ದ ಶೈಲಿಯನ್ನು ಇಲ್ಲಿ ಬಾಲು ಚಂದ್ರಶೇಖರ್ ತಮ್ಮ ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿಯ ಸಬ್ಜೆಕ್ಟನ್ನು ಹೇಳಲು ಬಳಸಿದಂತಿದೆ. ಈ ಕಾರಣದಿಂದ ಕಥೆ ಸಂಕೀರ್ಣಗೊಳ್ಳುವ ಅಪಾಯದಿಂದ ಪಾರಾಗಿ ಸರಳವಾಗಿ ಮನಮುಟ್ಟುತ್ತದೆ. ಮೊದಲ ಭಾಗದಲ್ಲಿ ಹಿನ್ನೆಲೆ ಸಂಗೀತ ಯಾಕೋ ಮ್ಯಾಚ್ ಆಗುತ್ತಿಲ್ಲ ಅಂತಾ ಫೀಲ್ ಹುಟ್ಟಿಸಿದರೆ, ದ್ವಿತೀಯಾರ್ಧದಲ್ಲಿ ಅದನ್ನು ಮರೆಸುವಂತೆ ಹೊಸಾ ಪ್ರಯೋಗ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ಘಟಿಸಿದ್ದೋ ಅಥವಾ ದೋಷವೋ ಗೊತ್ತಾಗುವುದಿಲ್ಲ.
ದೊರೆದ ಸಲಕರಣೆಗಳಲ್ಲಿ ದಿಲೀಪ್ ಚಕ್ರವರ್ತಿ ಅಚ್ಚುಕಟ್ಟಾಗಿ ಛಾಯಾಗ್ರಹಣ ಮಾಡಿದ್ದಾರೆ. ಆದಿತ್ಯ, ಆಶಿಕ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಚಂದನ ಗೌಡ ಮುಂತಾದವರ ನಡುವೆ ಹೆಚ್ಚು ಗಮನ ಸೆಳೆಯುವುದು ಸಂದೀಪ್ ಕುಮಾರ್ ನಟನೆ. ಮೀಡಿಯಾ ಹಿನ್ನೆಲೆ ಹೊಂದಿರುವ ಸಂದೀಪ್ ಚೆಂದದ ನಟನೆ, ಹೊಸ ಶೈಲಿಯ ಡೈಲಾಗ್ ಡೆಲಿವರಿಯಿಂದ ಅಚ್ಛರಿ ಮೂಡಿಸಿದ್ದಾರೆ. ಹ್ಯಾಂಡ್ಸಮ್ ವಿಲನ್ ಶೋಭನ್ ಶೋಭಿ ಭಾರತೀಯ ಚಿತ್ರರಂಗದಲ್ಲಿ ತಲೆಯೆತ್ತಿನಿಲ್ಲುವ ವಿಲನ್ ಅನ್ನೋದು ಮುಂದುವರೆದ ಅಧ್ಯಾಯದ ಪಾತ್ರದ ಮೂಲಕ ಜಾಹೀರಾಗಿದೆ… ಕಡಿಮೆ ಮಾತುಗಳನ್ನಾಡಿ, ಅಭಿನಯದ ಮೂಲಕವೇ ಪಾತ್ರವನ್ನು ಎತ್ತಿ ಹಿಡಿದ ಕೀರ್ತಿ ಆದಿತ್ಯಗೆ ಸಲ್ಲುತ್ತದೆ.
ಇಲ್ಲಿ ಹೀರೋ ಮೊದಲುಗೊಂಡು ಯಾವ ಪಾತ್ರವೂ ಅತಿರಂಜಿಸುವುದಿಲ್ಲ. ಮಾಮೂಲಿ ಕಮರ್ಷಿಯಲ್ ಸಿನಿಮಾದಂತೆ ಆರಂಭದಿಂದ ಕೊನೇವರೆಗೂ ಹೀರೋ ಪಾತ್ರ ತೆರೆಯನ್ನು ಡಾಮಿನೇಟ್ ಕೂಡಾ ಮಾಡಿಲ್ಲ. ಅಷ್ಟಕ್ಕೂ ಚಿತ್ರದಲ್ಲಿ ಆದಿತ್ಯ ಕ್ಯಾರೆಕ್ಟರ್ ಎಂಟ್ರಿ ಕೊಡೋದೂ ಸ್ವಲ್ಪ ಲೇಟಾಗೇ… ಅಲ್ಲಿಗೆ ನಿರ್ದೇಶಕರ ಗಮನ ಕಥೆ ಮತ್ತು ನಿರೂಪಣೆ ಕಡೆಗೆ ಅನ್ನೋದು ಪಕ್ಕಾ ಆಗುತ್ತದೆ.
ಕಾಡುವ ಕಥೆಯನ್ನಿಟ್ಟುಕೊಂಡು, ಅದರ ಸುತ್ತ ಪಾತ್ರಗಳನ್ನು ಸೃಷ್ಟಿಸಿ, ಅವಶ್ಯಕತೆಗಿಂತ ಹೆಚ್ಚು ವೈಭವೀಕರಿಸದೇ ಸಿನಿಮಾ ಕಟ್ಟಿಕೊಡಬಲ್ಲ ನಿರ್ದೇಶಕರ ಅಗತ್ಯ ಕನ್ನಡ ಚಿತ್ರರಂಗದಲ್ಲಿದೆಯಲ್ಲಾ? ಆ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಬಾಲು ಚಂದ್ರಶೇಖರ್ ನೀಡಿದ್ದಾರೆ. ಮುಂದುವರೆದ ಅಧ್ಯಾಯವನ್ನು ಒಮ್ಮೆಯಾದರೂ ನೋಡಿ. ಖಂಡಿತಾ ಚಿತ್ರ ನಿಮ್ಮ ಮನಸ್ಸಿನಲ್ಲುಳಿಯುತ್ತದೆ….
No Comment! Be the first one.