ಅದು ೧೯೮೩ರ ವರ್ಷ. ಮಲ್ಲೇಶ್ವರ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಸಿನಿಮಾ ಮುಹೂರ್ತ ನಡೆದಿತ್ತು. ಅತ್ತ ಲೈಟ್ಸ್ ಆನ್, ಆಕ್ಷನ್ ಹೇಳಿ ಕ್ಲಾಪ್ ಮಾಡಿದ ತಕ್ಷಣ ಆ ಹುಡುಗ ಕ್ಯಾಮೆರಾ ಮುಂದೆ ಮೊದಲ ದೃಶ್ಯದಲ್ಲಿ ನಟಿಸಿದ. ಎಲ್ಲರೂ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಆ ಹುಡುಗನ ಮುಖದಲ್ಲಿ ಮಂದಹಾಸ… ಹೀಗೆ ಮೊದಲ ಟೇಕ್ ಓಕೆ ಆಗುತ್ತಿಂದ್ದಂತೇ ಅಲ್ಲಿ ನೆರೆದಿದ್ದವರ ಮಧ್ಯೆಯಿದ್ದ ಕಿಡಿಗೇಡಿಯೊಬ್ಬ `ಏನೋ ಕರಿಯಾ ನೀನಾ ಹೀರೋ’ ಅಂತಾ ಜೋರಾಗಿ ಕೂಗಿಬಿಟ್ಟ. ಒಂದೇ ಒಂದು ಕ್ಷಣದಲ್ಲೇ ಅರಳಿನಿಂತಿದ್ದ ಆ ಹುಡುಗನ ಮುಖ ಸಪ್ಪಗೆ ಬಾಡಿತು… ಅದೇ ಸಂದರ್ಭದಲ್ಲೇ ಆತನ ಮನಸ್ಸಿನಲ್ಲಿ `ನಾನು ಕಪ್ಪಗಿದ್ದರೇನು? ಹೀರೋ ಆಗಿ ದೊಡ್ಡ ಹೆಸರು ಮಾಡಬೇಕು’ ಎಂಬ ಛಲ ಮೂಡಿತ್ತು.
ಅದೇ ಹಠಕ್ಕೆ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಮೆಟ್ಟಿಲಾಗಿಸಿಕೊಂಡು ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲೆ ದೊಡ್ಡ ಹೆಸರು ಮಾಡಿದ ಆ ಕಪ್ಪು ಹುಡುಗನ ಹೆಸರು ಮುರಳಿ. ಕನ್ನಡದ ಧೀಮಂತ ನಿರ್ದೇಶಕ, ಬಂಗಾರದ ಮನುಷ್ಯ ಸಿದ್ದಲಿಂಗಯ್ಯನವರ ಪುತ್ರ ಈತ. ಮುರಳಿಯನ್ನು ನೆನೆದಾಕ್ಷಣ ಕಣ್ಣೆದುರಿಗೆ ಬರುವುದು ಅದ್ಭುತ ಕಾಂತಿಯ ಕಪ್ಪು ಮೊಗ. ಅದರ ತುಂಬಾ ನಗೆ, ಮನಕಲಕುವ ಮನೋಜ್ಞ ಅಭಿನಯ…
ಆಗಿನ್ನೂ ಕನ್ನಡ ಚಿತ್ರರಂಗದ ಬೇರು ಮದ್ರಾಸಿನಲ್ಲೇ ಇದ್ದುದರಿಂದ ಸಿದ್ದಲಿಂಗಯ್ಯನವರ ಕುಟುಂಬ ಕೂಡಾ ಅಲ್ಲೇ ನೆಲೆ ಕಂಡುಕೊAಡಿತ್ತು. ಹೀಗಾಗಿ ಮುರಳಿ ಹುಟ್ಟಿ ಬೆಳೆದದ್ದೆಲ್ಲಾ ಮದ್ರಾಸಿನಲ್ಲೇ. ಐದನೇ ತರಗತಿಯ ತನಕ ತಮಿಳು ಮೀಡಿಯಂನಲ್ಲೇ ಓದಿದ ಮುರಳಿ ನಂದರ ಬೆಂಗಳೂರಿನಲ್ಲಿ ಆರರಿಂದ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸ ಮುಂದುವರೆಸಿದರು.
೧೯೮೩ರಲ್ಲಿ ಪ್ರೇಮಪರ್ವ ಚಿತ್ರದಿಂದ ನಾಯಕನಟನಾದ ಮುರಳಿ ನಂತರ ಅಜೇಯ, ಪ್ರೇಮಗಂಗೆ, ಅಜಯ್‌ವಿಜಯ್, ಸಂಭವಾಮಿ ಯುಗೇ ಯುಗೇ ಚಿತ್ರಗಳಲ್ಲಿ ನಟಿಸಿದ್ದರು. ಆ ಹೊತ್ತಿಗಾಗಲೇ ಕನ್ನಡದಿಂದಲೇ ಹೋಗಿ ಸೂಪರ್ ಸ್ಟಾರ್ ಆಗಿದ್ದ ರಜನಿಕಾಂತ್ ಅಲೆ ತಮಿಳುನಾಡಿನಲ್ಲಿ ಜೋರಾಗಿದ್ದರಿಂದ ಮತ್ತು ಅವರಂತೆಯೇ ಈತ ಕೂಡಾ ಕಪ್ಪಗಿದ್ದುದರಿಂದ ತಮಿಳಿನಲ್ಲೂ ನಟಿಸುವ ಅವಕಾಶ ಮುರಳಿ ಪಾಲಿಗೆ ಒದಗಿಬಂದಿತ್ತು.
ಅಮೀರ್‌ಜಾನ್ ನಿರ್ದೇಶಿಸಿದ್ದ `ಪೂವಿಲಂಗು’ ಚಿತ್ರದಿಂದ ಮುರಳಿ ತಮಿಳಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟರು. ನಂತರ ಕನ್ನಡ ಚಿತ್ರಗಳತ್ತ ತಿರುಗಿಯೂ ನೋಡದಷ್ಟು ಬ್ಯುಸಿಯಾಗಿಬಿಟ್ಟರು. ೨೦೦೬ರಲ್ಲಿ ಬಂದ ಪಾಸ ಕಿಳಿಗಳ್’ ತನಕ ಮುರಳಿಯ ಸಿನಿಮಾ ಓಟ ನಿಂತೇ ಇರಲಿಲ್ಲ. ನಂತರದ ದಿನಗಳಲ್ಲಿ ಹೊಸಬರ ಅಲೆಯಲ್ಲಿ ಅವಕಾಶಗಳೇ ಮರೀಚಿಕೆಯಾಗತೊಡಗಿದವು. ಹೀಗಾಗಿ ಕೊರಗಿಗೆ ಬಿದ್ದ ಮುರಳಿಯ ಕುಡಿತ ದಿನೇ ದಿನೇ ಅತಿಯಾಗ ತೊಡಗಿತು.
ಇದೇ ವೇಳೆಗೆ ಮಗ ಅಥರ್ವ ಕೂಡಾ ಕೈಗೆ ಬಂದಿದ್ದರಿಂದ ಆತನನ್ನು ಚಿತ್ರರಂಗಕ್ಕೆ ಪರಿಚಯಿಸುವುದು ಮುರಳಿ ಕನಸಾಗಿತ್ತು. ಅದೂ ತನ್ನಂತೆಯೇ ತನ್ನ ಮಗ ಕೂಡಾ ಕನ್ನಡ ಚಿತ್ರರಂಗದಿಂದಲೇ ಆರಂಗ್ರೇಟ್ರಂ ಮಾಡಬೇಕು ಎಂಬುದೂ ಅವರ ಬಯಕೆಯಾಗಿತ್ತು. ಆದರೆ ತಮಿಳಿನಲ್ಲಿ ಅವಕಾಶ ಒದಗಿಬಂದಿದ್ದರಿಂದ `ವಾನ ಕಾತ್ತಾಡಿ’ ಚಿತ್ರದ ಮೂಲಕ ಆತ ನಟನೆಗೆ ಇಳಿದ. ಈ ಚಿತ್ರ 2010ರ ಆಗಸ್ಟ್ ಆರರಂದು ಬಿಡುಗಡೆಯಾಗಬೇಕಿತ್ತು.
ಈ ಸಿನಿಮಾ ಬಿಡುಗಡೆಗೆ ಮುನ್ನ ಬೆಂಗಳೂರಿಗೆ ಬಂದು ಇಲ್ಲಿನ ಸಿನಿಮಾ ಪತ್ರಕರ್ತರನ್ನೆಲ್ಲಾ ಕರೆಸಿ ತನ್ನ ಮಗನನ್ನು ತುಂಬ ಹೆಮ್ಮೆಯಿಂದ ಪರಿಚಯಿಸಿದ್ದರು ಮುರಳಿ. ಅಕ್ಟೋಬರ್ ವೇಳೆಗೆ ಕನ್ನಡದಲ್ಲಿ ನನ್ನ ಮಗನಿಗಾಗಿ ನಾನೇ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದೇನೆ. ಅದರ ಎಲ್ಲ ಸಿದ್ದತೆಗಳೂ ನಡೆಯುತ್ತಿವೆ ಎಂದು ಮುರಳಿ ಆತ್ಮವಿಶ್ವಾಸದ ಮಾತುಗಳಾಡಿ ಹೋಗಿದ್ದರು. ಆದರೆ ಮಗನ ಸಿನಿಮಾ ಬಿಡುಗಡೆಗೂ ಮುಂಚೆಯೇ ಮುರಳಿ ಕಣ್ಣು ಮುಚ್ಚಿ ಮಲಗಿಬಿಟ್ಟರು..
ಮುರಳಿಯ ನಿಧನದ ನಂತರ ಅವರ ಮಗ ಅಥರ್ವನ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿತು. ಇವತ್ತಿಗೆ ಅಥರ್ವ ತಮಿಳಿನ ಪ್ರಮುಖ ಹೀರೋಗಳಲ್ಲಿ ಒಬ್ಬನಾಗಿದ್ದಾನೆ.
ಮುರಳಿ ಅವರ ಬಗ್ಗೆ ಈಗ ಇಷ್ಟೆಲ್ಲಾ ಹೇಳಲೂ ಕಾರಣ ಇದೆ. ಅವರ ಎರಡನೇ ಮಗ ಆಕಾಶ್ ಮುರಳಿ ಕೂಡಾ ನಾಯಕನಟನಾಗಿ ಸಿನಿಮಾರಂಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಯುವ ನಿರ್ದೇಶಕ ವಿಷ್ಣುವರ್ಧನ್ ನಿರ್ದೇಶನದ ಚಿತ್ರ ಇನ್ನೇನು ಆರಂಭಗೊಳ್ಳಲಿದೆ. ಈ ಹೊತ್ತಿನಲ್ಲಿ ಮುರಳಿ ಇದ್ದಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ?
Leave a Reply
You must be logged in to post a comment.