ಎ.ಆರ್. ಮುರುಗದಾಸ್ ಭಾರತೀಯ ಚಿತ್ರರಂಗದ ದೊಡ್ಡ ನಿರ್ದೇಶಕ. 2001ರಲ್ಲಿ ತೆರೆಕಂಡ ತಮಿಳಿನ ದೀನ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಕಾಲಿಟ್ಟವರು ಮುರುಗದಾಸ್. ಆ ನಂತರ ರಮಣ, ಗಜಿನಿ, ಸ್ಟಾಲಿನ್, ಏಳಾಮ್ ಅರಿವು, ತುಪಾಕಿ,ಕತ್ತಿ, ಸ್ಪೈಡರ್, ಸರ್ಕಾರ್, ದರ್ಬಾರ್ ತನಕ ನಿರ್ದೇಶಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಈ ಹೊತ್ತಿಗೆ ವಿಜಯ್ ಜೊತೆಗೆ ನಾಲ್ಕನೇ ಸಿನಿಮಾ ಸೆಟ್ಟೇರಬೇಕಿತ್ತು. ಈ ಚಿತ್ರದ ಕೆಲಸಗಳೂ ಆರಂಭವಾಗಿದ್ದವು. ಅಷ್ಟರಲ್ಲಿ ಹೀರೋ ವಿಜಯ್ ಜೊತೆಗೆ ಕಥೆ ವಿಚಾರದಲ್ಲಾದ ಮನಸ್ತಾಪದಿಂದ ಈ ಪ್ರಾಜೆಕ್ಟಿನಿಂದ ಮುರುಗದಾಸ್ ಹೊರಬಂದರು.  ಎರಡು ಮೂರು ಬಾರಿ ಫೈನಲ್ ಸ್ಕ್ರಿಪ್ಟ್ ರೀಡಿಂಗ್ ಕೊಟ್ಟ ನಂತರವೂ ಸ್ಕ್ರೀನ್ ಪ್ಲೇನಲ್ಲಿ ಪದೇ ಪದೇ ಬದಲಾವಣೆ ಮಾಡಲು ವಿಜಯ್ ಸೂಚಿಸುತ್ತಿದ್ದರಂತೆ. ಅದಾಗಲೇ ವಿಜಯ್ ಜೊತೆ ಕೆಲಸ ಮಾಡಿ ಮೂರು ಹಿಟ್ ಸಿನಿಮಾ ಕೊಟ್ಟಿದ್ದ ಮುರುಗದಾಸ್ʼಗೆ ಇದು ಸರಿಕಂಡಿರಲಿಲ್ಲ. ಇಷ್ಟೊಂದು ಬದಲಾವಣೆ ಮಾಡಿಕೊಂಡು ನಿಮಗಾಗಿ ಸಿನಿಮಾ ಮಾಡುವ ಅಗತ್ಯವಿಲ್ಲ ಅಂತಾ ತಿರಸ್ಕರಿಸಿ ಬಂದಿದ್ದರು.

ಅಜಿತ್, ವಿಜಯ್, ಅಮೀರ್ ಖಾನ್, ಚಿರಂಜೀವಿ, ಮಹೇಶ್ ಬಾಬು, ರಜನೀಕಾಂತ್ ತನಕ ಇಂಡಿಯಾದ ಸಾಕಷ್ಟು ಸೂಪರ್ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿರುವ ಮುರುಗದಾಸ್ ಈ ಬಾರಿ ಯಾವ ಹೀರೋ ಇಲ್ಲದ ಅನಿಮೇಷನ್ ಸಿನಿಮಾ ಮಾಡುವ ಮನಸು ಮಾಡಿದ್ದಾರೆ. ಬಹುಶಃ ವಿಜಯ್ ಜೊತೆಗೆ ತಕಾರುಗಳಾಗಿದ್ದೇ ಇದಕ್ಕೆ ಕಾರಣವಿರಬಹುದು. ಹೀರೋಗಳ ಜೊತೆ ಹೆಣಗಾಡುವುದು ಬೇಡ ಎಂದು ತೀರ್ಮಾನಿಸಿರುವ ಮುರುಗದಾಸ್ ಅನಿಮೇಷನ್ ಮೂಲಕ ಕೋತಿಯನ್ನು ಸೃಷ್ಟಿಸಿ ಅದನ್ನೇ ಹೀರೋ ಮಾಡಲಿದ್ದಾರಂತೆ. ರಾಜಮೌಳಿ ನೊಣವನ್ನಿಟ್ಟುಕೊಂಡು ಸಿನಿಮಾ ಮಾಡಿ ಗೆದ್ದರಲ್ಲಾ? ಹಾಗಿರಬಹುದು!

ಮುರುಗದಾಸ್ ಹಾಲಿವುಡ್ಡಿನ ಲಯನ್ ಕಿಂಗ್ ಮಾದರಿಯ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಎಲ್ಲ ಭಾಷೆಗಳಿಗೂ ಹೊಂದುವಂತೆ ತಯಾರಿ ಮಾಡಲಿದ್ದಾರೆ ಅನ್ನೋದು ನಿಜ. ಈ ಚಿತ್ರವನ್ನು ನಿರ್ಮಿಸಲು ಡಿಸ್ನಿ ಸಂಸ್ಥೆ ಜೊತೆ ಮಾತುಕತೆಗಳಾಗಿವೆಯಂತೆ. ಈದು ಗ್ರಾಫಿಕ್ಸ್‌ ಮೂಲಕವೇ ರೂಪುಗೊಳ್ಳುವ ಸಿನಿಮಾ ಆಗಿದ್ದು, ಮುರುಗದಾಸ್‌ ಆ ಚಿತ್ರಕ್ಕೆ ಸಂಬಂಧಪಟ್ಟಂತೆ ತಮ್ಮ ಪಾಲಿನ ಕೆಲಸ ಮುಗಿಸಿಟ್ಟಿದ್ದಾರಂತೆ.

ಈಗ ಪ್ಯಾನ್‌ ಇಂಡಿಯಾ ಸಿನಿಮಾಗಾಗಿ ಮುರುಗದಾಸ್‌ ಸ್ಕ್ರಿಪ್ಟ್‌ ರೆಡಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹೀರೋ ಆಗಿ ನಟಿಸಲಿದ್ದಾರಂತೆ. ಕೆ.ಜಿ. ಎಫ್ ಚಿತ್ರದ ನಿರ್ಮಾಪಕ,  ಹೊಂಬಾಳೆ ಫಿಲಂಸ್‌ ನ ವಿಜಯ್‌ ಕಿರಗಂದೂರು ಬಂಡವಾಳ ಹೂಡಲಿರುವುದು ಬಹುತೇಕ ಖಚಿತ. ಕಳೆದ 2020ರ  ಡಿಸೆಂಬರ್ 14ರ ಸೋಮವಾರದ ದಿನ ವಿಜಯ್ ಕಿರಗಂದೂರು ಅವರೊಂದಿಗೆ  ಚೆನ್ನೈನ ಸ್ಟಾರ್ ಹೊಟೇಲ್ ವೊಂದರಲ್ಲಿ ಮುರುಗದಾಸ್ ಭೇಟಿ ಮೀಟಿಂಗ್‌ ನಡೆದಿತ್ತು. ಆ ಕುರಿತ ವಿವರವನ್ನು ಸಿನಿಬಜ಼್ ಪ್ರಕಟಿಸಿತ್ತು. ಅಂದು ಹಲವು ತಾಸುಗಳ ಈ ಸುದೀರ್ಘ ಸಮಾಲೋಚನೆಯಲ್ಲಿ ಮಹತ್ತರವಾದ ಪ್ರಾಜೆಕ್ಟ್ ಬಗ್ಗೆ  ಇವರಿಬ್ಬರೂ ಚರ್ಚಿಸಿದ್ದರು.

ಯಶ್‌ ಈಗ ಕರ್ನಾಟಕ ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲೂ ವರ್ಚಸ್ಸು ಹೊಂದಿದ್ದಾರೆ. ತಮಿಳಿನವರಂತೂ ಯಶ್‌ ಅವರನ್ನು ಕೊಂಡಾಡುತ್ತಿದ್ದಾರೆ. ಅಣ್ತಮ್ಮನನ್ನು ಅವರು ಇಷ್ಟ ಪಡುತ್ತಿರುವ ಪರಿ ನೋಡಿದರೆ ರಜನಿಯಂತೆ ಯಶ್‌ ಅವರನ್ನೂ ದತ್ತು ಪಡೆದುಬಿಡುತ್ತಾರಾ ಅನ್ನೋ ಅನುಮಾನ ಮೂಡುತ್ತಿದೆ. ಸದ್ಯ ಬಂದಿರುವ ಸುದ್ದಿಯ ಪ್ರಕಾರ ಯಶ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಮುರುಗದಾಸ್‌ ನಿರ್ದೇಶಿಸುವುದು ಆಲ್‌ ಮೋಸ್ಟ್‌ ಕನ್ಫರ್ಮ್!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಜೂನ್ 1ಕ್ಕೆ ಟ್ರೇಲರ್​ ಬಿಡುಗಡೆ

Previous article

ಎಲ್ಲಿ ಹೋದರು ಅಣಜಿ ನಾಗರಾಜ್?

Next article

You may also like

Comments

Leave a reply

Your email address will not be published. Required fields are marked *