ಕನ್ನಡ ಚಿತ್ರರಂಗದ ಭಾಗವಾಗಿದ್ದ ಹಿರಿಯರನೇಕರು ಮರೆಯಾದ ನೋವು ಎಲ್ಲರ ಮನಸಲ್ಲೂ ಇದೆ. ಹೀಗೆ ವಯಸ್ಸಾದವರು ಎದ್ದು ಹೋದಾಗ ನೋವು ಕಾಡಿದರೂ ಅದು ಬದುಕಿನ ಸಹಜ ಕ್ರಿಯೆ ಅಂತ ಸಮಾಧಾನ ಪಟ್ಟುಕೊಳ್ಳಲೊಂದು ದಾರಿ ಇರುತ್ತೆ. ಆದರೆ ರಂಗು ರಂಗಿನ ಕನಸು ಕಟ್ಟಿಕೊಂಡಿದ್ದ, ಆಗ ತಾನೇ ಸಾಧನೆಯ ಹಾದಿಗೆ ಹೆಜ್ಜೆಯೂರಿ ಸದ್ದು ಮಾಡಿದ್ದವರೇ ಅಕಾಲ ಮರಣಕ್ಕೀಡಾದರೆ ಅದು ತಡೆಕೊಳ್ಳಲಾಗದ ಸಂಕಟ… ಅಂಥಾದ್ದೊಂದು ಸಂಕಟ ಮತ್ತೆ ಎದುರಾಗಿದೆ; ಪ್ರತಿಭಾವಂತ ಯುವ ಸಂಗೀತ ನಿರ್ದೇಶಕ ಶಂಕರ್ ಅವರು ಅಕಾಲ ಮರಣಕ್ಕೀಡಾಗುವ ಮೂಲಕ.
ಒರಟ ಐ ಲವ್ ಯು , ಬಾಜಿ, ಸಿಹಿಗಾಳಿ, ಮಿಸ್ಟರ್ ಪೈಂಟರ್, ಮೇಸ್ತ್ರಿ ಸೇರಿದಂತೆ ಹದಿನಾಲ್ಕು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಜಿ.ಆರ್.ಶಂಕರ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಒಂದಷ್ಟು ಕಾಲದಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಇತ್ತೀಚೆಗೆ ಕಾಯಿಲೆ ಉಲ್ಬಣಿಸಿತ್ತು. ಕಡೆಗೂ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.