ನಿಮ್ಮನ್ನು ದ್ವೇಷಿಸುತ್ತಿದ್ದವರೇ ನಿಮ್ಮನ್ನೀಗ ಪ್ರೀತಿಯ ರಾಗಾ ಎಂದು ಕರೆಯುತ್ತಿದ್ದಾರೆ. ಇದರಿಂದ ನನಗೂ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದು ಸುಂದರ ಯುವತಿಯೊಬ್ಬಳು ರಾಹುಲ್ ಗಾಂಧಿಗೆ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮುಗುಳ್ನಗುತ್ತಾ ರಾಹುಲ್ ಕಣ್ಹೊಡೆಯುತ್ತಾರೆ. ಇದು ’ಮೈ ನೇಮ್ ಈಸ್ ರಾಗಾ’ ಹಿಂದಿ ಸಿನಿಮಾದ ಟೀಸರ್ನ ಒಂದು ದೃಶ್ಯ. ನಾಲ್ಕು ನಿಮಿಷಗಳ ಸುದೀರ್ಘ ಟೀಸರ್ನಲ್ಲಿ ಇಂತಹ ಹಲವು ಸನ್ನಿವೇಶಗಳು ಕಾಣಿಸುತ್ತವೆ. ರೂಪೇಶ್ ಪೌಲ್ ನಿರ್ದೇಶನದ ಈ ಬಯೋಪಿಕ್ನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ವೈಯಕ್ತಿಕ ಬದುಕಿನ ಹಲವು ಸಂಗತಿಗಳು ಅನಾವರಣಗೊಂಡಿವೆ.
ಚಿತ್ರದಲ್ಲಿ ರಾಹುಲ್ರನ್ನು ವೈಭವೀಕರಿಸುವ ಇಲ್ಲವೇ ವ್ಯಕ್ತಿತ್ವಕ್ಕೆ ಕುಂದು ತರುವಂತಹ ಯಾವುದೇ ಉದ್ದೇಶವಿಲ್ಲ. ವಿರೋಧಿಗಳ ಅಣಕಕ್ಕೆ ಈಡಾಗಿ ನಂತರ ಪುಟಿದೆದ್ದು ಗೆಲುವಿನ ನಗೆ ಬೀರುವ ಪ್ರತಿಯೊಬ್ಬ ವ್ಯಕ್ತಿಯೂ ಇಲ್ಲಿ ತನ್ನನ್ನು ತಾನು ಕಂಡುಕೊಳ್ಳಬಹುದು ಎನ್ನುವ ನಿರ್ದೇಶಕ ಪೌಲ್ ಚಿತ್ರವನ್ನು ರಾಹುಲ್ ಗಾಂಧಿ ಬಯೋಪಿಕ್ ಎಂದು ಕರೆಯಲು ಇಚ್ಛಿಸುವುದಿಲ್ಲ. ’ಮೈ ಮದರ್ಸ್ ಲ್ಯಾಪ್ಟಾಪ್’ ಮತ್ತು ’ಸೈಂಟ್ ಡ್ರ್ಯಾಕುಲಾ ೩ಡಿ’ ಈ ಹಿಂದಿನ ಅವರ ನಿರ್ದೇಶನದ ಚಿತ್ರಗಳು.
ರಾಹುಲ್ ಗಾಂಧಿಯ ಟೀನೇಜ್ ಬದುಕಿನೊಂದಿಗೆ ಟೀಸರ್ ತೆರೆದುಕೊಳ್ಳುತ್ತದೆ. ತನ್ನಜ್ಜಿ, ಅಪ್ಪನ ದುರಂತ ಸಾವುಗಳಿಂದ ನೊಂದ ಯುವಕನಂತೆ ಕಾಣಿಸುವ ರಾಹುಲ್ ತನ್ನ ಸುತ್ತಲಿನ ರಾಜಕೀಯ ಬೆಳವಣಿಗೆಗಳಿಂದ ಗಟ್ಟಿಗೊಳ್ಳುತ್ತಾ ಹೋಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಹೋಲುವ ಪಾತ್ರಗಳು ಟೀಸರ್ನಲ್ಲಿ ಬಂದುಹೋಗುತ್ತವೆ. ಅಶ್ವಿನಿ ಕುಮಾರ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದರೆ, ಹಿಮಂತ್ ಕಪಾಡಿಯಾ ಅವರು ಮೋದಿಯಾಗಿ ಕಾಣಿಸಿಕೊಂಡಿದ್ದಾರೆ. ಮನಮೋಹನ್ ಸಿಂಗ್ ಪಾತ್ರದಲ್ಲಿ ರಾಜು ಖೇರ್ ಇದ್ದಾರೆ. 2009ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಬಯೋಪಿಕ್ ಕೂಡ ಸಿದ್ಧವಾಗುತ್ತಿದ್ದು, ಮತ್ತೊಂದೆಡೆ ರಾಹುಲ್ ಗಾಂಧಿ ಬಯೋಪಿಕ್ ಸುದ್ದಿಯಾಗಿದೆ.
https://youtu.be/aKo0PMRwK7Q #