ಕನ್ನಡ ಚಿತ್ರರಂಗದಲ್ಲಿ  ಈಗ ಸಾಕಷ್ಟು ಹೊಸ ಅಲೆಯ ಚಲನ ಚಿತ್ರಗಳು ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಹೊಸದಾಗಿ ಮೈಲಾಪುರ  ಎನ್ನುವ ಸಿನಿಮಾ ಕೂಡ ಸೇರಿದೆ. ಫಣೀಶ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು, ಅಂದು ಮಹಿಳಾ ದಿನಾಚರಣೆಯಾದ್ದರಿಂದ ಮಹಿಳೆಯರೇ  ಸಮಾರಂಭದ ಕೇಂದ್ರಬಿಂದುವಾಗಿದ್ದರು. ಹಿರಿಯ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಖ್ಯಾತಿಯ ನಾಗೇಂದ್ರ ಅವರ ಪತ್ನಿ ಜಯಲಕ್ಷ್ಮಿ ಹಾಗೂ ಸಾಲುಮರದ ತಿಮ್ಮಕ್ಕ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಪ್ಪು  ಯೂಥ್ ಬ್ರಿಗೇಡ್‍ನ ಮುರಳೀಧರ್, ಲೇಡೀಸ್ ಕ್ಲಬ್‍ನ ಶುಭಾ ಅವರು ಕೂಡ ಇಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಅಂತರಿಕ್ಷ ವಿ. ಅವರ ನಿರ್ಮಾಣದ ಈ ಚಿತ್ರದಲ್ಲಿ ರಿಯಾಲಿಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯೋ ಕಥಾನಕವಿದೆ. ಈ ಸಂದರ್ಭದಲ್ಲಿ  ಮಾತನಾಡಿದ ಫಣೀಶ್ ನಿರ್ಮಾಪಕರು ನನಗೆ ನಾರ್ಮಲ್ ಕಥೆ  ಬಿಟ್ಟು  ಬೇರೆಯದೆ ಕಂಟೆಂಟ್  ಇಟ್ಟುಕೊಂಡು ಚಿತ್ರ ಮಾಡೋಣ ಎಂದು ಹೇಳಿದರು. ಒಂದು ರಿಯಾಲಿಟಿ ಷೋ ಬೇಸ್ ಮಾಡಿಕೊಂಡು ಸ್ಕ್ರಿಪ್ಟ್ ಮಾಡಿದರೆ ಹೇಗಿರುತ್ತೆ ಎಂದುಕೊಂಡಾಗ ಹೊಳೆದದ್ದೇ ಈ ಕಥೆ. ಚಿತ್ರ ಆರಂಭವಾದ ನಂತರ  ಸಾಕಷ್ಟು  ಅಡೆ ತಡೆಗಳುಂಟಾದವು. ಅದೇ ಸಮಯಕ್ಕೆ ಕರೋನಾ ಕೂಡ ಬಂತು, ಚಿತ್ರದಲ್ಲಿ ರಿಯಾಲಿಟಿ  ಟಾಸ್ಕ್, ಜೊತೆಗೆ ಹಾರರ್ ಕೂಡ ಇರುತ್ತದೆ. ಇದರಲ್ಲಿ  ಪಾಲ್ಗೊಳ್ಳಲು ಬರುವ  ಎಲ್ಲರಿಗೂ ಅವರದೇ ಆದ  ಕನಸುಗಳಿರುತ್ತವೆ. ಅದಕ್ಕಾಗಿ ಅವರೆಲ್ಲ ರಿಯಾಲಿಟಿ ಷೋನಲ್ಲಿ  ಭಾಗವಹಿಸುತ್ತಾರೆ. ಅಮ್ಮ ಮಗಳ ಕಥೆಯೂ ಚಿತ್ರದಲ್ಲಿದೆ. ಅಲ್ಲಿ ಬರೋ ಊರೇ ಮೈಲಾಪುರ.

ಬೇಲೂರು, ಮಂಗಳುರು. ಬೆಂಗಳೂರು ಹಾಗೂ ಮಂಡ್ಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ನಾಯಕಿ ತನಗೆ ಗೊತ್ತಿಲ್ಲದೆ  ರಿಯಾಲಿಟಿ ಷೋನಲ್ಲಿ ಪಾಲ್ಗೊಂಡಾಗ ಈ ಮೈಲಾಪುರವನ್ನು ಆಯ್ಕೆ ಮಾಡಿಕೊಂಡಿರುತ್ತಾಳೆ. ಅಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು ಎಂದು ಹೇಳಿದರು.  ನಂತರ ಚಿತ್ರದ  ನಿರ್ಮಾಪಕ ಅಂತರಿಕ್ಷ ಅವರು ಮಾತನಾಡುತ್ತ ಥ್ರಿಲ್ಲರ್, ಸಸ್ಪೆನ್ಸ್  ಜೊತೆಗೆ ಹಾರರ್ ಕಂಟೆಂಟ್ ಕೂಡ ಇರುವ ಚಿತ್ರವಿದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲರೂ ಕುಳಿತು  ನೋಡಬಹುದಾದಂಥ ಕಥೆ ಇದರಲ್ಲಿದೆ, ಒಂದು ಟ್ರೆಂಡ್‍ಸೆಟ್ಟರ್ ಮಾಡೋಣ ಎಂದು ಈ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು.

ಇನ್ನು ಈ ಚಿತ್ರದಲ್ಲಿ   ನಟ ಭರತ್‍ಕುಮಾರ್ ಲವ್ ಫೇಲ್ಯೂರ್ ಆದ ಯುವಕನಾಗಿ ಕಾಣಿಸಿಕೊಂಡಿದ್ದಾರೆ.  ಚಿತ್ರದ ನಾಯಕಿಯಾಗಿ ನಟಿ  ಐಶ್ವರ್ಯ ಸಿಂದೋಗಿ  ಹಾಗೂ ವಿಶೇಷ ಪಾತ್ರದಲ್ಲಿ  ನಿಧಿ ಸುಬ್ಬಯ್ಯ ಅವರು ಕಾಣಿಸಿಕೊಂಡಿದ್ದಾರೆ, ಈ ಸಂದರ್ಭದಲ್ಲಿ  ನಿಧಿ ಸುಬ್ಬಯ್ಯ ಅವರ  ಅಭಿನಯದ ಹಾಡೊಂದನ್ನು ಸಹ ಪ್ರದರ್ಶಿಸಲಾಯಿತು. ಈ ಚಿತ್ರದ ಕಥೆ, ಚಿತ್ರಕಥೆಯನ್ನು ಫಣೀಶ್  ಭಾರದ್ವಾಜ್ ಅವರೇ ರಚಿಸಿದ್ದು, ಆನಂದ್ ಇಳಯರಾಜಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ಲಾರೆನ್ಸ್ ಅಲೆನ್ ಕ್ರಾಸ್ಟಾ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕೃಷ್ಣ ಟಾಕೀಸ್ ಟ್ರೈಲರ್ ಬಂತು…

Previous article

ಟಿಟೌನ್​ನಲ್ಲೇ ಬ್ಯುಜಿಯಾಗ್ತಾರಾ ಪ್ರಶಾಂತ್ ನೀಲ್?

Next article

You may also like

Comments

Leave a reply

Your email address will not be published. Required fields are marked *

More in cbn