ಅದೇನು ದುರಂತವೋ ಗೊತ್ತಿಲ್ಲ. ತಮಿಳಿನ ಹಾಸ್ಯನಟರೆಲ್ಲಾ ಒಬ್ಬರ ಹಿಂದೆ ಒಬ್ಬರು ಕಾಲವಾಗುತ್ತಿದ್ದಾರೆ. ನೆನ್ನೆ ಫೆಬ್ರವರಿ 19ರಂದು ಸುಪ್ರಸಿದ್ದ ಕಾಮಿಡಿ ಕಲಾವಿದ ಮೈಲ್ಸಾಮಿ ಇಹಲೋಕ ತ್ಯಜಿಸಿದ್ದಾರೆ. (57 ವರ್ಷ ವಯಸ್ಸು)
ಸತ್ಯಮಂಗಲ ಮೂಲದ ಮೈಲ್ಸಾಮಿ ಬೆಳೆದಿದ್ದೆಲ್ಲಾ ಕೊಯಮತ್ತೂರಿನಲ್ಲಿ. 1984ರಲ್ಲಿ ಬಂದ ದಾವಣಿ ಕನವುಗಳ್ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದವರು ಮೈಲ್ಸಾಮಿ. ನಂತರ ಪಾಂಡ್ಯರಾಜ ನಿರ್ದೇಶನದ ಕನ್ನಿ ರಾಸಿ ಸಿನಿಮಾದ ದಿನಸಿ ಅಂಗಡಿ ಹುಡುಗನ ಪಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದಾಗುತ್ತಿದ್ದಂತೇ ಪ್ರಭು ನಟನೆಯ ಎನ್ ತಂಗಚ್ಚಿ ಪಡಿಚ್ಚವೊ, ಕಮಲ್ ಹಾಸನ್ ಅವರ ಅಪೂರ್ವ ಸಹೋದರಂಗಳ್, ರಜನೀಕಾಂತ್ ಜೊತೆ ಪಣಕ್ಕಾರನ್ ಸಿನಿಮಾಗಳಲ್ಲಿ ನಟಿಸಿದರು. ಅಷ್ಟರಲ್ಲಾಗಲೇ ಮೈಲ್ಸಾಮಿ ಮಿಳು ಚಿತ್ರರಂಗದ ಕಾಮಿಡಿ ಸ್ಟಾರ್ ಆಗಿ ಪರಿಚಿತಗೊಂಡಿದ್ದರು. ಬಹುತೇಕ ಎಲ್ಲ ಸೂಪರ್ ಸ್ಟಾರ್ ಗಳ ಸಿನಿಮಾಗಳಲ್ಲಿ ನಟಿಸಿದರು.

ಇನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮೈಲ್ಸಾಮಿ ಸನ್ ಟೀವಿಯಲ್ಲಿ ಬರುತ್ತಿದ್ದ ʻಕಾಮಿಡಿ ಟೈಂʼ ಎನ್ನುವ ಜನಪ್ರಿಯ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಕನ್ನಡದಲ್ಲಿ ಇದೇ ಕಾರ್ಯಕ್ರಮವನ್ನು ಆಗ ಗಣೇಶ್ ನಡೆಸಿಕೊಡುತ್ತಿದ್ದದ್ದು.
ಸಿನಿಮಾದ ನಟನೆಯ ಜೊತೆಗೆ ತಮ್ಮ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ರಾಜಕಾರಣಿಗಳು, ಹಣವಂತರ ಬಳಿ ಹಣ ಸಂಗ್ರಹಿಸಿ ಅಶಕ್ತರಿಗೆ ನೀಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು.

ತಮ್ಮ ಮಗ ಅರುಮೈನಾಯಗಂನನ್ನು ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಿಸಬೇಕು ಅಂತಾ ಮೈಲ್ಸಾಮಿ ಕನಸಿಟ್ಟುಕೊಂಡಿದ್ದರು. ಅದು ಈಡೇರುವ ಮುಂಚೆಯೇ ಮೈಲ್ಸಾಮಿ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಎದ್ದು ನಡೆದಿದ್ದಾರೆ.