ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ಮೂಡಿಗೆ ಹೋಗೋದಿದೆ. ಇದೀಗ ನಟಿ ಮೈತ್ರಿಯಾ ಗೌಡ ಅಂಥಾದ್ದೇ ಮೂಡಿನಲ್ಲಿದ್ದಾರೆ!
ಮೈತ್ರಿಯಾಳ ಮುದ್ದಿನ ನಾಯಿ ನಿನ್ನೆ ಜೀವ ತೊರೆದಿದೆ.
ಅಲ್ಲೊಂದು ಇಲ್ಲೊಂದು ಸಿನಿಮಾಗಳು, ಬಗೆ ಬಗೆಯ ಕಾರ್ಯಕ್ರಮಗಳಲ್ಲಿ ಸದಾ ಬ್ಯುಸಿಯಾಗಿರೋ ಮೈತ್ರಿಯಾಗೆ ಇದ್ದ ಏಕೈಕ ರಿಲೀಫೆಂದರೆ ಅವರ ಮುದ್ದಿನ ನಾಯಿ ಕಾಲಬೈರವಿ ಅಲಿಯಾಸ್ ಪಾಪ. ಅವರ ಮನೆ ತುಂಬಾ ಮುದ್ದಾಗಿ ಓಡಾಡಿಕೊಂಡಿದ್ದ ಈ ನಾಯಿಗೆ ಸಾಯುವಂಥಾ ವಯಸೇನೂ ಆಗಿರಲಿಲ್ಲ. ಅದಕ್ಕಿನ್ನೂ ಎಂಟು ವರ್ಷವಷ್ಟೇ. ಆದರೆ ಕಳೆದ ಕೆಲ ದಿನಗಳ ಹಿಂದೆ ಅದು ತುಸು ಮಂಕಾದಂತೆ ಕಂಡು ಬಂದಿತ್ತು. ಸೂಕ್ತ ಔಷದೋಪಚಾರ ಕೊಡಿಸಿದರೂ ಎರಡು ದಿನಗಳಿಂದ ಅಗೋಚರ ಕಾಯಿಲೆಗೆ ಸಿಕ್ಕು ನರಳಿದ ನಾಯಿ ಕಡೆಗೂ ನೆನ್ನೆ ಸಂಜೆ ಹೊತ್ತಿಗೆಲ್ಲಾ ಉಸಿರು ನಿಲ್ಲಿಸಿದೆ.
ಮೈತ್ರಿಯಾ ಖಾಸಗಿಯಾದ ಸುತ್ತಾಟದ ಸಂದರ್ಭದಲ್ಲೆಲ್ಲಾ ತಮ್ಮ ಮುದ್ದಿನ ನಾಯಿಯನ್ನು ತಮ್ಮ ಜೊತೆಗೇ ಕರೆದೊಯ್ಯುತ್ತಿದ್ದರು. ದಿನದ ಶೂಟಿಂಗ್ ಕಾರ್ಯಗಳನ್ನು ಮುಗಿಸಿಕೊಂಡು ವಾಪಾಸಾದ ಮೈತ್ರಿಯಾಳನ್ನು ಮತ್ತೆ ಉಲ್ಲಾಸದಿಂದಿರುವಂತೆ ಮಾಡುತ್ತಿದ್ದದ್ದೂ ಇದೇ ನಾಯಿ. ಅದೇನೇ ಒತ್ತಡಗಳಿದ್ದರೂ ತಮ್ಮ ಮುದ್ದಿನ ನಾಯಿಯೊಂದಿಗೆ ಬಹಳಷ್ಟು ಹೊತ್ತು ಕಳೆಯುತ್ತಿದ್ದ ಮೈತ್ರಿಯಾ ಇದೀಗ ಅದನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
ಅನಾರೋಗ್ಯ ಪೀಡಿತವಾದ ನಾಯಿಯನ್ನು ಬದುಕಿಸಿಕೊಳ್ಳಲು ಹರಸಾಹಸ ಪಟ್ಟು ಕಡೆಗೂ ಉಳಿಸಿಕೊಳ್ಳಲಾರದ ಮೈತ್ರಿಯಾ ತನ್ನ ಮನೆಯ ಸದಸ್ಯರೊಬ್ಬರು ಇನ್ನಿಲ್ಲವೆಂಬಂಥಾ ದುರ್ವಾರ್ತೆಯನ್ನು ಹತ್ತಿರದವರ ಬಳಿಯೆಲ್ಲ ಹಂಚಿಕೊಳ್ಳುವ ಮೂಲಕ ದುಃಖ ತೋಡಿಕೊಂಡಿದ್ದಾರೆ.
#
No Comment! Be the first one.