ಎಂ.ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಾವೇ ಭಾಗ್ಯವಂತರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು. ಈಗಿನ ಕಾಲದ ಯುವಜನತೆ ಕುಡಿತದಂತಹ ದುಶ್ಚಟಕ್ಕೆ ಬಲಿಯಾಗಿ ಹೆತ್ತವರನ್ನು ಹಾಗೂ ಮನೆಯವರನ್ನು ಹೇಗೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ನಾವೇ ಭಾಗ್ಯವಂತರು ಎಂಬ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಎಂ.ಹರಿಕೃಷ್ಣ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡರು, ಚಲನಚಿತ್ರ ನಿರ್ಮಾಪಕರಾದ ಡಾ. ಬೆಂ ಕೋ ಶ್ರೀನಿವಾಸ್ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯರಂತಹ ದಿಗ್ಗಜರೆಲ್ಲಾ ಸೇರಿ ನಾವೇ ಭಾಗ್ಯವಂತರು ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಈ ಚಿತ್ರದ ೩ ಜನ ನಾಯಕರು ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ|| ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್ನಾಗ್ ರವರ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅವರ ಆದರ್ಶಗಳನ್ನು ತಪ್ಪದೇ ಪಾಲಿಸುವ ಈ ಹುಡುಗರಲ್ಲಿರುವ ಕೆಟ್ಟ ಅಭ್ಯಾಸ ಎಂದರೆ ಮದ್ಯಪಾನ ಎನ್ನುವುದನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ಹೇಳಲಾಗಿದೆ. ಹರಿಕೃಷ್ಣ ಮೂಲತಃ ಒಬ್ಬ ಛಾಯಾಗ್ರಾಹಕರು. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
ಸೂರಜ್ ಶ್ರಾವಂತ್, ಲೋಕೇಶ್, ದಿವ್ಯ, ಚಂದನಗೌಡ ಹಾಗೂ ಶಿಲ್ಪ ರವಿ ಈ ಚಿತ್ರದ ನಾಯಕ – ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿದೇವಮ್ಮ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ನಾರಾಯಣಸ್ವಾಮಿ, ರಾಮಕೃಷ್ಣ, ಅಂಜನಪ್ಪ, ಸುಚೇಂದ್ರ ಪ್ರಸಾದ್, ಬೇಬಿ ಕಾರುಣ್ಯ, ಮಿಮಿಕ್ರಿ ರಾಜು ಹೀಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಪಿ.ಬಸವಣ್ಣ ಈ ಚಿತ್ರಕ್ಕೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂ.ಪ್ರಕಾಶ್ ಹಾಗೂ ಹೆಚ್.ಎಸ್. ಅಶ್ವಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹರಿಕೃಷ್ಣ ಮಾತನಾಡಿ ಬೆಂಕೋಶ್ರೀ ಅವರಿಗೆ ಹಾಡನ್ನು ಕೇಳಿಸಿದಾಗ ತುಂಬ ಇಷ್ಟಪಟ್ಟರು. ಮದರ್ ಸೆಂಟಿಮೆಂಟ್ ಸಾಂಗ್ ಕೇಳಿ ನನಗೆ ತುಂಬಾ ತಾಯಿ ನೆನಪಾದರು ಎಂದು ಭಾವುಕರಾದರು. ರಾಜವಿಸ್ಕಿಯಿಂದಾಗುವ ಅನಾಹುತವನ್ನು ಹೇಳುವ ಚಿತ್ರವಿದು. ೩ ಜನ ನಾಯಕರಾದರೂ ಒಂದೊಂದು ಕಥೆ ಇರುತ್ತದೆ. ಈ ೩ ಜನರ ಕಥೆಯಲ್ಲಿ ಮದ್ಯಪಾನದ ದುಷ್ಪರಿಣಾಮ ಹಾಗೂ ತಾಯಿ ಸೆಂಟಿಮೆಂಟ್ ಕಾಮನ್ನಾಗಿದೆ. ಕನ್ನಡ ಚಿತ್ರರಂಗದ ಮೂವರು ದಿಗ್ಗಜರ ಅಭಿಮಾನಿಗಳಾಗಿದ್ದ ಇವರು ಹೇಗೆ ತಮ್ಮ ತಪ್ಪನ್ನು ತಿದ್ದಿಕೊಂಡು ಬದಲಾದವರು ಭಾಗ್ಯವಂತರು ಎನ್ನುವುದೇ ಈ ಚಿತ್ರ ಕಥೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಕೋಶ್ರೀ ಮಾತನಾಡಿ ಈ ಚಿತ್ರರಂಗದಲ್ಲಿ ಶ್ರಮಪಟ್ಟರೆ ಯಾರು ಬೇಕಾದರೂ ಬೆಳೆಯಬಹುದು. ಅದಕ್ಕೆ ನಾನು ಸ್ಪಷ್ಟ ಉದಾಹರಣೆ. ಶಾಂತಲ ಚಿತ್ರಮಂದಿರಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ನಂತರ ವಿತರಕನಾದೆ ನಿರ್ಮಾಪಕನಾದೆ. ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ಕಂಡ ಸಮಾಜದಲ್ಲಿ ನಾನೇನಾದರೂ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಚಿತ್ರರಂಗ ಹಾಗೂ ಮಾಧ್ಯಮಗಳೇ ಕಾರಣ. ಇಲ್ಲಿ ಎಲ್ಲರೂ ಬೆಳೆಯಲು ಅವಕಾಶವಿದೆ. ಚಿನ್ನೇಗೌಡರು ನನಗೆ ತುಂಬಾ ಆತ್ಮೀಯರು. ವಜ್ರೇಶ್ವರಿ ಸಂಸ್ಥೆಯನ್ನು ಬೆಳೆಸಿದವರು. ಈಗ ಫಿಲಂ ಛೇಂಬರ್ಸ್ ಅಧ್ಯಕ್ಷರಾಗಿದ್ದಾರೆ. ಅವರ ಮುಂದೆ ಬಹಳಷ್ಟು ಸಮಸ್ಯೆಗಳಿವೆ ಎಂದು ಹೇಳಿದರು. ನಂತರ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಚಿನ್ನೇಗೌಡರು ಚಿತ್ರದ ಬಗ್ಗೆ ಮಾತನಾಡಿದರು.
#
No Comment! Be the first one.