ವಾರಗಳ ಹಿಂದೆ ತೆರೆ ಕಂಡಿದ್ದ ನಡುವೆ ಅಂತರವಿರಲಿ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಆರಂಭದಲ್ಲಿ ಹೇಳಿಕೊಳ್ಳುವಂಥಾ ಪ್ರಚಾರವಿಲ್ಲದಿದ್ದರೂ ಈ ಚಿತ್ರ ಹಾಡುಗಳ ಮೂಲಕವೇ ಸೌಂಡು ಮಾಡಿತ್ತು. ಪ್ರಚಾರದ ಕೊರತೆಯಾಚೆಗೂ ಕೂಡಾ ಬಾಯಿಂದ ಬಾಯಿಗೆ ಹರಡಿಕೊಂಡ ಒಳ್ಳೆ ಮಾತುಗಳೇ ಈ ಚಿತ್ರವನ್ನು ವಾರದಿಂದ ವಾರಕ್ಕೆ ಟೇಕಾಫ್ ಆಗುವಂತೆ ಮಾಡುತ್ತಿದೆ. ಯುವ ಮನಸುಗಳ ಕಥನ ಹೊಂದಿರೋ ಈ ಚಿತ್ರವನ್ನೀಗ ಕುಟುಂಬ ಸಮೇತರಾಗಿ ಬಂದು ನೋಡುವವರ ಸಂಖ್ಯೆ ಹೆಚ್ಚಿದೆ.
ಇದು ಪ್ರಚಾರದ ದುನಿಯಾ. ಹೀನಾಮಾನ ಪ್ರಚಾರ ಮಾಡಿ ಹೈಪು ಸೃಷ್ಟಿಸಿದ ಚಿತ್ರಗಳು ಗೋತಾ ಹೊಡೆಯುತ್ತವೆ. ಚೆಂದದ ಕಂಟೆಂಟು ಒಳಗೊಂಡು ಅದ್ಭುತವಾಗಿರೋ ಚಿತ್ರಗಳೂ ಪ್ರಚಾರವಿಲ್ಲದೆ ನರಳುತ್ತವೆ. ಅಲ್ಲಿಯೇ ಜೀವ ಚೆಲ್ಲುತ್ತವೆ. ಆದರೆ ನಡುವೆ ಅಂತರವಿರಲಿ ಚಿತ್ರದ ವಿಚಾರದಲ್ಲಿ ಆ ದುರಂತ ಸಂಭವಿಸಿಲ್ಲ. ಬದಲಾಗಿ ಮೊದಲ ದಿನ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರಾಡಿದ ಒಳ್ಳೆ ಮಾತುಗಳು ವ್ಯಾಪಕವಾಗಿ ಹರಡಿಕೊಂಡು ಇದೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ಮೌತ್ ಪಬ್ಲಿಸಿಟಿಯಿಂದಲೇ ಸಾಧ್ಯವಾದ ಗೆಲುವಿಗೆ ಒಂದಷ್ಟು ಚಿತ್ರಗಳು ಸಾಕ್ಷಿಯಂತಿವೆ. ಆ ಸಾಲಿಗೆ ಈ ಚಿತ್ರವೂ ಸೇರಿಕೊಂಡಿದೆ. ಶಿವಮೊಗ್ಗದ ಹುಡುಗ ರವೀನ್ ನಿರ್ದೇಶನದ ಈ ಚಿತ್ರವನ್ನು ನೋಡಿದವರೆಲ್ಲ ಆಡಿರೋದು ಸಕಾರಾತ್ಮಕವಾದ ಮಾತುಗಳನ್ನೇ. ಸಾಮಾನ್ಯವಾಗಿ ಒಂದು ಚಿತ್ರ ನೀಓಡಿದಾಗ ಎಳೆದಂತಿದೆ, ಆ ದೃಷ್ಯ ಬೇಡವಾಗಿತ್ತು ಅಂತೆಲ್ಲ ಅಭಿಪ್ರಾಯ ಬರುತ್ತದಲ್ಲಾ? ಆದರೆ ನಡುವೆ ಅಂತರವಿರಲಿ ಚಿತ್ರದ ಬಗ್ಗೆ ಅಂಥಾ ಒಂದೇ ಒಂದು ರೀಮಾರ್ಕ್ ಕೂಡಾ ಬಂದಿಲ್ಲ. ಬದಲಾಗಿ ಕಾಲೇಜು ಮಟ್ಟದ ಯುವ ಸಮುದಾಯದ ಕಥೆ ಎಲ್ಲರನ್ನೂ ಕಾಡಿದೆ. ಇದರ ಕ್ಲೈಮ್ಯಾಕ್ಸಂತೂ ಕಣ್ಣಂಚು ಒದ್ದೆಯಾಗುವಂತೆಯೂ ಮಾಡಿದೆ.
ಈ ಚಿತ್ರ ಪ್ರೇಕ್ಷಕರನ್ನು ಅದ್ಯಾವ ಪರಿ ಕಾಡಿದೆಯೆಂದರೆ, ಅದೆಷ್ಟೋ ಜನ ಪ್ರೇಕ್ಷಕರು ಥೇಟರುಗಳಲ್ಲಿ ನಂಬರ್ ಪಡೆದು ನಿರ್ದೇಶಕರಿಗೆ ಫೋನಾಯಿಸಿ ಮಾತಾಡುತ್ತಿದ್ದಾರೆ. ಇಂಥಾದ್ದೊಂದು ಚೆಂದದ ಚಿತ್ರ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಆರಂಭದಿಂದಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರಕ್ಕೆ ಸಾಥ್ ನೀಡಿದ್ದರು. ಅದಕ್ಕೆ ಕಾರಣ ಈ ಚಿತ್ರ ರೂಪುಗೊಂಡಿದ್ದ ಅಚ್ಚುಕಟ್ಟಾದ ಶೈಲಿಯೇ ಹೊರತು ಬೇರೇನಲ್ಲ. ಇತ್ತೀಚೆಗಷ್ಟೇ ರಚಿತಾ ರಾಮ್ ಚಿತ್ರವನ್ನು ವೀಕ್ಷಿಸಿ ಥ್ರಿಲ್ ಆಗಿದ್ದಾರೆ. ಡಾಲಿ ಧನಂಜಯ ಕೂಡಾ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಇನ್ನೇನು ಸಾನ್ವಿ ಶ್ರೀವತ್ಸ ಕೂಡಾ ಈ ಚಿತ್ರವನ್ನು ಕಣ್ತುಂಬಿಕೊಳ್ಳಲಿದ್ದಾರೆ. ವಿಶೇಷವೆಂದರೆ ಖಡಕ್ ಪೊಲೀಸ್ ಅಧಿಕಾರಿ ರವಿಚನ್ನಣ್ಣವರ್ ಕೂಡಾ ಇನ್ನೇನು ಈ ಚಿತ್ರವನ್ನು ವೀಕ್ಷಿಸಲಿದ್ದಾರೆ. ಯುವ ಆವೇಗದ ಕಥೆ ಹೊಂದಿ, ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಈ ಚಿತ್ರ ಇದೀಗ ಯಶಸ್ಸಿನತ್ತ ಮುಂದಡಿ ಇಡುತ್ತಿದೆ. ಒಂದೊಳ್ಳೆ ಚಿತ್ರ ಸೋಲಿನ ದವಡೆಯಿಂದ ಪಾರಾಗಿದೆ. ಈ ಚಮತ್ಕಾರ ಕಂಡು ಚಿತ್ರ ತಂಡವೂ ಖುಷಿಗೊಂಡಿದೆ.
#
No Comment! Be the first one.