ಕಥೆಗಾರನಾಗಿ, ಪಾಠ ಹೇಳುವ ಮೇಷ್ಟ್ರಾಗಿ, ಸಿನಿಮಾ ಚಿತ್ರಕತೆ ಬರಹಗಾರನಾಗಿ ನಂತರ ಚಿತ್ರ ನಿರ್ದೇಶಕನಾಗಿ ಹೆಸರು ಮಾಡಿದವರು ನಾಗತಿಹಳ್ಳಿ ಚಂದ್ರಶೇಖರ್. ನಾಗತಿಹಳ್ಳಿ ಕನ್ನಡ ಸಾಹಿತ್ಯ ಕ್ಷೇತ್ರದ ಬಹುಮುಖ್ಯ ಕಥೆಗಾರ ಕೂಡಾ ಹೌದು. ಉಂಡು ಹೋದ ಕೊಂಡು ಹೋದ ಸನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದ ಚಂದ್ರಶೇಖರ್ ಆ ನಂತರ ಕೂಡಾ ಅದ್ಭುತ ಎನಿಸಿಕೊಳ್ಳುವ ಸಿನಿಮಾಗಳನ್ನು ಕೊಟ್ಟವರು. ಬಾ ನಲ್ಲೆ ಮಧು ಚಂದ್ರಕೆ, ಕೊಟ್ರೇಶಿ ಕನಸು ಆಗುತ್ತಿದ್ದಂತೇ, ಆ ಕಾಲಕ್ಕೆ ಜನರ ಕಣ್ಣೆದುರಿಗೆ ಅಮೆರಿಕಾವನ್ನು ತಂದಿಟ್ಟವರು. ಅಮೆರಿಕಾ ಅಮೆರಿಕಾ, ಹೂಮಳೆ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ, ಅಮೃತಧಾರೆಯಂಥಾ ಚೆಂದದ ಸಿನಿಮಾಗಳನ್ನು ನೀಡಿದ ನಾಗತಿಹಳ್ಳಿ ಅದರ ನಡುವೆಯೇ ಸೂಪರ್ ಸ್ಟಾರ್ ಎನ್ನುವ ಗಜಿಬಿಜಿ ಸಿನಿಮಾ ಮಾಡಿ ಪಶ್ಚಾತ್ತಾಪ ಪಟ್ಟುಕೊಂಡಿದ್ದವರು.

ಒಂದಾದ ಮೇಲೊಂದು ಹಿಟ್ ಸಿನಿಮಾಗಳ ಜೊತೆಗೆ ಹೊಸತನವನ್ನೂ ಪರಿಚಯಿಸುತ್ತಿದ್ದ ನಾಗತಿಹಳ್ಳಿ ಅವರ ತಲೆಯಲ್ಲಿನ ಸರಕು ಹಳಸಿದೆ ಅಂತಾ ಗೊತ್ತಾಗಿದ್ದು ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದಲ್ಲಿ. ಅದಾದ ಮೇಲೆ ನಾಗತಿಹಳ್ಳಿಯವರು ನಿರ್ದೇಶಿಸಿದ ಯಾವ ಸಿನಿಮಾವನ್ನೂ ಜನ ಸ್ವೀಕರಿಸಲೇ ಇಲ್ಲ. ಒಲವೇ ಜೀವನ ಲೆಕ್ಕಾಚಾರ, ನೂರೂ ಜನ್ಮಕು, ಬ್ರೇಕಿಂಗ್ ನ್ಯೂಸ್, ಇಷ್ಟಕಾಮ್ಯ ಚಿತ್ರಗಳನ್ನು ಜನ ಸಾರಾಸಗಟಾಗಿ ತಿರಸ್ಕರಿಸಿದರು. ಇನ್ನು ಮೇಷ್ಟ್ರ ಸಿನಿಮಾ ನಿರ್ದೇಶನದಿಂದ ನಿವೃತ್ತಿ ಘೋಷಿಸಬಹುದು ಅಂದುಕೊಳ್ಳುವ ಹೊತ್ತಿಗೇ ಈಗ ‘ಇಂಡಿಯಾ ವರ್ಸಸ್ ಇಂಗ್ಲೆಡ್’ ಎನ್ನುವ ಸಿನಿಮಾವೊಂದು ತೆರೆಗೆ ಬಂದಿದೆ. ವಸಿಷ್ಟ ಸಿಂಹ, ಮಾನ್ವಿತಾ, ಅನಂತ್ ನಾಗ್, ಸುಮಲತಾ ಅಂಬರೀಶ್, ಸಾಧು ಸೇರಿದಂತೆ ಹತ್ತಾರು ಜನ ಹೆಸರುವಾಸಿ ನಟರಿದ್ದರೂ ಕಲೆಕ್ಷನ್ನು ಡಲ್ಲು ಡಲ್ಲು. ಟಗರು ನಂತರ ಚಿಟ್ಟೆ ಅನ್ನೋ ಹೆಸರಿನಲ್ಲೇ ಹೆಸರಾಗಿರುವ ವಸಿಷ್ಠ ಯಾಕಾದರೂ ಈ ಸಿನಿಮಾ ಒಪ್ಪಿಕೊಂಡರೋ ಅನ್ನುವಷ್ಟರ ಮಟ್ಟಿಗೆ ಅವರ ನಸೀಬು ವಕ್ರವಾಗಿದೆ. ಅದಕ್ಕೇ ನಾಗತಿಹಳ್ಳಿ ನೇರ ಹೊಣೆಯಾಗಿದ್ದಾರೆ.

ಒಂದು ಕಾಲಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾಗಳು ರಿಲೀಸಾಗುತ್ತವೆ ಅಂದರೆ ಜನ ಕಾಯುತ್ತಿದ್ದರು. ಈಗ ಕಾಲ ಬದಲಾಗಿದೆ. ಇಂಟರ್ ನೆಟ್ಟಿನ ಮೂಲಕ ಜಗತ್ತೇ ಜನರ ಕೈಲಿದೆ. ಈಗಲೂ ಮತ್ತದೇ ವಿದೇಶದಲ್ಲಿ ನಡೆಯುವ ಕತೆ ಮಾಡಿ, ಟೂರಿಸಂ ಡಾಕ್ಯುಮೆಂಟರಿ ಥರಾ ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ? ಕಡೇ ಪಕ್ಷ ನಾಗತಿಹಳ್ಳಿ ಸಿನಿಮಾ ಬಂದಿದೆ ಅಂತಲಾದರೂ ಜನಕ್ಕೆ ಗೊತ್ತಾದರೆ, ಅವರ ಕಾರಣಕ್ಕಾದರೂ ಜನ ಥಿಯೇಟರಿಗೆ ಹೋಗಬಹುದು. ಈ ಸಲ ಆ ವಿಚಾರದಲ್ಲೂ ಮೇಷ್ಟ್ರು ಸೋತಿದ್ದಾರೆ. ಇಂಥದ್ದೊಂದು ಸಿನಿಮಾ ಬಂದಿದೆ ಅಂತ ಕೂಡಾ ಮಂದಿಗೆ ಗೊತ್ತಾಗಿಲ್ಲ. ಮೊದಲೆಲ್ಲಾ ಮೇಷ್ಟ್ರು ಸಿನಿಮಾ ರಿಲೀಸಾಗುತ್ತದೆ ಅಂದರೆ, ಮೀಡಿಯಾದವರು ಹುಡುಕಿಕೊಂಡು ಹೋಗಿ ಬರೆಯುತ್ತಿದ್ದರು. ವಾರಕ್ಕೆ ಏಳೆಂಟು ಸಿನಿಮಾಗಳು ಬರುತ್ತವೆ; ಹೋಗುತ್ತವೆ. ಇಲ್ಲಿ ಕಂಟೆಂಟು ಸ್ಟ್ರಾಂಗ್ ಇದ್ದರೆ ಮಾತ್ರ ಉಳಿಗಾಲ. ಈಗ ಮೊದಲಿನಂತೆ ಯಾವುದೂ ಇಲ್ಲ. ಹುಡುಕಿಕೊಂಡು ಹೋಗಿ ಪ್ರಚಾರ ಕೊಡುವಷ್ಟು ನಂಬಿಕೆ ನಾಗತಿಹಳ್ಳಿಯಂತಾ ನಿರ್ದೇಶಕರೂ ಉಳಿಸಿಕೊಂಡಿಲ್ಲ!

CG ARUN

ಪ್ರೇಕ್ಷಕರಿಗೆ ಪ್ರೇತದ ಮೇಲೂ ಪ್ರೀತಿ ಹುಟ್ಟುತ್ತದೆ!

Previous article

ಇದು ನಾಯಿ ಸೆಂಟಿಮೆಂಟ್ ಯುಗ!

Next article

You may also like

Comments

Leave a reply

Your email address will not be published. Required fields are marked *