`ನಮ್ ಋಷಿ’ ಎನ್ನುವ ಹೆಸರನ್ನು ನೀವು ಕೇಳಿರಬೇಕು. ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ ಎನ್ನುವ ಹಾಡನ್ನು ಬರೆದ ಎನ್ನುವ ಕಾರಣಕ್ಕೆ ಈತನಿಗೆ ಒಂದಿಷ್ಟು ಪ್ರಚಾರ ಸಿಕ್ಕಿತ್ತು. ಅದು ಬಿಟ್ಟರೆ ಕೊಟ್ಲಲ್ಲಪೋ ಕೈ ಸಿನಿಮಾ ಮಾಡಲು ಹೋಗಿ ಆ ಚಿತ್ರದ ಹೀರೋಯಿನ್ ನಯನಾ ಕೃಷ್ಣಾಳಿಂದ ನಟ್ಟನಡುರಸ್ತೆಯಲ್ಲಿ ಕೆರ ಕಿತ್ತುಹೋಗುವಂತೆ ಒದೆ ತಿಂದು ವಿಶ್ವವಿಖ್ಯಾತಿ ಪಡೆದಿದ್ದ. ಸದ್ಯ ರಾಯಚೂರಿನ ನಾರಬಂಡ ಕೆರೆ ಜಾಗವನ್ನು ನುಂಗಲು ಹೋಗಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಗಾಂಧಿನಗರದ ಜನಕ್ಕೆ ಪರಿಪರಿಯಾಗಿ ನಾಮ ತಿಕ್ಕಿರುವ ಸೈಕೋ ಋಷಿ ಈಗ ಸರ್ಕಾರಿ ಕೆರೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಕಬಳಿಸುವ ಸ್ಕೆಚ್ಚು ರೂಪಿಸಿದ್ದಾನೆ. ಅದು ರಾಯಚೂರು ಜಿಲ್ಲೆ, ಸಿರವಾರ ತಾಲೂಕಿನ ನಾರಬಂಡ ಗ್ರಾಮ. ಕಳೆದ 50 ವರ್ಷಗಳ ಹಿಂದೆ ಋಷಿಯ ತಾಯಿ ಹನುಮಂತಮ್ಮಳಿಗೆ ಸೇರಿದ ಸರ್ವೆ ನಂ 48/1 ಕ್ಕೆ ಸೇರಿದ 7 ಎಕರೆ 20 ಗುಂಟೆ ಭೂಮಿಯನ್ನು ಸರ್ಕಾರ ನಾರಬಂಡ ಕೆರೆಗೆ ಅಭಿವೃದ್ಧಿ ಪಡಿಸಲು ಸ್ವಾಧೀನಪಡಿಸಿಕೊಂಡು, ನೀರಾವರಿಗೆ ಅನುಕೂಲ ಮಾಡಿಕೊಟ್ಟಿತ್ತು. ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಸರ್ಕಾರದ ಹೆಸರಿನಲ್ಲಿ ನೊಂದಾವಣಿ ಮಾಡಿಸಿಕೊಳ್ಳದೇ ಕಂದಾಯ ಇಲಾಖೆ ಯಡವಟ್ಟು ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಋಷಿ ಆ ಜಾಗವನ್ನು ತನ್ನ ಹೆಸರಿಗೆ ಮ್ಯುಟೇಷನ್ ಮಾಡಿಸಿಕೊಳ್ಳಲು ಅರ್ಜಿ ನೀಡಿದ್ದಾನೆ.
ಹನುಮಂತಮ್ಮನ ಜಮೀನು ಮಾತ್ರವಲ್ಲದೆ, ಗ್ರಾಮದ ನಲವತ್ತೈವತ್ತು ಮಂದಿಯ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು, ನಾರಬಂಡ, ಮರಾಠ, ನವಲಕಲ್ ಮಲ್ಲಟ ಮುಂತಾದ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದೆ. ಈ ಕೆರೆಯಿಂದ ಸುತ್ತಮುತ್ತಲಿನ ಗ್ರಾಮಗಳ ಬೋರ್ ವೆಲ್ಲು, ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಅಗಣಿತ ಜನರಿಗೆ ಇದು ಜೀವಜಲವಾಗಿದೆ. ಹೀಗಿರುವಾಗ ಋಷಿ ಏಕಾಏಕಿ ಕೆರೆ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ರೆಡಿಯಾಗಿದ್ದಾನಲ್ಲಾ? ಋಷಿಯ ಅರ್ಜಿಯನ್ನು ತಿರಸ್ಕರಿಸುವಂತೆ ಡಾ. ವಿರೂಪಾಕ್ಷಪ್ಪ ಅವರು ದೂರು ನೀಡಿದ್ದಾರೆ. ಕೆರೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಈ ಕೂಡಲೇ ತಮ್ಮ ಹೆಸರಿಗೆ ನೋಂದಾವಣಿ ಮಾಡಿಕೊಳ್ಳದಿದ್ದರೆ, ಋಷಿಯಂತ ಕ್ರಿಮಿಗಳು ಇಡೀ ಕೆರೆಯನ್ನು ಗುಳುಂ ಸ್ವಾಹ ಮಾಡಲು ಮಾಡಿಕೊಳ್ಳುತ್ತಾರೆ.
ಋಷಿಯ ಹಿನ್ನೆಲೆ : ಹುಚ್ಚ ವೆಂಕ್ಟನ ಅಣ್ಣನಂತಾಡುವ ಋಷಿ ಮಾಡಿದ ಸಿನಿಮಾಗಳಿಗಿಂತಾ ಮಾಡಿಕೊಂಡ ಯಡವಟ್ಟುಗಳೇ ಜಾಸ್ತಿ. ನಮ್ ಋಷಿ ಎನ್ನುವ ಹೆಸರನ್ನಿಟ್ಟುಕೊಂಡು ಗಾಂಧಿನಗರದವರನ್ನು, ಪಾಪದ ಹೆಣ್ಣುಮಕ್ಕಳನ್ನು ಸುಲಿಯಲು ನಿಂತ ಈತನ ನಿಜ ನಾಮಧೇಯ ನಾಗರಾಜ. ಲಡ್ಡು ನಾಗ ಅಂತಲೂ ಜನ ಈತನನ್ನು ಕರೆಯುತ್ತಾರೆ. ರಾಯಚೂರಿನ ಸಿರವಾರ ಈತನ ಹುಟ್ಟೂರು. ಬೆಂಗಳೂರಿನಲ್ಲಿದ್ದ ಚಿಕ್ಕಮ್ಮನ ಮನೆಯಲ್ಲೇ ಬೆಳೆದ ಶ್ರೀಯುತರು ನಂತರ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅಜಯ್ ರಾವ್ ನಟನೆಯ ಸೂರ್ಯ ದಿ. ಗ್ರೇಟ್ ನಿರ್ದೇಶಿಸುವ ಮೂಲಕ ಗಾಂಧೀನಗರಕ್ಕೆ ಒಕ್ಕರಿಸಿಕೊಂಡ ಈತ, ಅದಾದಮೇಲೆ `ಮರುಭೂಮಿ’ ಹೆಸರಿನ ಸಿನಿಮಾವೊಂದನ್ನು ಆರಂಭಿಸಿದ್ದ. ಆ ಸಿನಿಮಾ ರಿಲೀಸೂ ಆಗಲಿಲ್ಲ.
ಆ ಚಿತ್ರಕ್ಕೆ ಈತನೇ ಬರೆದಿದ್ದನೆನ್ನಲಾದ `ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ’ ಹಾಡು ಮಾತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು. ಸಿ. ಅಶ್ವಥ್ ಆ ಹಾಡನ್ನು ಹಾಡಿದ್ದ ಕಾರಣಕ್ಕೆ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ನಿಜ. ಅದಾದ ಮೇಲೆ ಗಾಯಕ ನವೀನ್ ಸಜ್ಜು ಕೂಡಾ ಇದೇ ಹಾಡನ್ನು ಚೆಂದಗೆ ಹಾಡಿ ಅದನ್ನು ಮತ್ತಷ್ಟು ಖ್ಯಾತಿಗೊಳಿಸಿದ.
ಇದೇ ಋಷಿ ಈ ಹಾಡನ್ನೇ ಹೋಲುವಂತಾ ಸಾಕಷ್ಟು ಹಾಡುಗಳನ್ನು ಆಗಾಗ ಗೀಚುತ್ತಿರುತ್ತಾನಾದರೂ `ಒಳಿತು ಮಾಡು’ ಸಾಲುಗಳಷ್ಟು ಅರ್ಥವಾಗಲಿ, ಸಾರವಾಗಲಿ ಯಾವುದರಲ್ಲೂ ಮೂಡಿ ಬಂದಿಲ್ಲ. ಜೊತೆಗೆ ಅದೇ ಪದಗಳನ್ನೇ ಹಿಂದೂ ಮುಂದೂ ಮಾಡಿದಂತಷ್ಟೇ ಕಾಣುತ್ತಿವೆ. ಇದನ್ನೆಲ್ಲಾ ನೋಡಿದರೆ ನಿಜಕ್ಕೂ ಆ ಹಾಡನ್ನು ಈ ಋಷಿಯೇ ಬರೆದಿದ್ದನಾ ಅಥವಾ ಮತ್ಯಾರ ಬಳಿ ಬರೆಸಿ ತನ್ನ ಹೆಸರನ್ನು ಹಾಕಿಕೊಂಡಿದ್ದನಾ ಅನ್ನೋ ಅನುಮಾನ ಸಹಜವಾಗೇ ಮೂಡುತ್ತದೆ. ಒಂದು ಮೂಲದ ಪ್ರಕಾರ ಆ ಹಾಡಿನ ಸಂಗೀತ ಸಂಯೋಜನೆ ಮಾಡಿದ್ದ ಮಧುರಾ ಅವರೇ ಈ ಸಾಲುಗಳನ್ನು ಬರೆದಿದ್ದಂತೆ!
ಯಾವಾಗ ತನ್ನ `ಮರುಭೂಮಿ’ ತೆರೆಮೇಲೆ ಮೂಡಲೇ ಇಲ್ಲವೋ ಈ ಋಷಿ `ಕೊಟ್ಲಲ್ಲಪ್ಪೋ ಕೈ’ ಎನ್ನುವ ಮತ್ತೊಂದು ಸಿನಿಮಾವೊಂದನ್ನು ಆರಂಭಿಸಿದ. ಈ ಸಿನಿಮಾದಲ್ಲಿ ನಟಿಸಿದ್ದ ನಯನಾ ಎಂಬ ಹೆಣ್ಣು ಮಗಳಿಂದ ಹತ್ತು ಲಕ್ಷ ರುಪಾಯಿ ಪೀಕಿಕೊಂಡು ಜೊತೆಗೆ ಕೊಡಬಾರದ ಕಾಟ ಕೊಟ್ಟುಬಿಟ್ಟಿದ್ದ. ಕಡೆಗೊಂದು ದಿನ ರೊಚ್ಚಿಗೆದ್ದ ಆಕೆ ತುಂಬಿದ ಪತ್ರಿಕಾಗೋಷ್ಟಿಯಲ್ಲಿ ಆರಂಭಿಸಿ ಗಾಂಧಿನಗರದ ಬೀದಿ ತನಕ ಅಟ್ಟಾಡಿಸಿಕೊಂಡು ಮೆಟ್ಟುಮೆಟ್ಟಲ್ಲಿ ಹೊಡೆದಿದ್ದಳು. ಏಟು ತಿನ್ನಲಾರದ ಋಷಿ ಆಟೋ ಏರಿ ಎಸ್ಕೇಪ್ ಆಗಿದ್ದ.
ಆಮೇಲೆ ಮತ್ತೆ ಲಡ್ಡು ಋಷಿ ಕಾಣಿಸಿಕೊಂಡಿದ್ದು ನಟಿ ಮೈತ್ರಿಯಾ ಗೌಡ ಕೇಸಿನಲ್ಲಿ. ಸದಾನಂದಗೌಡರ ಮಗನ ವಿಚಾರದಲ್ಲಿ ಮೈತ್ರಿಯಾ ಹೆಸರು ರಾರಾಜಿಸಿತ್ತಲ್ಲಾ? ಆಗ ಈ ಲಡ್ಡು ನಾಗ ಎಲ್ಲಿ ಕುಂತಿದ್ದನೋ? ದಡಕ್ಕನೆ ಎದ್ದು ಬಂದವನೇ `ನಾನು ಮೈತ್ರಿಯಾ ಜೊತೆ ಮದುವೆಯಾಗಿದ್ದೆ. ಆಕೆ ನನಗೆ ಮೋಸ ಮಾಡಿ ಹೋದಳು’ ಅಂತಾ ಟೀವಿ ಚಾನೆಲ್ಲುಗಳಲ್ಲಿ ಬಾಯಿಗೆ ಬಂದಂತೆ ಮಾತಾಡಿದ್ದ. ಇದಾದ ಮೇಲೆ `ಒನ್ ವೇ’ ಅನ್ನೋ ಸಿನಿಮಾವನ್ನು ಶುರು ಮಾಡಿದ. ರಜನೀಕಾಂತ್ ಅವರ ಆತ್ಮಬಂಧು ರಾಜ್ ಬಹದ್ದೂರ್’ರನ್ನು ಕರೆತಂದು ನಟಿಸಲು ನಿಲ್ಲಿಸಿದ. ಒಂದು ಕಾಲದಲ್ಲಿ ರಜನಿಕಾಂತ್ಗೆ ಕಾಸು ಕೊಟ್ಟು ಮದ್ರಾಸಿಗೆ ಕಳಿಸಿದ್ದವರು ರಾಜ್ ಬಹದ್ದೂರ್. ರಜನಿ ಅದೆಷ್ಟೇ ಎತ್ತರಕ್ಕೇರಿದರೂ ಇವತ್ತಿಗೂ ರಾಜ್ ಬಹದ್ದೂರ್ ಜೊತೆಗಿನ ಸ್ನೇಹವನ್ನು ಹಾಗೇ ಕಾಪಾಡಿಕೊಂಡಿದ್ದಾರೆ. ಬೇಜಾರಾದಾಗ ಸೀದಾ ಬೆಂಗಳೂರಿನ ಗುಟ್ಟಳ್ಳಿಯಲ್ಲಿರುವ ರಾಜ್ ಬಹದ್ದೂರ್ ಮನೆಗೆ ಬಂದು, ಗೆಳೆಯನನ್ನು ಕರೆದುಕೊಂಡು ಸುತ್ತಮುತ್ತಲಿನ ಏರಿಯಾಗಳಲ್ಲಿ ಮಾರು ವೇಷದಲ್ಲಿ ತಿರುಗಾಡಿ ಹೋಗುತ್ತಾರೆ.
ಸ್ನೇಹಿತನೊಬ್ಬ ಸ್ಟಾರ್ ಆದರೂ ಅದರ ಖ್ಯಾತಿಯನ್ನು ದುರುಪಯೋಗ ಮಾಡಿಕೊಳ್ಳದ ರಾಜ್ ಬಹದ್ದೂರ್ ಸರಳ ಜೀವನ ನಡೆಸುತ್ತಿರುವ ವ್ಯಕ್ತಿ. ಇಂಥವರಿಗೂ ಲಡ್ಡು ನಾಗ ಅದೇನು ಮರುಳು ಮಾಡಿದನೋ ಏನೋ? ಇಷ್ಟೂ ವರ್ಷ ತಮ್ಮ ಪಾಡಿಗಿದ್ದ ಈವಯ್ಯ ದಿಢೀರನೆ ಬಂದು ಕ್ಯಾಮೆರಾ ಮುಂದೆ ನಟಿಸಲು ಶುರು ಮಾಡಿಬಿಟ್ಟಿತ್ತು. ಅದನ್ನೇ ಬಂಡವಾಳ ಮಾಡಿಕೊಡ ಲಡ್ಡು ನಾಗಿ ಸಿಕ್ಕ ಸಿಕ್ಕಲ್ಲಿ ಹಣ ಎತ್ತಿದ. ಉಮೇಶ್ ಎನ್ನುವವವರಿಂದಲೂ ಗೆಬರಿದ. ಚೆಕ್ ಬೌನ್ಸ್ ಕೇಸು ಜಡಿದು ಒಳಕ್ಕೆ ತಳ್ಳಿಸಿದರು. ಹೀಗೆ ಜೈಲು ಸೇರಿದವನು ಇಪ್ಪತ್ತು ಸಾವಿರ ರುಪಾಯಿ ಜಾಮೀನು ಕೊಟ್ಟು ಹೊರಬರಲೂ ಆಗದಂತೆ ಪರಪ್ಪನ ಅಗ್ರಹಾರದಲ್ಲಿ ಕೊಳೆಯುತ್ತಿದ್ದ.
ಈತ `ಒಳಿತು ಮಾಡು ಮನುಸ’ ಹಾಡು ಬರೆದವನಂತೆ ಅಂತಾ ಗೊತ್ತಾಗಿದ್ದೇ ಯಾರೋ ಪುಣ್ಯಾತ್ಮನೊಬ್ಬ ಜಾಮೀನು ಕೊಟ್ಟು ಹೊರಗೆ ಕರೆತಂದಿದ್ದ. ಒಂಭತ್ತು ಲಕ್ಷ ಅಮೌಂಟು ಕೊಟ್ಟು ಲಹರಿ ಆಡಿಯೋದವರು ಇವನಿಂದ ಹಾಡಿನ ಹಕ್ಕು ಪಡೆದರು ಅನ್ನೋ ಮಾಹಿತಿ ಕೂಡಾ ಇದೆ. ಇತ್ತ ಇವನ ಒನ್ ವೇ ಸಿನಿಮಾ ರಿಲೀಸಾಗಿ, ನಾಲ್ಕು ಜನ ಕೂಡಾ ಥೇಟರೊಳಗೆ ಬರಲಿಲ್ಲ. ದರಿದ್ರವಾಗಿದ್ದ ಚಿತ್ರವನ್ನು ನೋಡಿ ವಿಮರ್ಶೆ ಬರೆದ ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಅವಾಜು ಹಾಕಲು ಹೋಗಿ ಛೀಮಾರಿ ಹಾಕಿಸಿಕೊಂಡಿದ್ದ.
ಇಂಥ ಹತ್ತು ಹಲವು ಹೀನ ಚರಿತ್ರೆ ಹೊಂದಿರುವ ಲಡ್ಡು ನಾಗ ಅಲಿಯಾಸ್ ಋಷಿಯಿಂದ ರಾಯಚೂರಿನ ಕೆರೆಯನ್ನು ಕಾಪಾಡಬೇಕಿರುವುದು ಸರ್ಕಾರಿ ಅಧಿಕಾರಿಗಳ ಸದ್ಯದ ಜವಾಬ್ದಾರಿ!
No Comment! Be the first one.