ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ನಿನಗಾಗಿ ಚಿತ್ರದ ಯಶಸ್ವೀ ಜೋಡಿ ರಾಧಿಕಾ ಮತ್ತು ವಿಜಯರಾಘವೇಂದ್ರ ನಟನೆಯ ಮತ್ತೊಂದು ಸಿನಿಮಾ ಈ ಹೊತ್ತಿಗೆ ತೆರೆಗೆ ಬರಬೇಕಿತ್ತು. ಚೆಲುವೆ ನಿನ್ನೇ ನೋಡಲು, ಫೇರ್ & ಲವ್ಲಿ, ಮಿಸ್ಸಿಂಗ್ ಬಾಯ್ ನಂಥಾ ಸಿನಿಮಾಗಳನ್ನು ಕೊಟ್ಟವರು ನಿರ್ದೇಶಕ ರಘುರಾಮ್. ಕಳೆದ ಐದು ವರ್ಷಗಳ ಹಿಂದೆ ರಾಧಿಕಾ ಮತ್ತು ವಿಜಯ ರಾಘವೇಂದ್ರ ನಟನೆಯ ಸಿನಿಮಾವೊಂದನ್ನು ಆರಂಭಿಸಿದ್ದರು. ಅದು ನಮಗಾಗಿ!
ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಹಾಡುಗಳು, ಫೈಟ್, ಟಾಕಿ ಸೇರಿದಂತೆ ಒಂದಿಷ್ಟು ಚಿತ್ರೀಕರಣ ಕೂಡಾ ಮುಗಿದಿತ್ತು. ನಿರ್ಮಾಪಕರ ಸಮಸ್ಯೆಯಿಂದ ಸಿನಿಮಾ ಅರ್ಧಕ್ಕೇ ನಿಂತು ಹೋಯಿತು. ನಿರ್ದೇಶಕ ರಘುರಾಮ್ ಕನಸಿಟ್ಟು ಆರಂಭಿಸಿದ ಚಿತ್ರವದು. ಈಗ ಶುರುವಾಗುತ್ತದೆ, ಆಗ ಶುರುವಾಗುತ್ತದೆ ಅಂತಾ ವರ್ಷಗಟ್ಟಲೆ ಕಾದಿದ್ದೇ ಬಂತು, ‘ನಮಗಾಗಿ ಚಾಲನೆಯಾಗಲೇ ಇಲ್ಲ. ಹೋದಲ್ಲಿ ಬಂದಲ್ಲಿ ಜನ ಇದರ ಬಗ್ಗೆಯೇ ಕೇಳುತ್ತಿದ್ದರು. ಇದರಿಂದ ಬೇಸತ್ತ ರಘುರಾಮ್ ನಮಗಾಗಿ ನಿಂತು ಹೋಯಿತು. ಮತ್ತೆ ಆರಂಭಿಸೋದಿಲ್ಲ ಅಂತಲೇ ಅನೌನ್ಸ್ಮೆಂಟು ಕೊಟ್ಟು ಬೇರೆ ಸಿನಿಮಾದ ಕಡೆ ಗಮನಹರಿಸಿದ್ದರು.
ಸಿನಿಮಾ ಬದಕುಕು ಕೂಡಾ ಅಷ್ಟೇ. ಯಾವುದನ್ನೂ ಹೀಗೇ ಅಂತಾ ಒಂದೇ ಏಟಿಗೆ ಹೇಳಲು ಸಾಧ್ಯವಿಲ್ಲ. ಯಾವ ಸಿನಿಮಾ ಏನು ಬೇಕಾದರೂ ಆಗಬಹುದು. ಯಾವ ಸಿನಿಮಾದ ಕತೆ ಮುಗೀತು ಅಂತಾ ಎಲ್ಲರೂ ನಂಬಿದ್ದರೋ ಅದೇ ಚಿತ್ರಕ್ಕೆ ಮರುಜೀವ ಬರುವ ಎಲ್ಲ ಲಕ್ಷಣಗಳೂ ಈಗ ಗೋಚರಿಸುತ್ತಿವೆ. ನಮಗಾಗಿ ಚಿತ್ರವನ್ನು ಸ್ವತಃ ರಾಧಿಕಾ ಮುಂದುವರೆಸುವ ಸೂಚನೆ ಸಿಕ್ಕಿದೆ. ಖುದ್ದು ರಾಧಿಕಾ ಸಹೋದರ ರವಿರಾಜ್ ಈ ಚಿತ್ರದ ಶೀರ್ಷಿಕೆಯನ್ನು ಮತ್ತೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.
ರವಿರಾಜ್ ಅವರನ್ನೇ ವಿಚಾರಿಸಲಾಗಿ ‘ಇನ್ನು ಹತ್ತು ಹದಿನೈದು ದಿನಗಳಲ್ಲಿ ಎಲ್ಲ ವಿಚಾರಗಳನ್ನೂ ಹೇಳುತ್ತೇವೆ. ಸದ್ಯಕ್ಕೆ ಬೇರೆ ಯಾರೂ ಶೀರ್ಷಿಕೆ ಪಡೆದುಕೊಳ್ಳಬಾರದು ಅನ್ನೋ ಕಾರಣಕ್ಕೆ ನಾವೇ ರಿಜಿಸ್ಟರ್ ಮಾಡಿಸಿಕೊಂಡಿದ್ದೇವೆ ಎಂದಿದ್ದಾರೆ. ರಾಧಿಕಾ ಅವರ ಸಿನಿಮಾಗಳ ಡಬ್ಬಿಂಗ್ಗೆ ಅತ್ಯುತ್ತಮ ಬೇಡಿಕೆ ಇದೆ. ಇತ್ತೀಚೆಗೆ ಬಂದ ದಮಯಂತಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸು ಬಬರೋಬ್ಬರಿ ಎಂಭತ್ತು ಲಕ್ಷಕ್ಕೆ ಮಾರಾಟವಾಗಿದೆ. ಇನ್ನೇನು ಬರಲಿರುವ ಭೈರಾದೇವಿ ಇದಕ್ಕಿಂತಾ ದೊಡ್ಡ ಮಟ್ಟದ ವ್ಯಾಪಾರ ಗಿಟ್ಟಿಸಲಿದೆ. ನಮಗಾಗಿ ಸಿನಿಮಾದ ಹೀರೋ ವಿಜಯ ರಾಘವೇಂದ್ರ ಅವರ ಸಿನಿಮಾಗಳ ಟೀವಿ ರೈಟ್ಸಿಗೆ ಒಳ್ಳೇ ರೇಟಿದೆ. ನಮಗಾಗಿ ಸಿನಿಮಾದ ಕಥೆ ಕೂಡಾ ಲವ್ಲಿಯಾಗಿದೆ ಅನ್ನೋ ಮಾತಿದೆ. ಪರಿಸ್ಥಿತಿ ಹೀಗಿರುವಾಗ ನಮಗಾಗಿ ಸ್ವಲ್ಪ ತಡವಾಗಿ ಹೊರಬಂದರೂ ಜನ ಸ್ವೀಕರಿಸುತ್ತಾರೆ. ಒಟ್ಟಾರೆ ಹೇಗೇ ತಾಳೆ ಹಾಕಿ ನೋಡಿದರೂ ನಿರ್ಮಾಪಕರಿಗೆ ಪಕ್ಕಾ ಲಾಭದ ಚಿತ್ರವಿದು. ಬಹುಶಃ ಇದೇ ಲೆಕ್ಕಾಚಾರ ರಾಧಿಕಾ ಬ್ರದರ್ ರವಿ ಅವರದ್ದಾಗಿರಲೂಬಹುದು.
ಇದ್ದಕ್ಕಿದ್ದಂತೇ ಬಂದು ನಮಗಾಗಿ ಸಿನಿಮಾದ ಬಗ್ಗೆ ರಾಧಿಕಾ ಫ್ಯಾಮಿಲಿ ಮುತುವರ್ಜಿ ವಹಿಸುತ್ತಿದೆ ಅಂದರೆ ಮತ್ತೆ ಆ ಚಿತ್ರ ಉಸಿರಾಡೋದು ಗ್ಯಾರೆಂಟಿ!
No Comment! Be the first one.