ಮೂರು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ತೆರೆಗೆ ಬಂದು ಹೋದ ಚಿತ್ರವನ್ನು ಮತ್ತೆ ಕನ್ನಡಿಗರ ಮನಸಿನ ಮೇಲೆ ಎತ್ತಿಟ್ಟಿರೋದು ಅದೇ ಸಿನಿಮಾ ಸುಮಧುರವಾದೊಂದು ಹಾಡು. ವಾಟ್ಸಪ್ ಸ್ಟೇಟಸ್ಗಳನ್ನು ಸಾರಾಸಗಟಾಗಿ ಆಕ್ರಮಿಸಿಕೊಂಡಿರೋ `ನನಗೀಗ ನನ ಮೇಲೆ ಅನುಮಾನ ಶುರುವಾಗಿದೆ’ ಎಂಬ ಹಾಡು ಯೂಟ್ಯೂಬ್ನಲ್ಲಿಯೂ ಟ್ರೆಂಡಿಂಗ್ನಲ್ಲಿದೆ!
ಹೊಸದಾಗಿ ಬಿಡುಗಡೆಯಾಗಿರೋ ಹಾಡುಗಳನ್ನೂ ಹಿಂದಿಕ್ಕಿ ಅಚ್ಚರಿದಾಯಕವಾಗಿ ಈ ಹಾಡು ಮೋಡಿ ಮಾಡಿದೆ. ಯೂಟ್ಯೂಬ್ನಲ್ಲಿ ಏಕಾಏಕಿ ಮೂವತ್ತು ಲಕ್ಷ ಮೀರಿದ ವೀಕ್ಷಣೆ ಪಡೆದುಕೊಂಡಿರೋ ಈ ಹಾಡು ಹುಚ್ಚು ಹಿಡಿಸಿದೆ. ನೋಡ ನೋಡುತ್ತಲೇ ಈ ಹುಚ್ಚು ಸಾಂಕ್ರಾಮಿಕವಾಗಿ ಹರಡಿಕೊಳ್ಳುತ್ತಲೇ ಇದೆ!
ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಪ್ರಚಾರಕ್ಕೆ ನಾನಾ ವಿಧಾನಗಳನ್ನು ಅನುಸರಿಸಲಾಗಿತ್ತು. ಆದರೆ ಅದ್ಯಾವುದೂ ಅಷ್ಟೊಂದು ಸದ್ದು ಮಾಡಿರಲೇ ಇಲ್ಲ. ಆದರೆ ಇದೀಗ ಈ ಹಾಡು ಸೃಷ್ಟಿಸಿರೋ ಅಲೆ ಕಂಡ ಎಲ್ಲರೂ ಇದೊಂದು ಹಾಡನ್ನು ಬಿಡುಗಡೆ ಪೂರ್ವದಲ್ಲಿ ಪ್ರಮೋಟ್ ಮಾಡಿದ್ದರೆ ಎಲ್ಲರೂ ಬೇಷರತ್ತಾಗಿ ಕನ್ನಡಕ್ಕಾಗಿ ಒಂದನ್ನು ಒತ್ತುತ್ತಿದ್ದರು. ಆ ಮೂಲಕ ಈ ಚಿತ್ರ ಗೆಲುವಿನತ್ತ ತಲುಪಿಕೊಳ್ಳುತ್ತಲೂ ಇತ್ತು. ಆದರೆ ಸಿನಿಮಾ ಬಿಡುಗಡೆಗೂ ಆಡಿಯೋ ಬಿಡುಗಡೆಗೂ ನಡುವೆ ಅಂತರ ಕಮ್ಮಿ ಇದ್ದಿದ್ದರಿಂದ ಬಹುಶಃ ಎಲ್ಲರನ್ನೂ ತಲುಪಲು ಸಾಧ್ಯವಾಗಿಲ್ಲವೇನೋ.
ಈ ಹಾಡು ಕೇಳಿ ಮುದಗೊಂಡ ಮಂದಿಯ ಮೇಲ್ಕಂಡ ಅಭಿಪ್ರಾಯದಲ್ಲಿ ನಿಜಕ್ಕೂ ಹುರುಳಿದೆ. ಈ ಸಿನಿಮಾ ಬಿಡುಗಡೆಯಾದ ದಿನ ಕನ್ನಡದ ಇತರೆ ಎಂಟು ಸಿನಿಮಾಗಳು ತೆರೆಗೆಬಂದಿತ್ತು. ಥಿಯೇಟರುಗಳ ಸಮಸ್ಯೆಯಿಂದ ಸಿನಿಮಾ ಅಂದುಕೊಂಡಷ್ಟು ಸೌಂಡು ಮಾಡಿರಲಿಲ್ಲ. ಈ ದುರಂತ ಸಂಭವಿಸಿ ಮೂರು ತಿಂಗಳು ಕಳೆದ ನಂತರ ಪವಾಡ ಸದೃಷವಾಗಿ ಕೇಳಿಸಿದ್ದು ಈ ಬೆಳುದಿಂಗಳಂಥಾ ಹಾಡು!
ಮಾಮೂಲಿಯಾಗಿ ಕೆಲ ಹಾಡುಗಳು ಮೊದಲು ಕೇಳಿದಾಗ ಹಿಡಿಸೋದಿಲ್ಲ. ಒಂದು ವೇಳೆ ಹಿಡಿಸಿದರೂ ಕೆಲ ಹಾಡುಗಳ ಆಯಸ್ಸು ಒಂದಷ್ಟು ಸಲ ಕೇಳೋವರೆಗೆ ಮಾತ್ರ. ಆದರೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡು ಅದೆಷ್ಟು ಸಲ ಕೇಳಿದರೂ ಬೇಜಾರಾಗೋದಿಲ್ಲ. ಆ ಟ್ಯೂನು, ಅದರ ಏರಿಳಿತ, ಬದುಕಿಗೆ, ಮನಸಿಗೆ ಹತ್ತಿರಾಗುವ ನವಿರು ಸಾಹಿತ್ಯ… ಇಷ್ಟೂ ಸಮ್ಮಿಳಿತಗೊಂಡಿರೋ ಈ ಹಾಡು ಅಕ್ಷರಶಃ ಹುಚ್ಚು ಹಿಡಿಸಿದೆ.
ಈ ಹಾಡಿನ ಮೂಲಕವೇ ಅರ್ಜುನ್ ಜನ್ಯಾ ಮತ್ತೆ ಹೊಸಾ ಸ್ವರೂಪದಲ್ಲಿ ಮಿರುಗಿದ್ದಾರೆ. ಈ ಹಾಡನ್ನು ಬರೆದವರು ಈ ಚಿತ್ರದ ನಿರ್ದೇಶಕ ಕುಶಾಲ್ ಗೌಡ. ಬಹುಶಃ ಅವರು ಗೀತರಚನೆಕಾರನಾಗಿಯೇ ಈ ಹಾಡಿನ ಮೂಲಕ ಎಲ್ಲರನ್ನೂ ಕಾಡಿದ್ದಾರೆ. ಈ ತೀರಾ `ಹಿಟ್’ ಲಿಸ್ಟಿಗೆ ಸೇರದಿದರೂ ಹಾಡು ಮಾತ್ರ ಜನಮನ ಗೆದ್ದಿದೆ. ಈ ಹಾಡಿನ ಮಾಟೇಂಜುಗಳೆಲ್ಲಾ ಚಿತ್ರೀಕರಣಗೊಂಡ ನಂತರ ಆ ದೃಶ್ಯಗಳನ್ನು ನೋಡಿ ಕೇವಲ ಹತಯ್ತು ನಿಮಿಷಗಳಲ್ಲಿ ಕುಷಾಲ್ ಈ ಸಾಲುಗಳನ್ನು ಬರೆದಿದ್ದರಂತೆ. ಅದೂ ಅರ್ಜುನ್ ಜನ್ಯಾ ಜೊತೆಗೆ ಇದೇ ಟ್ಯೂನು ಬೇಕು ಅಂತಾ ಹಠ ಮಾಡಿ ಒಪ್ಪಿಸಿದ್ದರಂತೆ. ಇದೆಲ್ಲ ಏನೇ ಆಗಲಿ, ಯಾರದ್ದೋ ಎದೆಯ ಕರೆಯಾಗಿ, ಯಾವ ನೋವಿಗೋ ಮದ್ದಾಗಿ, ಸುಖಾಸುಮ್ಮನೆ ಮುದ್ದಾಗಿ ಕಾಡುತ್ತಲೇ ಇರುತ್ತದೆ. ಇಷ್ಟು ಅದ್ಭುತ ಹಾಡು ಕೊಟ್ಟ ಈ ಚಿತ್ರ ತಂಡ ಮತ್ತಷ್ಟು ಅಚ್ಚರಿಗಳೊಂದಿಗೆ ಮರಳುವಂತಾಗಲಿ.
https://www.youtube.com/watch?v=TCAO95AmyXc #