ಇವತ್ತು ಭಾರತದ ಹೆಮ್ಮೆಯ ಗಾಯಕಿ ಎಸ್ ಜಾನಕಿ ಅವರ ಹುಟ್ಟಿದ ದಿನ. ಆರು ದಶಕಗಳಿಂದ ಹಾಡುತ್ತಾ, ನಾಲ್ಕು ರಾಷ್ಟ್ರಪ್ರಶಸ್ತಿ, ಮೂವತ್ತಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಜಾನಕಿ ಅವರಿಗೆ ಇವತ್ತಿಗೆ ಭರ್ತಿ ಎಂಭತ್ತೊಂದು ವರ್ಷ ತುಂಬಿದೆ. ನಟ, ನಿರ್ದೇಶಕ ರಘುರಾಮ್ ಅವರ ಮಗಳು ನನಸು ಈ ಮೇರು ಗಾಯಕಿಯ ಹುಟ್ಟಿದ ದಿನಕ್ಕೆ ಗಾನ ಗೌರವವನ್ನು ಅರ್ಪಿಸಿದ್ದಾರೆ.
ತೀರಾ ಸಣ್ಣ ವಯಸ್ಸಿನಿಂದಲೇ ಕ್ರೇಜ಼ಿ ಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಯಾಗಿದ್ದು, ನಂತರ ನಿರೂಪಕನಾಗಿ ಕೆಲಸ ಆರಂಭಿಸಿ, ವಾಹಿನಿಯ ಮುಖ್ಯಸ್ಥನಾಗಿ ಅದರ ಜೊತೆಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಾ, ಕ್ರಮೇಣ ನಿರ್ದೇಶಕರಾಗಿಯೂ ಹೆಸರು ಮಾಡಿದವರು ಡಿ.ಪಿ. ರಘುರಾಮ್. ಯಾವುದೇ ಕೆಲಸ ಮಾಡಿದರೂ ಅದನ್ನು ಕ್ರಿಯಾಶೀಲಗೊಳಿಸುವುದು ರಘುರಾಮ್ ರೀತಿ. ಇವರ ಹಿರಿಯ ಮಗಳು ನನಸು ಕೂಡಾ ಅಪ್ಪನ ಹಾದಿಯನ್ನೇ ಅನುಸರಿಸಿದಂತಿದೆ.
ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ನನಸು, ಮೊದಲಿನಿಂದಲೂ ಸಂಗೀತಾಭ್ಯಾಸ ಮಾಡುತ್ತಾ ಬಂದಿದ್ದಾಳೆ. ಸಂಗೀತದ ಟೀಚರ್ ವಾಣಿಶ್ರೀ ಅವರ ಬಳಿ ಶಾಸ್ತ್ರೀಯ ಸಂಗೀವನ್ನು ಕಲಿಯುತ್ತಿರುವ ನನಸು ಅದೆಷ್ಟು ಚೆಂದಗೆ ಹಾಡುತ್ತಾಳೆ ಗೊತ್ತಾ? ನನಸು ಹಾಡಿದ ಹಾಡು ರಘುರಾಮ್ ಅವರ ಫೇಸ್ ಬುಕ್ ಪೇಜಿನಲ್ಲೇ ಹತ್ತಿರತ್ತಿರ ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣನ ಜೊತೆ ಕೂಡಾ ನನಸು ಕರೋಕೆ ಹಾಡಿದ್ದಾಳೆ.
ಸಿನಿಮಾವನ್ನೇ ಉಸಿರಾಗಿಸಿಕೊಂಡವರು ರಘುರಾಮ್. ಅವರ ಮನೆಯಲ್ಲಿ ಬೆಳಬೆಳಿಗ್ಗೆ ವಿಷ್ಣು ಸಹಸ್ರನಾಮ, ವೆಂಕಟೇಶ್ವರ ಸುಪ್ರಭಾತ, ಹನುಮಾನ್ ಚಾಲೀಸ ಮುಗಿಯುತ್ತಿದ್ದಂತೇ ಡಾ.ರಾಜ್ ಕುಮಾರ್, ವಿಷ್ಣು, ರವಿಚಂದ್ರನ್ ಅವರ ಹಳೆಯ ಹಾಡುಗಳು ಪ್ಲೇ ಆಗುತ್ತಿರುತ್ತವೆ. ಈ ವಾತಾವರಣದಲ್ಲೇ ಬೆಳೆದ ನನಸು ಕೂಡಾ ಸುಮಧುರವಾಗಿ ಹಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾಳೆ. ಅವಕಾಶ ಮತ್ತು ಆಯ್ಕೆಗಳು ಕೈಗೂಡಿದರೆ ನನಸು ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ನೆಲೆ ನಿಲ್ಲಬಲ್ಲಳು. ಅದು ಸಾಧ್ಯವಾಗಲಿ, ಆ ಮೂಲಕ ಕನ್ನಡ ನೆಲದಲ್ಲಿ ಪುಟ್ಟ ಜಾನಕಿಯ ಜನ್ಮವಾಗಲಿ…