ರಾಹುಲ್ ಐನಾಪುರ ನಟಿಸಿ ನಿರ್ಮಾಣ ಮಾಡಿರುವ ತ್ರಾಟಕ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಾಹುಲ್ ನಟನೆ ನೋಡಿದವರೆಲ್ಲ ಕನ್ನಡಕ್ಕೊಬ್ಬ ಖಡಕ್ ಹೀರೋನ ಆಗಮನವಾಗಿದೆ ಅಂತ ಅಭಿಪ್ರಾಯ ಪಡುತ್ತಿದ್ದಾರೆ. ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ s ಪಾದಾರ್ಪಣೆ ಮಾಡಿದ್ದ, ಈಗ ತ್ರಾಟಕನ ಜೊತೆಗೆ ಕಾಮಿಡಿ ಪಾತ್ರವೊಂದರ ಮೂಲಕ ನಂದಗೋಪಾಲ್ ಎಂ.ಕೆ. ಎಂಬ ನವಪ್ರತಿಭೆಯೊಂದು ಮತ್ತೆ ಎಂಟ್ರಿ ಕೊಟ್ಟಿದೆ!
ತ್ರಾಟಕ ಚಿತ್ರದಲ್ಲಿನ ಕಾಮಿಡಿ ಪಾತ್ರವನ್ನು ಎಲ್ಲರ ಗಮನ ಸೆಳೆಯುವಂತೆ ನಟಿಸಿರುವ ನಂದ ಅಪ್ಪಟ ಕನ್ನಡದ ಹುಡುಗ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಪೊಲಿಟಿಕಲ್ ಫ್ಯಾಮಿಲಿಯೊಂದರಿಂದ ಬಂದ ನಂದ ಈಗಾಗಲೇ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಒಂದಷ್ಟು ಕಿರು ಚಿತ್ರಗಳ ಮೂಲಕ ಸದ್ದು ಮಾಡಿದ್ದಾರೆ. ತಮಿಳಿನಲ್ಲೆರಡು ಚಿತ್ರಗಳಲ್ಲಿಯೂ ಮುಖ್ಯವಾದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ ಅನಿರೀಕ್ಷಿತವಾಗಿ ಕಿರು ಚಿತ್ರಗಳ ಮೂಲಕ ನಟನೆ ಆರಂಭಿಸಿದ್ದ ನಂದಾರ ಪ್ರಧಾನ ಕನಸಾಗಿದ್ದದ್ದು ಕನ್ನಡದಲ್ಲಿ ನಟನಾಗಿ ಹೊರ ಹೊಮ್ಮಬೇಕೆಂಬ ಅಭಿಲಾಶೆ. ಅದು ತ್ರಾಟಕ ಚಿತ್ರದ ಮೂಲಕ ಸಾಕಾರಗೊಂಡಿದೆ.
ನಂದಾ ಅವರ ತಾತ ಎ.ಎಸ್ ಮಣಿ ಸ್ವಾತಂತ್ರ್ಯ ಹೋರಾಟಗಾರ. ಮಲ್ಲೇಶ್ವರಂ ವಾರ್ಡಿನ ಕೌನ್ಸಿಲರ್ ಕೂಡಾ ಆಗಿದ್ದ ಮಣಿ ನೆಹರೂ, ಇಂದಿರಾ ಗಾಂಧಿಯವರಂಥಾ ನೇತಾರರ ಜೊತೆಗೂ ಸಖ್ಯ ಹೊಂದಿದ್ದವರು. ಇಂಥಾ ಕುಟುಂಬದಿಂದ ಬಂದಿದ್ದ ನಂದಾಗೆ ರಾಜಕೀಯದಲ್ಲೇನೂ ಆಸಕ್ತಿ ಇರಲಿಲ್ಲ. ಈಗ್ಗೆ ಹತ್ತು ವರ್ಷಗಳ ಹಿಂದೆ ನಂದಾರ ತಂದೆ ತೀರಿಕೊಂಡ ನಂತರ ತಾಯಿ ಮಗನನ್ನು ಕರೆದುಕೊಂಡು ಬೇರೆ ಏರಿಯಾಗೆ ಶಿಫ್ಟ್ ಆಗಿದ್ದರಂತೆ. ಅವರಿಗೂ ಕೂಡಾ ಮಗ ರಾಜಕೀಯದ ಭಾಗವಾಗೋದು ಇಷ್ಟವಿರಲಿಲ್ಲ.
ಹೇಗೋ ಪ್ರಯಾಸಪಟ್ಟು ಅದಾಗ ತಾನೇ ಡಿಗ್ರಿ ಮುಗಿಸಿಕೊಂಡಿದ್ದ ನಂದಾಗೆ ಓದಿನಲ್ಲಿ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಬದುಕು ನಡೆಸಲು ದುಡಿಯಲೇ ಬೇಕಾಗಿದ್ದರೂ ಬೇರ್ಯಾವ ಕೆಲಸವೂ ಗೊತ್ತಿರಲಿಲ್ಲ. ಈ ಹಂತದಲ್ಲಿ ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು ಅಲೆದಾಡಲಾರಂಭಿಸಿದ್ದ ನಂದಾಗೆ ಅಚಾನಕ್ಕಾಗಿ ಸಿನಿಮಾ ಬರಹಗಾರರಾದ ನಾರಾಯಣ್ ಮತ್ತು ಮಹಾ ಕೀರ್ತಿಯವರ ಪರಿಚಯವಾಗಿ ಅದುವೇ ಕಿರುಚಿತ್ರಗಳತ್ತ ಹೊರಳಿಕೊಳ್ಳುವಂತೆ ಮಾಡಿತ್ತು. ಮೊದಲ ಕಿರುಚಿತ್ರದಲ್ಲಿ ನಂದ ನಟಿಸಿದ್ದರಾದರೂ ಅದು ಅಷ್ಟೇನೂ ಫಲಪ್ರದವಾಗಲಿಲ್ಲ. ಆದರೆ ಎರಡನೇ ಕಿರು ಚಿತ್ರದಲ್ಲಿ ಅವರ ನಟನೆ ಒಂದಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
ಮಾರ್ಕೆಟಿಂಗ್ ಕಂಪೆನಿಯಲ್ಲಿನ ಬಾಸ್ ನಾಗರಾಜು ಅವರ ಸಹಕಾರದಿಂದ ಕಿರುಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವೂ ನಂದಾಗೆ ಸಿಕ್ಕಿತ್ತು. ನಂತರ ಚೆನ್ನೈಗೆ ತೆರಳಿ ತಮಿಳಿನಲ್ಲಿಯೂ ಒಂದಷ್ಟು ಕಿರು ಚಿತ್ರಗಳಲ್ಲಿ ನಟಿಸಿದ್ದರು. ಸ್ವಾತಂತ್ರ್ಯದ ಬಗೆಗಿನ ಕಿರುಚಿತ್ರವೊಂದು ಅವಾರ್ಡುಗಳಿಗೂ ಪಾತ್ರವಾಗಿತ್ತು. ತ್ರಾಟಕ ನಿರ್ದೇಶಕರ ಗಮನ ಸೆಳೆದಿದ್ದು, ಅವರು ನಂದಾರನ್ನು ಸಂಪರ್ಕಿಸಿದ್ದು ಕೂಡಾ ಇಂಥಾ ಕಿರುಚಿತ್ರಗಳನ್ನು ನೋಡಿಯೇ. ಈ ಹೊತ್ತಿಗೆಲ್ಲಾ ಶಾರ್ಟ್ ಸಿನಿಮಾಗಳಿಂದ ತಮಿಳಿನಲ್ಲಿ ಒಂದು ಚಿತ್ರದಲ್ಲಿಯೂ ನಂದಾ ನಟಿಸಿದ್ದರು. ಮೋ ಎಂಬ ಮತ್ತೊಂದು ತಮಿಳು ಹಾರರ್ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಮೂವತ್ತಕ್ಕೂ ಹೆಚ್ಚು ಶಾರ್ಟ್ ಫಿಲ್ಮ್ಗಳಲ್ಲಿ ನಟಿಸಿ ತಮಿಳು ಚಿತ್ರಗಳಲ್ಲಿಯೂ ಅವಕಾಶ ಪಡೆದಿದ್ದ ನಂದಾಗೆ ಕನ್ನಡದಲ್ಲಿ ನಟಿಸಬೇಕೆಂಬ ಆಸೆ ಇದ್ದೇ ಇತ್ತು. ಅದಕ್ಕೆ ತ್ರಾಟಕ ಚಿತ್ರ ವೇದಿಕೆ ಒದಗಿಸಿದೆ. ಅವರೀಗ ಮನಸಿನ ಮರೆಯಲಿ ಎಂಬ ಚಿತ್ರದಲ್ಲಿಯೂ ಹಾಸ್ಯ ಪಾತ್ರ ಮಾಡಿದ್ದಾರೆ. ಮತ್ತೊಂದು ಕನ್ನಡ ಚಿತ್ರದಲ್ಲಿ ಹಾಸ್ಯದ ಜೊತೆಗೆ ನೆಗೆಟಿವ್ ಶೇಡಿರುವ ಪಾತ್ರವೊಂದನ್ನೂ ಮಾಡಿದ್ದಾರಂತೆ.
ಒಟ್ಟಾರೆಯಾಗಿ ತ್ರಾಟಕ ಚಿತ್ರದ ಮೂಲಕ ನಂದಾ ಕನ್ನಡ ಚಿತ್ರರಂಗಕ್ಕೆ ಕಾಮಿಡಿ ನಟನಾಗಿ ಮಿಂಚಿದ್ದಾರೆ. ಈ ಸಿನೆಮಾದಲ್ಲಿನ ನಟನೆ ನೋಡಿ ಮತ್ತಷ್ಟು ಅವಕಾಶಗಳೂ ಬರುತ್ತಿವೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆಯಬೇಕೆಂಬ ಹಂಬಲ ಹೊಂದಿರೋ ನಂದಾಗೆ ಕನ್ನಡದಲ್ಲಿ ಕಾಮಿಡಿ ನಟನಾಗಿ ನೆಲೆ ನಿಲ್ಲೋದು ದೊಡ್ಡ ಕನಸು. ತ್ರಾಟಕ ಚಿತ್ರ ಅದಕ್ಕೆ ಅನುವು ಮಾಡಿ ಕೊಟ್ಟಿದೆ. ಈಗಲೂ ಮಾರ್ಕೆಟಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ನಂದಾ ಸಿಕ್ಕ ಅವಕಾಶಗಳನ್ನೆಲ್ಲ ಶ್ರದ್ಧೆಯಿಂದಲೇ ಬಳಸಿಕೊಳ್ಳುತ್ತಿದ್ದಾರೆ.
#
No Comment! Be the first one.