ಕೆಜಿಎಫ್ ಚಿತ್ರ ಮುಗಿಯುತ್ತಾ ಬರುತ್ತಿರುವಾಗಲೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಘೋಷಣೆಯಾಗಿದೆ. ಅವರ ಹೊಸಾ ಚಿತ್ರಕ್ಕೆ ‘ಮೈ ನೇಮ್ ಈಸ್ ಕಿರಾತಕ ಎಂಬ ಟೈಟಲ್ಲೂ ಫೈನಲ್ ಆಗಿದೆ. ಈ ಹಿಂದೆ ಕಿರಾತಕ ಚಿತ್ರದ ಮೂಲಕ ಯಶ್ ಗೆಲುವು ದಾಖಲಿಸಿದ್ದರಿಂದ ಈ ಶೀರ್ಷಿಕೆ ಅಭಿಮಾನಿಗಳಿಗೂ ತೃಪ್ತಿ ತಂದಿದೆ.
ಆದರೆ ಈ ಚಿತ್ರಕ್ಕೆ ಯಾರು ನಾಯಕಿಯಾಗುತ್ತಾರೆ ಎಂಬ ಕುತೂಹಲ ಮಾತ್ರ ಅಭಿಮಾನಿಗಳಲ್ಲಿತ್ತು. ಇದೀಗ ಕನ್ನಡದಲ್ಲಿ ಲೀಡ್ ನಾಯಕಿಯರಲ್ಲಿಯೇ ಒಂದಷ್ಟು ಹೆಸರುಗಳೂ ಹರಿದಾಡಲಾರಂಭಿಸಿದ್ದವು. ಅದರ ಜೊತೆಗೇ ಪರಭಾಷಾ ನಾಯಕಿಯ ಆಗಮನವಾಗುತ್ತದೆ ಎಂಬ ರೂಮರುಗಳೂ ಹಬ್ಬಿಕೊಂಡಿದ್ದವು. ಆದರೀಗ ಅದೆಲ್ಲದಕ್ಕೂ ತೆರೆ ಬಿದ್ದಿದೆ. ಕಿರಾತಕನಿಗೆ ನಂದಿತಾ ಶ್ವೇತಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!
ಯಾರೀ ನಂದಿತಾ ಎಂಬ ಪ್ರಶ್ನೆ ಯಾರಲ್ಲಾದರೂ ಮೂಡೋದು ಸಹಜವೇ. ಈಕೆ 2008ರಲ್ಲಿ ತೆರೆ ಕಂಡಿದ್ದ ನಂದ ಲವ್ಸ್ ನಂದಿತಾ ಚಿತ್ರದಲ್ಲಿ ಲೂಸ್ ಮಾದನಿಗೆ ನಾಯಕಿಯಾಗಿ ನಟಿಸಿದ್ದಾಕೆ. ಅದಕ್ಕೂ ಮುಂಚೆ ಈಕೆ ಯೂಟು ಚಾನೆಲ್ಲಿನಲ್ಲಿ ನಿರೂಪಕಿಯಾಗಿದ್ದಳು. ಆದರೆ ಆ ನಂತರದಲ್ಲಿ ಮತ್ತೊಂದು ಕನ್ನಡ ಚಿತ್ರದಲ್ಲೀಕೆ ನಟಿಸಿರಲಿಲ್ಲ. ಈ ನಡುವೆ ಒಂದಷ್ಟು ಸಲ ತೆಲುಗು, ತಮಿಳು ಅಂತೆಲ್ಲ ಸಣ್ಣಗೆ ಸುದ್ದಿಯಾಗಿದ್ದಳಷ್ಟೆ.
ಇನ್ನೇನು ಕನ್ನಡದ ಪ್ರೇಕ್ಷಕರು ನಂದಿತಾಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದರು. ಅಷ್ಟರಲ್ಲಿಯೇ ೨೦೧0ರಲ್ಲಿ ಚಾಮರಾಜಪೇಟೆ ಎಂಬ ಚಿತ್ರಕ್ಕೆ ನಂದಿತಾ ನಯಕಿಯಾಗಿ ಆಗಮಿಸಿದ್ದಳು. ಆದರೆ ನಂದಿತಾ ಬಂದಿದ್ದೂ ಸುದ್ದಿಯಾಗಲಿಲ್ಲ. ಯಾಕೆಂದರೆ ಆ ಸಿನಿಮಾ ಪೂರ್ತಿಯಾಗಲೇ ಇಲ್ಲ. ಇಂಥಾ ನಂದಿತಾ ಈಗ ಮತ್ತೆ ಯಶ್ಗೆ ನಾಯಕಿಯಾಗಿದ್ದಾಳೆ. ಈ ಮೂಲಕವಾದರೂ ಈಕೆಯ ಲಕ್ಕು ಕುದುರಿಕೊಳ್ಳಬಹುದೇನೋ…
#