೧೯೮೨ರಲ್ಲಿ ತೆರೆಕಂಡ ನಾನೇ ರಾಜ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಾಗಿ ನಟಿಸಿದ್ದರು. ಈಗ ಅದೇ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಉಮೇಶ್ ನಾಯಕನಾಗಿ ಗುರುತಿಸಿಕೊಂಡಿzರೆ. ಹಿರಿಯ ನಿರ್ದೇಶಕ ಭಾರ್ಗವ ಅವರ ಶಿಶ್ಯ ಶ್ರೀನಿವಾಸ ಶಿವಾರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೂಲಕ ಉಮೇಶ್, ಸೂರಜ್ ಕೃಷ್ಣ ಆಗಿ ಹೊಸ ಹೆಸರಿನೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ನಾನೇ ರಾಜ ಪಕ್ಕಾ ಹಳ್ಳಿಸೊಗಡಿನಲ್ಲಿ ನಡೆಯುವ ಕಥೆಯಾಗಿರುವುದರಿಂದ ಬಹುತೇಕ ಗ್ರಾಮೀಣ ಪ್ರದೇಶದಲ್ಲೇ ಚಿತ್ರಕ್ಕೆ ಶೂಟ್ ಮಾಡಲಾಗಿದೆ. ಈಗಾಗಲೇ ಚಿತ್ರದ ಶೇಕಡ ೫೦ರಷ್ಟು ಚಿತ್ರೀಕರಣವನ್ನು ಮೈಸೂರು ಬಳಿಯ ಬನ್ನೂರಿನಲ್ಲಿ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಮೂರು ಹಂತದಲ್ಲಿ ಶೂಟ್ ಮಾಡಲಾಗಿದೆ. ಮೊನ್ನೆ ಈ ಚಿತ್ರದ ಟೀಸರನ್ನು ಅನಾವರಣ ಮಾಡಲಾಯಿತು.
ಮಾಸ್ಟರ್ ಡಿಗ್ರಿ ಓದಿಕೊಂಡಿರುವ ಸೂರಜ್ ಕೃಷ್ಣ ತಾನು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ ಎಂದು ಹೇಳುತ್ತ ನಾನು ಈ ಎಲ್ಲವನ್ನು ಅಣ್ಣನಿಂದಲೇ ಕಲಿತಿದ್ದು, ನನಗೆ ಏನೇ ಕ್ರೆಡಿಟ್ ಬಂದರೂ ಅದು ಅವರಿಗೆ ಸಲ್ಲುತ್ತದೆ. ಚಿತ್ರದಲ್ಲಿ ನಾನು ಒಬ್ಬ ಹಳ್ಳಿ ಹುಡುಗನಾಗಿ ನಟಿಸಿದ್ದು, ಜನರ ಕಷ್ಟಗಳಿಗೆ ಸದಾ ಮುಂದೆ ನಿಲ್ಲುವಂಥ ಗುಣ ನನ್ನದು. ನನಗೇ ಸಮಸ್ಯೆ ಎದುರಾದಾಗ ಹೇಗೆ ಎದುರಿಸುತ್ತೇನೆ ಎನ್ನುವುದೇ ಈ ಚಿತ್ರದ ಕಥೆ ಎಂದು ತನ್ನ ಪಾತ್ರದ ಪರಿಚಯ ಮಾಡಿಕೊಂಡರು. ನಾಯಕಿ ಸೋನಿಕಾಗೌಡ ಮಾತನಾಡಿ ನಾನು ಪಟ್ಟಣದಿಂದ ಹಳ್ಳಿಗೆ ಬಂದಾಗ ಅಲ್ಲಿ ನಡೆಯುವ ಕೆಲ ಘಟನೆಗಳಿಗೆ ನಾನೇ ಹೊಣೆಯಾಗಿರುತ್ತೇನೆ ಎಂದು ಹೇಳಿದರು. ಉಳಿದಂತೆ ಈ ಚಿತ್ರದಲ್ಲಿ ಹಳ್ಳಿಯ ವೈದ್ಯನಾಗಿ ಎಂ.ಎಸ್. ಉಮೇಶ್, ಅಜ್ಜಿಯಾಗಿ ಮಾಲತಿ ಶ್ರೀ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶ್ರೀನಿವಾಸ ಶಿವಾರ, ನಿರ್ಮಾಪಕ ಎಲ. ಆನಂದ್ ಚಿತ್ರದ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎಂ.ಎನ್. ಸುರೇಶ್, ಬಾ.ಮ.ಹರೀಶ್, ಬಾಮ ಗಿರೀಶ್ ಕೂಡ ಸಮಾರಂಭದಲ್ಲಿ ಉಪಸ್ತಿತರಿದ್ದರು.