ಕೋಟಿಗಳ ಲೆಕ್ಕವಿಲ್ಲದೆ ಖರ್ಚು ಮಾಡಿ ತಯಾರಿಸಿರುವ ನಮ್ಮದೇ ಕನ್ನಡದ ಕುರುಕ್ಷೇತ್ರ, ಅದೆಲ್ಲಿಂದಲೋ ಬಂದು ಬಿಡುಗಡೆಯಾಗಿ ಕನ್ನಡದ ಸಿನಿಮಾಗಳ ಕತ್ತು ಹಿಸುಕಿದ ಸಾಹೋ, ಇಡೀ ಕರ್ನಾಟಕವನ್ನು ಪೀಡಿಸುತ್ತಿರುವ ನೆರೆ ಹಾವಳಿ… ಈ ಎಲ್ಲದರ ಮಧ್ಯೆಯೂ ಹೊಸಾ ನಿರ್ದೇಶಕನ ಸಿನಿಮಾವೊಂದು ಬಿಡುಗಡೆಯಾಗಿ, ಎಲ್ಲವನ್ನೂ ಎದುರಿಸಿ ನಿಲ್ಲುತ್ತದೆಂದರೆ ಅದು ಸಾಮಾನ್ಯ ವಿಷಯವಲ್ಲ.


ಕಿಶೋರ್, ಪ್ರಿಯಾಮಣಿ, ಮಯೂರಿ ಮುಂತಾದವರು ನಟಿಸಿದ್ದ ‘ನನ್ನ ಪ್ರಕಾರ’ ಸಿನಿಮಾ ಈಗ ಎರಡು ವಾರ ಪೂರೈಸಿದೆ. ಮೊನ್ನೆ ದಿನ ಸಾಹೋ ಸಿನಿಮಾ ಕರ್ನಾಟಕದಲ್ಲೇ ಸರಿಸುಮಾರು ಐನೂರು ಸ್ಕ್ರೀನ್’ಗಳನ್ನು ರಿಲೀಸಾಗಿತ್ತು. ನನ್ನ ಪ್ರಕಾರ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಕೆಲವು ಕೇಂದ್ರಗಳಲ್ಲಿ ಈ ಚಿತ್ರವನ್ನು ತೆಗೆದು ಸಾಹೋಗೆ ಜಾಗ ಮಾಡಿಕೊಟ್ಟಿದ್ದರು. ಯಾವಾಗ ಸಾಹೋ ಮೊದಲ ಶೋಗೇ ಮಕಾಡೆ ಮಲಗಿತೋ ಮತ್ತೆ ನನ್ನ ಪ್ರಕಾರ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ಬಿಡುಗಡೆಯಾಗಿ ಒಂದು ವಾರಕ್ಕೆಲ್ಲಾ ಥಿಯೇಟರುಗಳ ಸಂಖ್ಯೆ ಕಡಿಮೆಯಾಗಿಬಿಡುತ್ತದೆ. ಈ ವರ್ಷ ಬಂದ ಐ ಲವ್ ಯೂ ಸಿನಿಮಾ ಬಿಡುಗಡೆಯ ನಂತರ ಥಿಯೇಟರುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತ್ತು. ಭರ್ಜರಿ ಗಳಿಕೆಯನ್ನೂ ಮಾಡಿತ್ತು. ಈಗ ನನ್ನ ಪ್ರಕಾರ ಸಿನಿಮಾ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದೆ.


ಹೊಸ ನಿರ್ದೇಶಕನ ಸಿನಿಮಾ, ಅದರಲ್ಲೂ ಕ್ರೈಂ ಥ್ರಿಲ್ಲರ್ ಜಾನರಿನ ಸಿನಿಮಾವೊಂದು ಮೌತ್ ಟಾಕ್ ಮೂಲಕವೇ ದಿನೇ ದಿನೇ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಕನ್ನಡದ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ. ಸಾಮಾನ್ಯಕ್ಕೆ ಫ್ಯಾಮಿಲಿ ಆಡಿಯನ್ಸ್ ಮೊದಲ ವಾರ ಥಿಯೇಟರಿಗೆ ಬರೋದು ಕಡಿಮೆ. ಸಿನಿಮಾವೊಂದರ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದ್ದಂತೇ ಮನೆಮಂದಿಯೆಲ್ಲಾ ಒಟ್ಟಿಗೇ ಸಿನಿಮಾ ನೋಡಲು ಥಿಯೇಟರಿನ ಕಡೆ ಮುಖ ಮಾಡುತ್ತಾರೆ. ಈಗ ನನ್ನ ಪ್ರಕಾರ ಸಿನಿಮಾಗೆ ವರವಾಗಿರೋದೂ ಇದೇ. ಮೊದಲ ವಾರ ಸಿನಿಮಾ ನೋಡಿದ ಸಿನಿಮಾ ಪ್ರೇಮಿಗಳು ಮತ್ತು ವಿಮರ್ಶಕರು ನನ್ನ ಪ್ರಕಾರ ಸಿನಿಮಾದ ಕುರಿತು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರೋ? ಅದು ಎರಡನೇ ವಾರ ಫ್ಯಾಮಿಲಿ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸುವಂತೆ ಮಾಡಿದೆ. ಇನ್ನು ಗೌರಿ ಗಣೇಶ ಹಬ್ಬದ ರಜೆ ಇರೋದರಿಂದ ಆನ್ ಲೈನ್ ನಲ್ಲಿ ಕೂಡಾ ಟಿಕೇಟ್ ಬುಕಿಂಗ್ ಜೋರಾಗಿದೆ.
ಪ್ರಭಾಸ್ ಅಭಿನಯದ ಸಾಹೋ ಎನ್ನುವ ದೈತ್ಯ ಸಿನಿಮಾವನ್ನು ಹಿಂದಿಕ್ಕಿ ‘ನನ್ನ ಪ್ರಕಾರ’ ಸಿನಿಮಾ ಗೆಲುವಿನ ನಗೆ ಬೀರುತ್ತದೆಯೆಂದರೆ ನಮ್ಮ ‘ಕನ್ನಡಿಗರ ಪ್ರಕಾರ’ ಇದಕ್ಕಿಂತಾ ಖುಷಿಯ ವಿಚಾರ ಯಾವುದಿದೆ ಅಲ್ಲವೆ? ಈ ಕಾರಣಕ್ಕಾದರೂ ಮೊದಲ ಸಿನಿಮಾದಲ್ಲೇ ಎಲ್ಲರನ್ನೂ ಸೆಳೆದುಕೊಂಡ ನಿರ್ದೇಶಕ ವಿನಯ್ ಬಾಲಾಜಿ ಅವರಿಗೊಂದು ಕಂಗ್ರಾಟ್ಸ್ ಹೇಳೋಣ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪುಟ್ ಗೌರಿ ಹಬ್ಬ: ಹುಡುಗಿಯ ಲೈಫ್ ಸ್ಟೋರಿ!

Previous article

ಗೋಲ್ಡನ್ ಸ್ಟಾರ್ ಗೀತಾಗೆ ಸ್ಯಾಂಡಲ್ ವುಡ್ ಸಾಥ್!

Next article

You may also like

Comments

Leave a reply

Your email address will not be published. Required fields are marked *