ಲವ್ ಸ್ಟೋರಿ, ಕಾಮಿಡಿ ಸಿನಿಮಾಗಳನ್ನು ಹೆಚ್ಚು ಲೈಕ್ ಮಾಡುತ್ತಿದ್ದ ಸಿನಿಮಾ ಪ್ರೇಮಿಗಳು ಈಗೀಗ ಹಾರರ್, ಥ್ರಿಲ್ಲರ್, ಸಸ್ಪೆನ್ಸ್, ಮಾಸ್ ಸಿನಿಮಾಗಳ ಕಡೆ ಹೆಚ್ಚು ವಾಲುತ್ತಿದ್ದಾರೆ. ಅಂತಹುದೇ ಜಾನರ್ ನ ಬಹಳಷ್ಟು ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಲೆಕ್ಕವಿಲ್ಲದಷ್ಟು ವಾರಕ್ಕೆ ಒಂದರಂತೆ ಬಿಡುಗಡೆಯಾಗುತ್ತಲೂ ಇದೆ. ಆದರೆ ಅವುಗಳಲ್ಲಿ ಉಳಿದವೆಷ್ಟು.. ಜನರಿಗೆ ತಲುಪಿದೆಷ್ಟು ಅನ್ನುವುದೇ ಹೆಚ್ಚು ಫೋಕಸ್ ಮಾಡಬೇಕಾದ ವಿಚಾರ. ಇಂತಹ ಎಲ್ಲ ಲೆಕ್ಕಾಚಾರವನ್ನು ಸಿನಿಮಾ ಬಿಡುಗಡೆಗೂ ಮುನ್ನವೇ ಉಡೀಸ್ ಮಾಡಿ ಆಗಸ್ಟ್ 23ರಂದು ಪ್ರಿಯಾಮಣಿ ಮತ್ತು ಕಿಶೋರ್ ಕಾಂಬಿನೇಷನ್ನಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಹೊಸ ಸಿನಿಮಾ ನನ್ನ ಪ್ರಕಾರ ಬಿಡುಗಡೆಯಾಗಲಿದೆ. ಇಲ್ಲಿಯವರೆಗೂ ಬಿಡುಗಡೆಯಾಗಿರುವ ನನ್ನ ಪ್ರಕಾರದ ಟೀಸರ್, ಟ್ರೇಲರ್, ಆಡಿಯೋ, ಪೋಸ್ಟರ್ ಗಳು ಸಿನಿಮಾದ ಮೇಲೆ ಸಾಕಷ್ಟು ಭರವಸೆಯನ್ನು ಮೂಡಿಸಿದೆ.
ಕೌತುಕತೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನನ್ನ ಪ್ರಕಾರ ಚಿತ್ರತಂಡ ಇತ್ತೀಚಿಗಷ್ಟೇ ಚಿತ್ರದ ಟೈಟಲ್ ಟ್ರ್ಯಾಕ್ ಒಂದನ್ನು ಬಿಡುಗಡೆ ಮಾಡಿಕೊಂಡಿದ್ದು, ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಯಾವ್ದು ಸರಿ.. ಯಾವ್ದು ತಪ್ಪು.. ಭೂತಕನ್ನಡಿಯಲ್ಲಿ ನೋಡು ಎಂದು ಹಾಡಿನ ಸಾಲು ಆರಂಭವಾಗಿದ್ದು, ಈ ಹಾಡು ನನ್ನ ಪ್ರಕಾರದ ಕ್ಲೈಮ್ಯಾಕ್ಸ್ ಗೆ ಸಮೀಪದಲ್ಲಿ ಬರಲಿದೆಯಂತೆ. ಸಿನಿಮಾ ನೋಡಿ ಸಾಕಷ್ಟು ಕೌತುಕದಲ್ಲಿರುವ ಪ್ರೇಕ್ಷಕರಿಗೆ ಸಸ್ಪೆಕ್ಟೀವ್ ಯಾರು ಎಂಬುದಕ್ಕೆ ಈ ಹಾಡು ಹಿಂಟ್ ನೀಡುವುದೇ ಈ ಹಾಡಿನ ಸ್ಪೆಷಲ್ಲು. ಈ ಟೈಟಲ್ ಟ್ರ್ಯಾಕನ್ನು ಚೇತನ್ ಕುಮಾರ್ ಬರೆದಿದ್ದು, ಅರ್ಜುನ್ ರಾಮ್ ಸಂಗೀತ ಸಂಯೋಜನೆಯಲ್ಲಿ ಶಿವಂ ಹಾಡಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕಿಶೋರ್ ಕುಮಾರ್ ಕಾಣಿಸಿಕೊಂಡಿದ್ದು, ಪ್ರಿಯಾಮಣಿ, ಕೃಷ್ಣ ಲೀಲಾ ಮಯೂರಿ, ಅರ್ಜುನ್ ಯೋಗಿ ಪ್ರಮುಖ ಪಾತ್ರದಲ್ಲಿದ್ದಾರೆ. ಜಿವಿಕೆ ಕಂಬೈನ್ಸ್ ಬ್ಯಾನರ್ ನಲ್ಲಿ ಗುರುರಾಜ್ ನನ್ನ ಪ್ರಕಾರ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿನಯ್ ಬಾಲಾಜಿ ನಿರ್ದೇಶನ ಮಾಡಿದ್ದಾರೆ.