ನಾನು ಮತ್ತು ಗುಂಡ ಅನ್ನೋ ಸಿನಿಮಾವೊಂದು ತಯಾರಾಗಿ ಬಿಡುಗಡೆಗೆ ಸಿದ್ದವಾಗಿದೆ. ಪೊಯೆಮ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಘು ಹಾಸನ್ ನಿರ್ಮಾಣದ, ವಿವೇಕಾನಂದ ಕತೆ ಬರೆದಿರುವ, ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಿತ್ರವಿದು. ಶಿವರಾಜ್ ಕೆ.ಆರ್ ಪೇಟೆ ಜೊತೆಗೆ ಸಿಂಬಾ ಎಂಬ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಈ ಹಿಂದೆ ನಿರ್ದೇಶಕ ಜೋಗಿ ಪ್ರೇಮ್ ಅವರೊಟ್ಟಿಗೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ನಂತರ ಗಾಂಧಿಗಿರಿ ಸಿನಿಮಾವನ್ನು ನಿರ್ದೇಶಿಸುತ್ತಿರುವ ರಘು ಹಾಸನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ತಿಪಟೂರಿನಲ್ಲಿ ಆಟೋ ಡ್ರೈವರ್ ಮತ್ತು ನಾಯಿಯ ನಡುವೆ ನಡೆದ ನೈಜ ಘಟನೆಯನ್ನು ಆಧರಿಸಿ ರೂಪಿಸಿರುವ ಸಿನಿಮಾ.
ಸಾಕಷ್ಟು ಜನ ಮುದ್ದುಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಎಷ್ಟೋ ಸಲ ಮನೆಯ ಸದಸ್ಯರು ಇಲ್ಲವಾದಾ, ದೂರದೂರಿಗೆ ಪ್ರಯಾಣ ಬೆಳೆಸಿದಂಥಾ ಸಂದರ್ಭದಲ್ಲಿ ಈ ಪ್ರೀತಿ ತೋರುವ ಜೀವಗಳು ಅನ್ನಾಹಾರ ಬಿಟ್ಟು, ಕಣ್ಣೀರಿಟ್ಟ ಘಟನೆಗಳೂ ಸಾಕಷ್ಟಿರುತ್ತವೆ. ರೆಬೆಲ್ ಸ್ಟಾರ್ ಅಂಬರೀಶ್ ತೀರಿಕೊಂಡಾಗ ಅವರ ಮುದ್ದು ನಾಯಿ ಆಹಾರ ತ್ಯಜಿಸಿ, ಎಷ್ಟೆಲ್ಲಾ ರೋಧಿಸಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.
ಪ್ರೀತಿಯಿಂದ ಸಾಕಿದ ನಾಯಿ ಕಳುವಾದಾಗ, ಜೀವ ಬಿಟ್ಟಾಗಲೂ ಮನೆಯ ಸದಸ್ಯರು ತೀವ್ರವಾದ ದುಃಖ ಅನುಭವಿಸಿರುತ್ತಾರೆ. ಹೀಗೆ ತಮ್ಮ ಮನೆಯ ನಾಯಿಯೊಂದಿಗಿನ ಹೃದಯಸ್ಪರ್ಶಿ ಘಟನೆಗಳಿದ್ದರೆ, ಅದನ್ನು ‘ನಾನು ಮತ್ತು ಗುಂಡ’ ಚಿತ್ರತಂಡಕ್ಕೆ ತಿಳಿಸಬಹುದು. ಕಾಡುವಂಥಾ ಸಂದರ್ಭಗಳ ಬಗ್ಗೆ ತಿಳಿಸುವುದಾದರೆ ಖುದ್ದು ಚಿತ್ರತಂಡ ನಿಮ್ಮ ಮನೆಗಳಿಗೆ ಹಾಜರಾಗಲಿದೆ. ಈಗಾಗಲೇ ಆರೇಳು ಜನರ ಅನುಭವಗಳನ್ನು ನಾನು ಮತ್ತು ಗುಂಡ ತಂಡ ಚಿತ್ರೀಕರಿಸಿದ್ದು, ಕಡಿಮೆಯೆಂದರೂ ಇನ್ನೂ ಹತ್ತು ಜನರ ನಾಯಿಯೊಂದಿಗಿನ ಅನುಭವ ಕಥನ ಬೇಕಿದೆ. ಹೀಗೆ ತಮ್ಮ ಮನೆಯ ನೆಚ್ಚಿನ ಜೀವದ ಬಗೆಗಿನ ಕಥೆಗಳನ್ನು ನೀಡಿದವರನ್ನು ನಾನು ಮತ್ತು ಗುಂಡ ಚಿತ್ರದ ಪ್ರೀಮಿಯರ್ ಶೋಗೆ ಆಹ್ವಾನಿಸಲಾಗುತ್ತದೆ. ಜೊತೆಗೆ ಚಿತ್ರೀಕರಿಸಿದ ನಿಮ್ಮ ಅನುಭವಗಳನ್ನು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ದೂರಾದ ಮನುಷ್ಯರನ್ನೇ ಮರೆತುಬಿಡುವ ಈ ಕಾಲದಲ್ಲಿ ನಾನು ಮತ್ತು ಗುಂಡ ತಂಡ ಶ್ವಾನಗಳೊಂದಿಗೆ ಬೆಸೆದುಕೊಂಡ ಸಂಬಂಧದ ಕುರಿತಾಗಿ ಮಾಹಿತಿ ಸಂಗ್ರಹಿಸಿ, ಅದನ್ನು ಚಿತ್ರೀಕರಿಸುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಜನ ಸೆಂಟಿಮೆಂಟುಗಳನ್ನು ಕಳಚುತ್ತಿರುವ, ಸ್ನೇಹ, ವಿಶ್ವಾಸವನ್ನು ಮರೆಯುತ್ತಿರುವ ಇವತ್ತಿನ ಕಾಲದಲ್ಲಿ ನಿಯತ್ತಿಗೆ ಹೆಸರಾದ ನಾಯಿಯ ಕುರಿತ ಸಿನಿಮಾ ರೂಪಿಸಿ, ಈಗ ಅಂಥಾ ನಾಯಿಗಳನ್ನು ಸಾಕಿ ಸಲುಹಿದವರ ಅನುಭವ ಕಥನವನ್ನೂ ಕಟ್ಟಿಕೊಡುತ್ತಿರುವ ಗುಂಡನ ತಂಡಕ್ಕೆ ಕೈ ಮುಗಿಯಬೇಕಿದೆ..!