ನಾನು ಮತ್ತು ಗುಂಡ ಸಿನಿಮಾ ಈ ವಾರ ತೆರೆಗೆ ಬಂದಿದೆ. ಪೊಯೆಮ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಘು ಹಾಸನ್ ನಿರ್ಮಾಣದ, ವಿವೇಕಾನಂದ ಕತೆ ಬರೆದಿರುವ, ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಿತ್ರವಿದು. ಶಿವರಾಜ್ ಕೆ.ಆರ್ ಪೇಟೆ ಜೊತೆಗೆ ಸಿಂಬಾ ಎಂಬ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ.

ಸಂಬಂಧ ಅನ್ನೋದು ಬರೀ ಮನುಷ್ಯರ ನಡುವೆ ಮಾತ್ರವಲ್ಲ, ಪ್ರಾಣಿ, ಪ್ರಕೃತಿಯೊಂದಿಗೆ ಕೂಡಾ ಬೆಸೆದುಕೊಳ್ಳಬಹುದು. ಹಾಗೆ ಬದುಕಿನ ಹಾದಿಯಲ್ಲಿ ಅಚಾನಕ್ಕಾಗಿ ಪುಟಾಣಿ ನಾಯಿಮರಿಯೊಂದಿಗೆ ಕಥಾನಾಯಕನ  ನಂಟು ಕುದುರುತ್ತದೆ. ಬಿಟ್ಟರೂ ಬಿಡದೆ ಬೆನ್ನತ್ತುತ್ತದೆ. ಆ ನಂತರ ಇವನ ಮನಸ್ಸೆಲ್ಲಾ ಅದರ ಹಿಂದೆ ಅಲೆಯಲು ಶುರುಮಾಡುತ್ತದೆ.
ಆಟೋ ಓಡಿಸಿಕೊಂಡು ಪತ್ನಿಯೊಡನೆ ಸಂಸಾರ ಸಾಗಿಸುವ ಶಂಕರ. ಈ ದಂಪತಿಗಳಿಗೆ ಇನ್ನೂ ಮಕ್ಕಳಾಗಿಲ್ಲ ಅನ್ನೋ ಕೊರಗು. ಅದನ್ನು ಈಡೇರಿಸಿಕೊಳ್ಳಲು ಕಂಡ ಕಂಡ ದೇವರಿಗೆ ಕೈ ಮುಗಿಯುತ್ತಾ, ಸಿಕ್ಕ ಡಾಕ್ಟರುಗಳ ಬಳಿಯೆಲ್ಲಾ ಸಲಹೆ ಪಡೆಯುತ್ತಿರುತ್ತಾರೆ. ಆ ಗ್ಯಾಪಲ್ಲಿ ನಾಯಿಮರಿ ಗುಂಡ ಜೊತೆಯಾಗುತ್ತದೆ. ಆಟೋ ಶಂಕರನ ವಿಪರೀತ ನಾಯಿ ವ್ಯಾಮೋಹ ಊರಿಗೇ ಗೊತ್ತಾಗುತ್ತದೆ. ನಾಯಿ ಮೇಲೆ ಈತ ತೋರುವ ಅತಿಯಾದ ಪ್ರೀತಿ ಆಕೆಯ ರೇಜಿಗೆಗೂ ಕಾರಣವಾಗುತ್ತದೆ. ಅದು ಯಾವ ಹಂತಕ್ಕೆ ಅಂದರ ಆ ನಾಯಿ ಜೊತೆಯಿದ್ದರೆ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದವಳೇ ಸೂಟ್’ಕೇಸಿನ ಸಮೇತ ತವರಿಗೆ ಹೋಗುತ್ತಾಳೆ. ಗಂಡ ಹೆಂಡತಿಯ ಕಿತ್ತಾಟಕ್ಕೆ ಕಾರಣವಾಗುವ ನಾಯಿಯನ್ನು ಶಂಕರ ಬಿಟ್ಟು ಕಳಿಸುತ್ತಾನಾ? ಪತ್ನಿಯನ್ನು ಮನವೊಲಿಸಿ ವಾಪಾಸು ಕರೆತರುತ್ತಾನಾ? ಆಕೆಗೆ ನಾಯಿ ಮೇಲಿನ ಕೋಪ ನಿಗ್ರಹವಾಗುತ್ತದಾ? ಎಂಬಿತ್ಯಾದಿ ವಿಚಾರಗಳು, ಯಾರದ್ದೋ ಮನೆಯ ನಾಯಿ ಈತನ ಜೊತೆಯಾಗುವ ಬಗೆಗಳೆಲ್ಲಾ ಮೊದಲ ಭಾಗದಲ್ಲಿ ಅನಾವರಣಗೊಳ್ಳುತ್ತದೆ. ಮಧ್ಯಂತರದ ತನಕ ಒಂದು ಕೋನದಲ್ಲಿ ಕತೆ ಸಾಗಿದರೆ, ದ್ವಿತೀಯಾರ್ಧ ಯಾರೂ ಊಹಿಸಲೂ ಸಾಧ್ಯವಾಗದ ವಿಚಾರಗಳತ್ತ ಹೊರಳಿಕೊಳ್ಳುತ್ತದೆ. ಮಿಲಿಟರಿ ಹೋಟೇಲು, ಮಾಂಸದ ವ್ಯಾಪಾರ, ನಾಯಿಗಳನ್ನು ಕದ್ದೊಯ್ದು ಅವುಗಳ ಕುತ್ತಿಗೆ ಸೀಳುವ ನೀಚರ ಜಗತ್ತು. ಸಾಕು ನಾಯಿಗಳನ್ನು ಅಪಹರಿಸುವವರ ಹಿಂದಿರುವ ಮಾಫಿಯಾಗಳೆಲ್ಲಾ ತೆರೆದುಕೊಳ್ಳುತ್ತದೆ. ಈ ನಡುವೆ ಶಂಕರನ ಮುದ್ದು ನಾಯಿ ಕೈಬಿಟ್ಟು ಹೋಗುತ್ತದಾ? ಅದನ್ನು ಉಳಿಸಿಕೊಳ್ಳಲು ಆತ ಪಡುವ ಪಾಡುಗಳೇನು? ಇವೆಲ್ಲದರ ನಡುವೆ ಶಂಕರನ ಬದುಕು ಏನಾಗುತ್ತದೆ? ಹೀಗೆ ಹಲವು ಕುತೂಹಲಗಳನ್ನು ಹೊತ್ತು ತಂದಿರುವ ಸಿನಿಮಾ ನಾನು ಮತ್ತು ಗುಂಡ.

ಕಾಮಿಡಿ ಪಾತ್ರಗಳಲ್ಲಿ ಮಾತ್ರವಲ್ಲ, ಸೆಂಟಿಮೆಂಟು ದೃಶ್ಯಗಳಲ್ಲೂ ಮೈಮರೆತು ನಟಿಸಬಲ್ಲೆ ಅನ್ನೋದನ್ನು ಶಿವರಾಜ್ ಕೆ.ಆರ್. ಪೇಟೆ ತೋರಿಸಿಕೊಟ್ಟಿದ್ದಾರೆ. ಸಿಂಬಾ ಎನ್ನುವ ನಾಯಿ ಕೂಡಾ ದೃಶ್ಯಕ್ಕೆ ಬೇಕಾದಹಾಗೆ ಸ್ಪಂದಿಸಿ ನಟಿಸಿದೆ. ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಿ.ಜಿ. ಉತ್ತಮ ಸ್ಕೋರು ಮಾಡಿದ್ದಾರೆ. ಸಂಯುಕ್ತಾ ಬೆಳವಾಡಿ ಕೆ.ಆರ್.ಪೇಟೆ ಜೊತೆಗೆ ಮ್ಯಾಚ್ ಆಗಿಲ್ಲ. ಆಕೆಯ ತವರುಮನೆಯ ಶ್ರೀಮಂತಿಕೆಗೂ ಆಕೆಯ ಪಾತ್ರಕ್ಕೂ ಹೊಂದಾಣಿಕೆಯೇ ಆಗುವುದಿಲ್ಲ.

ನಾಯಿಯೊಂದಿಗಿನ ಬಾಂಧವ್ಯ, ಡಾಗ್ ಮಾಫಿಯಾದ ಜೊತೆಗೆ ಆಟೋ ಚಾಲಕರ ಬದುಕಿನ ನೆಮ್ಮದಿಯನ್ನೆಲ್ಲಾ ನುಂಗಿ ನೀರು ಕುಡಿಯುವ ಫೈನಾನ್ಸ್ ದಂಧೆ ವಾಸ್ತವಕ್ಕೆ ಕನ್ನಡಿ ಹಿಡಿದಂತೆ ಚಿತ್ರಿತಗೊಂಡಿದೆ. ನೈಜ ಘಟನೆಯನ್ನು ಆಧರಿಸಿ ವಿವೇಕಾನಂದ ಬರೆದ ಕಥೆಯನ್ನು ದೃಶ್ಯ ರೂಪಕ್ಕಿಳಿಸುವಲ್ಲಿ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಬಹುತೇಕ ಗೆದ್ದಿದ್ದಾರೆ. ಶರತ್ ಚಕ್ರವರ್ತಿ ಬರೆದಿರುವ ಮಾತುಗಳಲ್ಲಿ ಸೊಗಡಿನ ಜೊತೆಗೆ ತೂಕವೂ ಇದೆ. ಆರಂಭದಲ್ಲಿ ಬಾಹುಬಲಿಯನ್ನು ತೋರಿಸಿದಷ್ಟು ಕಲಾತ್ಮಕವಾಗಿ ಇಡೀ ಸಿನಿಮಾವನ್ನು ಯಾಕೆ ಸೆರೆ ಹಿಡಿದಿಲ್ಲ ಅಂತಾ ಛಾಯಾಗ್ರಾಹಕ ಚಿದಾನಂದ ಅವರನ್ನೇ ಕೇಳಬೇಕು. ಕಾರ್ತಿಕ್ ಶರ್ಮಾ ಸಂಗೀತ ಇಂಪಾಗಿದೆ. ಕೆ.ಎಂ. ಪ್ರಕಾಶ್ ಕತ್ತರಿ ಕೆಲಸದಲ್ಲಿ ಹೇಳಿಕೊಳ್ಳುವಂತಾ ಕ್ರಿಯಾಶೀಲತೆ ಕಾಣುವುದಿಲ್ಲ.

ಪ್ರಾಣಿಪ್ರೀತಿ ಇರುವವರು ಮಾತ್ರವಲ್ಲ, ಜೀವಪರ ಕಾಳಜಿ ಇರುವವರು, ಸೆಂಟಿಮೆಂಟ್ ಇರೋ ಜನರೆಲ್ಲಾ ನೋಡಬಹುದಾದ ಮತ್ತು ನೋಡಲೇಬೇಕಾದ ಚಿತ್ರ ನಾನು ಮತ್ತು ಗುಂಡ.

CG ARUN

ಗುಳೇದಗುಡ್ಡದ ಹುಡುಗಿ ಜೊತೆ ಮದುವೆ ಮಾಡ್ರಿ!

Previous article

ಖಾಕಿ ತೊಟ್ಟವರು ಮಾತ್ರ ಪೊಲೀಸರಲ್ಲ!

Next article

You may also like

Comments

Leave a reply

Your email address will not be published. Required fields are marked *