ಸಾಲು ಸಾಲು ವಿವಾದಗಳಿಗೆ ಸಿಲುಕಿ ಕಡೆಗೂ ರಿಲೀಸ್ ಗೆ ರೆಡಿಯಾಗಿರುವ ನರೇಂದ್ರ ಮೋದಿ ಬಯೋಪಿಕ್ ಈಗಾಗಲೇ ಟೀಸರ್ ಮತ್ತು ಟ್ರೇಲರ್ ನಿಂದ ಬಹಳಷ್ಟು ಸದ್ದು ಮಾಡಿದೆ. ರಿಲೀಸ್ ಗೆ ಕೆಲವೇ ದಿನಗಳಿರುವಾಗಲೇ ಚಿತ್ರತಂಡ ಮತ್ತೊಂದು ಟ್ರೇಲರ್ ರಿಲೀಸ್ ಮಾಡಿದೆ.
2ನೇ ಟ್ರೇಲರ್ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಸರ್ಕಾರವನ್ನು ಕಾಲೆಳೆಯಲಾಗಿದೆ. ಯುಪಿಎ ಸರ್ಕಾರದಲ್ಲಿ ನಡೆದ ಹಗರಣಗಳ ಬಗೆಗಿನ ಇಂಟ್ರಸ್ಟಿಂಗ್ ಡೈಲಾಗ್ ಗಳಿವೆ. ಇನ್ನು,ಟ್ರೇಲರ್ ನಲ್ಲಿ ಸಾಮಾನ್ಯ ಬಾಲಕನೊಬ್ಬ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿ, ಬಡತನದಲ್ಲಿ ಬೆಳೆದು ರಾಜಕೀಯ ನಾಯಕನಾಗಿ ಮುಂದೆ ಇಡೀ ದೇಶದ ಪ್ರಜಾಪ್ರಭುತ್ವ ಆಳುವ ಶ್ರೇಷ್ಠ ಪ್ರಧಾನಿ ಪಟ್ಟವನ್ನು ಹೇಗೆ ಅಲಂಕರಿಸುತ್ತಾರೆ ಅನ್ನೋದರ ರೋಚಕ ಕಥೆಯನ್ನು ಅತ್ಯದ್ಭುತವಾಗಿ ಹೆಣೆಯಲಾಗಿದೆ.
https://www.youtube.com/watch?v=ekwuv6a97JQ
ಮೋದಿಯವರ 64 ವರ್ಷಗಳ ಜರ್ನಿಯಲ್ಲಿ ಅವರು ಎದುರಿಸಿದ ಕಷ್ಟದ ಸವಾಲುಗಳು, ಗುಜರಾತ್ ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕ್ರಮಗಳು, ಗುಜರಾತ್ ನರಮೇಧ ಹತ್ಯಾಕಾಂಡ, ಆರ್ ಎಸ್ ಎಸ್ ಸಂಘಟನೆಯ ಮೂಲಕ ಸಾಮಾಜಿಕ, ರಾಜಕೀಯವಾಗಿ ಕೈಗೊಂಡ ಸೇವೆಗಳು, ಪ್ರಧಾನಿಯಾಗಿ ಭಾರತದ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳು ಸೇರಿದಂತೆ ಹಲವು ಅಂಶಗಳನ್ನು ಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಚಿತ್ರದಲ್ಲಿ ಹಲವು ವಿಭಿನ್ನ ಗೆಟಪ್ನಲ್ಲಿ ಮೋದಿ ಮಿಂಚಲಿದ್ದಾರೆ. ಇನ್ನುಳಿದಂತೆ ಬೊಮಾನ್ ಇರಾನಿ, ಮನೋಜ್ ಜೋಷಿ , ಕರಣ್ ಪಟೇಲ್, ಅಂಜನ್ ಶ್ರೀವಾತ್ಸವ್, ಪ್ರಶಾಂತ್ ನಾರಾಯಣ್ ಸೇರಿದಂತೆ ಬಹುತೇಕರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಒಮಂಗ್ ಕುಮಾರ್ ನಿರ್ದೇಶನವಿದ್ದು ಇದೇ ಮೇ.24 ಕ್ಕೆ ಪ್ರಪಂಚದಾದ್ಯಂತ ಒಟ್ಟು 23 ಭಾಷೆಗಳಲ್ಲಿ ತೆರೆ ಕಾಣಲಿದೆ.