ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸುದ್ದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ಗೆ ಮತ್ತಷ್ಟು ತಾರೆಯರು ಸೇರ್ಪಡೆಗೊಂಡಿದ್ದಾರೆ. ಒಮಂಗ್ ಕುಮಾರ್ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಈಗಾಗಲೇ ವಿವೇಕ್ ಒಬೆರಾಯ್ ಆಯ್ಕೆಯಾಗಿರುವುದು ಸರಿಯಷ್ಟೆ. ಚಿತ್ರಕ್ಕಾಗಿ ವಿವೇಕ್ ತಮ್ಮ ಹೆಸರನ್ನು ವಿವೇಕಾನಂದ ಒಬೆರಾಯ್ ಎಂದು ಬದಲಿಸಿಕೊಂಡಿದ್ದಾರೆ! ಇದೀಗ ಚಿತ್ರಕ್ಕೆ ಮತ್ತಷ್ಟು ತಾರೆಯರ ಸೇರ್ಪಡೆಯಾಗಿದೆ.
ದರ್ಶನ್ ಕುಮಾರ್, ಬೊಮನ್ ಇರಾನಿ, ಝರೀನಾ ವಹಾಬ್, ಮನೋಜ್ ಜೋಷಿ, ಪ್ರಶಾಂತ್ ನಾರಾಯಣನ್, ಬರ್ಕಾ ಬಿಶ್ಟ್ ಸೇನ್ಗುಪ್ತಾ, ಅಕ್ಷತ್ ಸಲೂಜಾ, ಅಂಜನ್ ಶ್ರೀವಾತ್ಸವ್, ರಾಜೇಂದ್ರ ಗುಪ್ತಾ, ಯತಿನ್ ಕಾರ್ಯೇಕರ್ ಚಿತ್ರದ ತಾರಾಬಳಗಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರು ಯಾವ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನುವ ಬಗೆಗಿನ್ನೂ ಖಚಿತ ಮಾಹಿತಿ ಇಲ್ಲ. ಚಿತ್ರದಲ್ಲಿ ನರೇಂದ್ರ ಮೋದಿ ಬಾಲ್ಯ, ಗುಜರಾತ್ನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವಧಿ ಹಾಗೂ ಪ್ರಧಾನಮಂತ್ರಿ ಪಟ್ಟಕ್ಕೇರಿದ ಹಾದಿಯನ್ನು ಚಿತ್ರಿಸಲಾಗುತ್ತದೆ.
ಸಂದೀಪ್ ಸಿಂಗ್ ಮತ್ತು ನಟ ಸುರೇಶ್ ಒಬೆರಾಯ್ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟರ್ ಜನವರಿ ೭ರಂದು ದೊಡ್ಡ ಸಮಾರಂಭದಲ್ಲಿ ಬಿಡುಗಡೆಯಾಗಿತ್ತು. ’ಪಿಎಂ ನರೇಂದ್ರಮೋದಿ’ ಹಿಂದಿ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾಗಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಇಲ್ಲವೇ ಚುನಾವಣೆ ಸಮಯದಲ್ಲೇ ಚಿತ್ರವನ್ನು ತೆರೆಗೆ ತರುವುದು ನಿರ್ದೇಶಕ ಒಮಂಗ್ ಕುಮಾರ್ ಯೋಜನೆ. ಇದೊಂದು ಮಹತ್ವಾಕಾಂಕ್ಷೆಯ ಸಿನಿಮಾ. ಈ ಪ್ರತಿಷ್ಠಿತ ಚಿತ್ರಕ್ಕಾಗಿ ಅನುಭವಿ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಒಮಂಗ್. ಈ ಹಿಂದೆ ಒಮಂಗ್ ಕುಮಾರ್ ’ಮೇರಿ ಕೋಮ್’ (೨೦೧೪) ಮತ್ತು ’ಸರಬ್ಜಿತ್’ (೨೦೧೬) ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದರು.
#
No Comment! Be the first one.