ವರ್ಷದ ಹಿಂದೆ ತೆರೆ ಕಂಡಿದ್ದ ಒನ್ಸ್ ಮೋರ್ ಕೌರವ ಚಿತ್ರದ ನಾಯಕನಾಗಿ ನಟಿಸಿದ್ದವರು ನರೇಶ್ ಗೌಡ. ಒಟ್ಟಾರೆ ಚಿತ್ರದ ಏಳುಬೀಳಿನಾಚೆಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಒಳ್ಳೆ ನಟನಾಗಿ ರೂಪುಗೊಳ್ಳುತ್ತಾರೆಂಬ ಭರವಸೆಯನ್ನಂತೂ ನರೇಶ್ ಹುಟ್ಟಿಸಿದ್ದರು. ಆದರೆ, ಆ ನಂತರದಲ್ಲಿ ಸದ್ದಿಲ್ಲದಂತಿದ್ದ ನರೇಶ್ ಗೌಡ ಈಗೇನು ಮಾಡುತ್ತಿದ್ದಾರೆ? ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆಗಳಿಗೆ ಅವರೇ ಉತ್ತರವಾಗಿದ್ದಾರೆ. ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಚಿತ್ರದಲ್ಲಿಯೇ ಯಾವತ್ತೂ ಮರೆಯದ ಒಂದಷ್ಟು ಪಾಠಗಳನ್ನು ಕಲಿತಿರೋ ನರೇಶ್ ಎಲ್ಲ ನಿರಾಸೆಗಳನ್ನೂ ಕೊಡವಿಕೊಂಡು ಮೇಲೆದ್ದು ನಿಲ್ಲಲು ತಯಾರಾಗುತ್ತಿದ್ದಾರೆ!
ಅವರ ಮಾತುಗಳ ತುಂಬಾ ಒನ್ಸ್ ಮೋರ್ ಕೌರವ ಚಿತ್ರದ ಹಿಂಚುಮುಂಚಿನ ವಿದ್ಯಮಾನಗಳ ಬಗೆಗೊಂದು ವಿಷಾದ, ಕಾಸು ಸುರಿಯೋ ನಿರ್ಮಾಪಕರು ಸಿಕ್ಕಿದರೆ ಎಲ್ಲ ದಿಕ್ಕಿನಿಂದಲೂ ಹಿಂಡಿ ಹಿಪ್ಪೆ ಮಾಡುವವರ ಬಗೆಗೊಂದು ಅಸಹ್ಯ, ಮುಂದೊಂದು ಹಿಂದೊಂದು ಎಂಬಂಥಾ ನವರಂಗೀ ಆಸಾಮಿಗಳ ಬಗೆಗೆ ತಣ್ಣಗಿನ ಸಿಟ್ಟು ಮತ್ತು ಇದೆಲ್ಲವನ್ನೂ ಪಾಠ ಅಂದುಕೊಂಡು ಮತ್ತೆ ಪುಟಿದೇಳುವ ಹುಮ್ಮಸ್ಸು ನಿಗಿನಿಗಿಸುತ್ತದೆ!
ನರೇಶ್ ಗೌಡರ ಉಳಿದ ಕಥೆ, ಮುಂದಿನ ಕನಸುಗಳ ಬಗ್ಗೆ ಹೇಳುವ ಮೊದಲು ಆರಂಭದಲ್ಲೇ ಎಡವುವಂತೆ ಮಾಡಿದ ಒನ್ಸ್ ಮೋರ್ ಕೌರವ ಚಿತ್ರದ ಬಗ್ಗೆ ಹೇಳಲೇ ಬೇಕು. ಈ ಚಿತ್ರ ಭಾರೀ ಸೌಂಡಿನೊಂದಿಗೇ ಆರಂಭವಾಗಿತ್ತಲ್ಲಾ? ಹಳ್ಳಿ ಘಮಲಿನ ಚಿತ್ರಗಳಿಗೆ ಹೆಸರಾದ ಎಸ್ ಮಹೇಂದರ್ ಬಹು ಕಾಲದ ನಂತರ ನಿರ್ದೇಶನಕ್ಕಿಳಿದಿದ್ದರಿಂದ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ ಮಹೇಂದರ್ ಥೇಟು ಜಡಭರಥನಂತೆ ಓಬೀರಾಯನ ಕಾಲದ ಕಾನ್ಸೆಪ್ಟಿನೊಂದಿಗೆ ಅಖಾಡಕ್ಕಿಳಿದಿದ್ದರು. ಈವತ್ತಿಗೆ ಮಹೇಂದರ್ ಚಿತ್ರಕ್ಕೆ ಸೋಲಾದುದರ ಎಲ್ಲ ಭಾರವನ್ನೂ ನರೇಶ್ ಗೌಡ ಹೆಗಲಿಗೆ ನೇತುಹಾಕಿ ಹೊಸಾ ಮಿಕಗಳ ಭೇಟೆಗಿಳಿದಿದ್ದಾರೆ. ಆದರೆ ನರೇಶ್ ಹೇಳೋ ಅಸಲೀ ಕಥೆ ಬೇರೆಯದ್ದೇ ಇದೆ!
ಈ ಚಿತ್ರವನ್ನು ಆರಂಭಿಸುವ ಮುನ್ನ ಮೂರು ತಿಂಗಳ ಕಾಲ ಮಹೇಂದರ್ ನರೇಶ್ ಕಚೇರಿಗೆ ಎಡತಾಕಿದ್ದರು. ರಸವತ್ತಾಗಿ ಕಥೆಯನ್ನೂ ಹೇಳಿದ್ದರು. ಕೌರವ ಚಿತ್ರದ ಮೂಲಕವೇ ವಿಜೃಂಭಿಸಿದ್ದ ಬಿ ಸಿ ಪಾಟೀಲ್ ಅವರು ತಂದೆಯ ಪಾತ್ರದಲ್ಲಿ ಕೌರವನಾಗಿ ನಟಿಸುತ್ತಾರೆಂದೂ ಮಹೇಂದರ್ ಹೇಳಿದ್ದರು. ಅವರೇ ಪೊಲೀಸ್ ಆಫೀಸರ್ ಪಾತ್ರವನ್ನು ನರೇಶ್ ಅವರೇ ನಿರ್ವಹಿಸುವಂತೆ ಒತ್ತಾಯ ಮಾಡಿದ್ದರು. ಬಿ ಸಿ ಪಾಟೀಲ್ ಜೊತೆ ನಟಿಸೋ ಅವಕಾಶ ಇರೋದರಿಂದ, ಪಳಗಿದ ನಿರ್ದೇಶಕರು ತಿದ್ದೋದರಿಂದ ನಟನಾಗಿ ನೆಲೆ ನಿಲ್ಲಬಹುದೇನೋ ಎಂಬ ಸಣ್ಣ ಆಸೆ ಮತ್ತು ಧೈರ್ಯದಿಂದ ನರೇಶ್ ಕೂಡಾ ಒಪ್ಪಿಕೊಂಡಿದ್ದರು. ಆದರೆ ಅಸಲೀ ಕಥೆ ಶುರುವಾಗಿದ್ದು ಚಿತ್ರೀಕರಣ ಶುರುವಾದ ನಂತರವೇ!
ಅದುವರೆಗೂ ತಂದೆಯ ಪಾತ್ರದಲ್ಲಿ ಬಿ ಸಿ ಪಾಟೀಲ್ ನಟಿಸುತ್ತಾರೆಂದುಕೊಂಡಿದ್ದ ನರೇಶ್ಗೆ ಚಿತ್ರೀಕರಣದ ಸಂದರ್ಭದಲ್ಲಿಯೇ ಶಾಕು ಕಾದಿತ್ತು. ಅಲ್ಲಿ ಪಾಟೀಲರ ಸುಳಿವೇ ಇರಲಿಲ್ಲ. ಈ ಬಗ್ಗೆ ಕೇಳಿದರೆ ‘ಹೇ ಅವ್ರು ರೆಸ್ಪಾಂಡ್ ಮಾಡ್ತಿಲ್ಲ. ಅವ್ರಿಗೆ ಬ್ರೇಕ್ ನೀಡಿದ್ದೇ ನಾನು. ಈಗದರ ನೆನಪಿಲ್ಲ. ಅವ್ರಲ್ದಿದ್ರೆ ಮತ್ತೊಬ್ರು. ನೀವೇನೂ ತಲೆ ಕೆಡಿಸ್ಕೋಬೇಡಿ’ ಎಂಬ ಭೋಳೇ ಉತ್ತರ ಎದುರಾಗಿತ್ತು. ಆ ನಂತರ ತಮ್ಮ ಪಾತ್ರವೇ ಬರಖತ್ತಾಗೋದಿಲ್ಲ ಎಂಬ ವಿಚಾರ ಚಿತ್ರೀಕರಣದ ಹಂತದಲ್ಲಿಯೇ ನರೇಶ್ ಅವರಿಗೆ ಅರ್ಥವಾಗಿ ಹೋಗಿತ್ತು. ಈ ಬಗ್ಗೆ ಮಾತಾಡಿದರೆ ಮಹೇಂದರ್ ಅವರ ಕಡೆಯಿಂದ ಬರುತ್ತಿದ್ದದ್ದು ತಾನು ಎಂತೆಂಥಾ ಸಿನಿಮಾ ಕೊಟ್ಟ ನಿರ್ಮಾಪಕ ಎಂಬ ಒಣ ಜಂಭ ಮಾತ್ರ.
ಇದಾದ ಮೇಲೆ ಪ್ರಮೋಷನ್ ವಿಚಾರವಾಗಿಯೂ ಮಹೇಂದರ್ ದಂಗಾಗುವಂತೆ ನಡೆದುಕೊಳ್ಳಲಾರಂಭಿಸಿದ್ದರು. ಚಾನೆಲ್ಗಳಲ್ಲಿ ಪ್ರಮೋಷನ್ ಪ್ರೋಗ್ರಾಮಿದ್ದರೆ ಅದಕ್ಕೂ ಚಕ್ಕರ್. ಮಜಾ ಟಾಕೀಸ್ ಪ್ರೋಗ್ರಾಮಿಗೆ ಹೋಗಿ ಅಂದರೆ ಅದೊಂದು ಪ್ರೋಗ್ರಾಮೇನ್ರೀ ಎಂಬಂಥಾ ಧಾಡಸಿ ಉತ್ತರ. ಆದರೆ ಆ ಹೊತ್ತಿಗಾಗಲೇ ಮಹೇಂದರ್ ಆರಂಭದಲ್ಲಿ ಕೊಟ್ಟಿದ್ದ ಬಜೆಟ್ಟು ಮೂರು ಪಟ್ಟಾಗಿತ್ತು. ಒಂದು ಕೋಟಿ ಕಾಸು ಸುರಿದರೆ ಸಾಕೆಂದಿದ್ದ ಮಹೇಂದರ್ ಬಣ್ಣ ಬಣ್ಣದ ಮಾತಾಡಿ ನಾಲಕ್ಕೂ ಚಿಲ್ಲರೆ ಕೋಟಿ ಖರ್ಚು ಮಾಡಿಸಿದ್ದರು. ಇದು ಹೀಗೇ ಇದ್ದರೆ ಕಷ್ಟ ಅಂದುಕೊಂಡ ನರೇಶ್ ತಾವೇ ಪ್ರಮೋಷನ್ ನಡೆಸಿದರೂ ಮಹೇಂದರ್ ಅವರದ್ದು ಇದೆಲ್ಲ ವರ್ಕೌಟ್ ಆಗಲ್ಲ ಎಂಬಂಥಾ ನಿರಾಸಕ್ತಿ.
ಆದರೆ, ಅದುವರೆಗೂ ಮನೆಯಲ್ಲಿಯೇ ಇದ್ದ ಮಹೇಂದರ್ ಚಿತ್ರ ಬಿಡುಗಡೆಯಾಗೋ ಮುನ್ನಾ ದಿನ ನರೇಶ್ ಅವರ ಮುಂದೆ ನಿಂತಿದ್ದರು. ಮನೆ ಬಾಡಿಗೆ ಕಟ್ಟಿಲ್ಲ ಅಂತ ಗೋಳು ತೋಡಿಕೊಂಡು ಐವತ್ತು ಸಾವಿರ ಇಸಿದುಕೊಂಡು ಹೋಗಿದ್ದರು. ಅದಕ್ಕೂ ಮುನ್ನ ನರೇಶ್ ಖುದ್ದಾಗಿ ನಿರ್ಮಾಪಕ ಭೋಗೇಂದ್ರ ಬಾಡಿಗೆಗಿದ್ದ ಮನೆಯನ್ನೇ ಮೂರು ಲಕ್ಷ ಕೊಟ್ಟು ಮಹೇಂದರ್ ಅವರಿಗೆ ಕೊಡಿಸಿದ್ದರು. ಇಂಥಾ ಮಹೇಂದರ್ ಈವತ್ತು ಒನ್ಸ್ ಮೋರ್ ಕೌರವ ಚಿತ್ರದ ವಿಚಾರವಾಗಿ ನರೇಶ್ ಮೇಲೇ ತಪ್ಪು ಹೊರಿಸುತ್ತಾ ಓಡಾಡಿಕೊಂಡಿದ್ದಾರಂತೆ. ಹೇ ಅವನೇ ಮೂರು ವರ್ಷ ನನ್ನ ಮನೆ ಬಾಗಿಲಿಗೆ ಅಲೆದಿದ್ದ ಎಂಬಂಥಾ ಮಾತುಗಳನ್ನೂ ಆಡುತ್ತಿದ್ದಾರಂತೆ. ಇವಿಷ್ಟನ್ನೂ ಕೂಡಾ ಹಳೇ ಗಾಯವೊಂದನ್ನು ಕೆದಕಿಕೊಂಡಷ್ಟೇ ನೋವಿನಿಂದ ನರೇಶ್ ಗೌಡ ತೆರೆದಿಡುತ್ತಾರೆ!
ಹೀಗೆ ಮೊದಲ ಸಿನಿಮಾದಲ್ಲಿಯೇ ಕೊನೆ ಮೊದಲಿಲ್ಲದ ಪಾಠ ಕಲಿತಿರುವ ನರೇಶ್ ಗೌಡ ಅವರಿಗೆ ನಟನಾಗಬೇಕೆಂಬ ಕನಸೇನೂ ಇರಲಿಲ್ಲವಂತೆ. ಕಡೆಗೆ ತಾನೇ ತಾನಾಗಿ ಹೀರೋ ಆಗುವ ಅವಕಾಶ ಒದಗಿ ಬಂದಾಗಲೂ ಅವರ ಒಲವಿದ್ದದ್ದು ಖಳನ ಪಾತ್ರದ ಮೇಲೆಯೇ. ಹುಲಿಯೂರುದುರ್ಗದ ಉಜ್ಜಿನಿ ಮೂಲದವರಾದ ನರೇಶ್ ಬ್ಯುಸಿನೆಸ್ ಮೂಲಕವೇ ಮೇಲೆದ್ದು ನಿಂತವರು. ಮಾಮೂಲಿ ಸಿನಿಮಾ ವ್ಯಾಮೋಹದ ಹೊರತಾಗಿ ಅವರಿಗೆ ಬೇರ್ಯಾವ ಕನಸೂ ಇರಲಿಲ್ಲ. ಇಂಥಾ ಸಂದರ್ಭದಲ್ಲಿಯೇ ಅಚಾನಕ್ಕಾಗಿ ಪರಿಚಯವಾದವರು ಇತ್ತೀಚೆಗೆ ನಿಧನ ಹೊಂದಿದ್ದ ನಿರ್ದೇಶಕ ಪಿ ಎನ್ ಸತ್ಯ. ಪಾಗಲ್ ಚಿತ್ರಕ್ಕೆ ಮೂವತ್ತು ಲಕ್ಷ ಸುರಿದರೂ ಒಂದು ರೂಪಾಯಿಯೂ ವಾಪಾಸಾಗಿರಲಿಲ್ಲ. ಆ ಬಳಿಕ ಅನಾಮಿಕರಾಗಿ ಒಂದಷ್ಟು ಚಿತ್ರಗಳಿಗೆ ನಿರ್ಮಾಪಕರಾಗಿದ್ದ ನರೇಶ್ ಶಿವಾಜಿ ನಗರ ಚಿತ್ರದಲ್ಲಿ ನಟಿಸಿದ್ದರು. ಆ ಸಂದರ್ಭದಲ್ಲಿಯೇ ಒಂದಷ್ಟು ಕಹಿ ಉಂಡಿದ್ದರಾದರೂ ಸತ್ತ ವ್ಯಕ್ತಿಯ ಬಗ್ಗೆ ಕೆಡುಕು ಮಾತಾಡಲು ಅವರಿಗಿಷ್ಟವಿಲ್ಲ ಅನಿಸುತ್ತದೆ.
ಹೀಗೆ ಆರಂಭದಿಂದ ಇಲ್ಲಿಯವರೆಗೂ ಕಹಿಯನ್ನೇ ಅನುಭವಿಸುತ್ತಾ ಬಂದ ನರೇಶ್ಗೀಗ ಗಾಂಧಿನಗರ ಅರ್ಥವಾಗಿದೆ. ನಿರ್ಮಾಪಕರನ್ನು ಕಾಮಧೇನು ಎಂಬಂತೆ ಡೌ ಮಾಡೋ ಕೆಲ ಮಂದಿ ಕೆಚ್ಚಲನ್ನೇ ಕತ್ತರಿಸುತ್ತಾರೆಂಬ ವಾಸ್ತವವೂ ಅವರಿಗರ್ಥವಾಗಿದೆ. ಒನ್ಸ್ ಮೋರ್ ಕೌರವ ಚಿತ್ರವಾದ ಮೇಲೆ ಬಂದವರಿಗೆಲ್ಲ ಖಡಕ್ ಆಗಿಯೇ ಮಾತಾಡಿ ಸಾಗಹಾಕಿದ್ದಾರೆ. ಸದ್ಯ ಎಂ ಡಿ ಶ್ರೀಧರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲಿ ನರೇಶ್ ಅವರಿಗೊಂದು ಪಾತ್ರ ಸಿಕ್ಕಿದೆ. ಬೋಗೇಂದ್ರ ಅವರ ಕಡೆಯಿಂದ ಕಿರಾತಕ ಚಿತ್ರದಲ್ಲೂ ಒಂದು ಪಾತ್ರ ಒಲಿದು ಬಂದಿದೆ. ಅದಾದ ನಂತರ ಮತ್ತೊಂದು ಹೊಸಾ ಬಗೆಯ ಚಿತ್ರದ ಮೂಲಕ ಎದ್ದು ನಿಲ್ಲೋ ಕಸುವಿನೊಂದಿಗೆ ನರೇಶ್ ಹೊರಟಿದ್ದಾರೆ.
ನಿರ್ದೇಶಕ ಲಕ್ಕಿ ಶಂಕರ್ ಹೇಳಿದ ಕಥೆಯೊಂದು ನರೇಶ್ ಅವರಿಗೆ ಇಷ್ಟವಾಗಿದೆ. ಅದು ಖಡಕ್ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣವರ್ ಜೀವನಾಧಾರಿತ ಚಿತ್ರ. ಈ ಕುರಿತಾಗಿ ಈಗಾಗಲೇ ನರೇಶ್ ರವಿಯವರನ್ನು ಭೇಟಿಯಾಗಿದ್ದಾರಂತೆ. ಈ ಖಡಕ್ ಅಧಿಕಾರಿಯ ಜೀವನಾಧಾರಿತ ಚಿತ್ರದೊಂದಿಗೆ ನರೇಶ್ ಇದುವರೆಗೆ ಉಂಡಿರೋ ಕಹಿ ಮರೆಯಲು ಸಜ್ಜಾಗಿದ್ದಾರೆ.
#
No Comment! Be the first one.