ಬಿಗ್ ಬಾಸ್ ಅನ್ನೋ ಕಾರ್ಯಕ್ರಮದಿಂದ ಫೇಮಸ್ಸಾದವರು ಪ್ರಥಮ್. ಆದರೆ ಪ್ರಥಮ್ ಈಗ ಬಿಗ್ ಬಾಸ್ ಹೊರತಾಗಿಯೂ  ಜನಪ್ರಿಯ ಮತ್ತು ಸ್ವಯಂ ಘೋಷಿತ ಕರ್ನಾಟಕದ ಆಸ್ತಿ. ಇಂಥ ಪ್ರಥಮ್ ಈಗ ದೇವ್ರಂಥಾ ಮನುಷ್ಯ ಮತ್ತು ಎಂಎಲ್‌ಎ ಚಿತ್ರಗಳ ನಂತರ ನಟಿಸಿರುವ ಸಿನಿಮಾ ನಟಭಯಂಕರ.

ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಪ್ರಥಮ್ ಸ್ವತಃ ನಿರ್ದೇಶನ ಮಾಡುತ್ತಿರೋದು ಅಸಲೀ ವಿಶೇಷ. ಅಂದಹಾಗೆ ಈ ಬಾರಿ ಪ್ರಥಮ್ ಗೆದ್ದೇ ತೀರ ಬೇಕೆಂಬ ಛಲದೊಂದಿಗೆ ಪ್ರಾಮಾಣಿಕ ಪ್ರಯತ್ನವೊಂದಕ್ಕೆ ಮುಂದಾಗಿರುವ ಸ್ಪಷ್ಟ ಸೂಚನೆಗಳಿವೆ. ಈ ಟೈಟಲ್ ನೋಡಿದರೇನೇ ಈ ಚಿತ್ರದ ಕಥಾ ಹಂದರ ಏನೆಂಬ ಕುತೂಹಲ ಹುಟ್ಟಿಕೊಳ್ಳುತ್ತದೆ. ಇದು ಕಾಮಿಡಿ, ಹಾರರ್ ಜಾನರಿನ ಸಿನಿಮಾ ಅನ್ನೋದನ್ನು ಬಿಟ್ಟರೆಬೇರೆ ಯಾವ ಸುಳಿವನ್ನೂ ಕೂಡಾ ಪ್ರಥಮ್ ಬಿಟ್ಟುಕೊಟ್ಟಿಲ್ಲ. ಆದರೆ ಪಕ್ಕಾ ಡಿಫರೆಂಟಾದೊಂದು ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ. ಅಷ್ಟಕ್ಕೂ ಪ್ರಥಮ್ ಒಂದಷ್ಟು ಸದ್ದು ಮಾಡಿದ್ದೇ ನಿರ್ದೇಶನ ವಿಭಾಗದಲ್ಲಿ. ಬಿಗ್‌ಬಾಸ್ ಶೋ ಮುಗಿಸಿಕೊಂಡು ಬಂದ ನಂತರ ಅದೇಕೋ ಹೀರೋ ಆಗುವತ್ತಲೇ ಹೆಚ್ಚು ಫೋಕಸ್ ಮಾಡಿದ್ದರು. ಇದೀಗ ನಟಭಯಂಕರ ಚಿತ್ರದ ಮೂಲಕ ಪ್ರಥಮ್ ನಿರ್ದೇಶನವನ್ನೂ ಕೈಗೆತ್ತಿಕೊಂಡಿದ್ದಾರೆ.

ಸದ್ಯ ನಟಭಯಂಕರನ ‘ಗೀತಾ ಗೀತಾ ಗಾಂಚಲಿ ಗೀತಾ ಎನ್ನುವ ರೊಮ್ಯಾಂಟಿಕ್ ಹಾಡಿನ ಲಿರಿಕಲ್ ವಿಡಿಯೋವನ್ನು ರಕ್ಷಿತ್ ಶೆಟ್ಟಿ ರಿಲೀಸು ಮಾಡಿದ್ದಾರೆ. ರಕ್ಷಿತ್ ಈಗ ಶ್ರೀಮನ್ನಾರಾಯಣ ಚಿತ್ರದ ಬಿಡುಗಡೆಯ ಒತ್ತಡದಲ್ಲಿದ್ದಾರೆ. ತೀರಾ ಆತ್ಮೀಯರದ್ದು ಬಿಟ್ಟರೆ ಬೇರೆ ಯಾರ ಫೋನು ರಿಸೀವ್ ಮಾಡಲೂ ಅವರಿಗೆ ಪುರುಸೊತ್ತಿಲ್ಲ. ಇದರ ನಡುವೆಯೇ ಪ್ರಥಮ್ ಮೇಲಿನ ಪ್ರೀತಿಯಿಂದ ನಟಭಯಂಕರ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಈ ಹಾಡನ್ನು ಸಂಜಿತ್ ಹೆಗ್ಡೆ ಚೆಂದಗೆ ಹಾಡಿದ್ದಾರೆ. ಪ್ರದ್ಯೋತನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.

ಮತ್ತೊಂದು ವಿಶೇಷವಾದ ಸುದ್ದಿ ಇದೆ. ಅದು ನಟಭಯಂಕರ ಚಿತ್ರಕ್ಕೂ ಕಿಚ್ಚಾ ಸುದೀಪ್ ಅವರಿಗೂ ಇರುವ ಲಿಂಕು. ಪ್ರಥಮ್ ಪ್ರಕಾರ ಈ ಚಿತ್ರ ಶುರುವಾಗಲು ಪ್ರಧಾನ ಕಾರಣ ಸುದೀಪ್ ಅವರಂತೆ. ಪ್ರಥಮ್ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದಾದ ನಂತರ ತನ್ನ ತಾಯಿ ಸುದೀಪ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಆಸೆ ವ್ಯಕ್ತಪಡಿಸಿದ ವಿಚಾರ ಹೇಳಲು ಸುದೀಪ್ ಅವರ ಬಳಿ ಹೋಗಿದ್ದರಂತೆ. ಅದೇ ಸಂದರ್ಭದಲ್ಲಿ ಬಿಗ್‌ಬಾಸ್ ಮನೆಯಲ್ಲಿ ತಮ್ಮಿಂದೇನದರೂ ತಪ್ಪಾಗಿದ್ದರೆ ಮನ್ನಿಸುವಂತೆಯು ಮನವಿ ಮಾಡಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ಆತ್ಮೀಯವಾಗಿ ಮಾತಾಡಿದ ಸುದೀಪ್, ಜನರು ನಿಮ್ಮನ್ನು ಮೆಚ್ಚಿಕೊಂಡಿದ್ದರಿಂದಲೇ ನೀವು ಗೆದ್ದಿದ್ದೀರಿ. ಆದರೆ ಹೊರಗೆ ಹೋದ ನಂತರ ಜನರ ನಿರೀಕ್ಷೆಯನ್ನು ನೀವು ಹೇಗೆ ನಿಜವಗಿಸುತ್ತೀರಿ ಅನ್ನೋದು ಮುಖ್ಯ. ಬಹುಶಃ ನೀವು ನಟನಾಗಬಹುದು. ಆದರೆ ನೀವು ಬಿಗ್‌ಬಾಸ್ ಮನೆಯೊಳಗೆ ಗುರುತಿಸಿಕೊಂಡಿದ್ದು ನಿರ್ದೇಶಕನಾಗಿ. ನಾನೂ ಕೂಡಾ ನಿಮ್ಮನ್ನು ಒಂದೊಳ್ಳೆ ಚಿತ್ರದ ಮೂಲಕ ನಿರ್ದೇಶಕನನ್ನಾಗಿ ನೋಡಲು ಇಷ್ಟ ಪಡುತ್ತೇನೆ ಅಂದಿದ್ದರಂತೆ.

ಅದನ್ನೇ ಮನಸಲ್ಲಿಟ್ಟುಕೊಂಡಿದ್ದ ಪ್ರಥಮ್ ಆ ನಂತರ ನಟನಾಗಲು ಬಂದ ಅವಕಾಶಗಳನ್ನು ಒಪ್ಪಿಕೊಂಡರೂ ಅಖಂಡ ಒಂದೂವರೆ ವರ್ಷಗಳಿಂದ ನಟಭಯಂಕರ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಸುದೀಪ್ ಅವರ ಆಶಯದಂತೆ ನಿರ್ದೇಶಕನಾಗಿ ಗೆಲ್ಲಲು ಗಂಭೀರವಾದ ತಯಾರಿ ಮಾಡಿಕೊಂಡೇ ಪ್ರಥಮ್ ಈ ಚಿತ್ರವನ್ನು ಮುಕ್ತಾಯಗೊಳಿಸಿದ್ದಾರೆ.

CG ARUN

ಸಾಹಸಸಿಂಹನ ನಾಗರಹಾವಿಗೆ ಅವಮಾನವಾದರೆ?

Previous article

ಆ ಮೂಟೆಯಲ್ಲಿ ಏನಿತ್ತು ಗೊತ್ತಾ?

Next article

You may also like

Comments

Leave a reply

Your email address will not be published. Required fields are marked *