ಹೆಣ್ಣೊಬ್ಬಳ ಒಳತೋಟಿಗಳನ್ನು ಇಂಚಿಂಚಾಗಿ ಬಿಚ್ಚಿಟ್ಟಿರುವ ಸಿನಿಮಾ ನಾತಿಚರಾಮಿ. ಪ್ರೀತಿಸಿ ಎರಡೂ ಕಡೆಯವರ ವಿರೋಧದ ನಡುವೆಯೂ ಮದುವೆಯಾಗಿ, ಐದು ವರ್ಷ ಅನ್ಯೋನ್ಯವಾಗಿ ಬಾಳಿ, ಒಬ್ಬರನ್ನೊಬ್ಬರು ಅರಿತು ಒಬ್ಬರ ಹೆಜ್ಜೆಮೇಲೊಬ್ಬರು ಪಾದವಿಟ್ಟು ನಡೆದ ಜೀವಗಳಿಗೆ ದಾಂಪತ್ಯದ ಪ್ರತೀ ಕ್ಷಣವೂ ರಸಘಳಿಗೆ. ಇಂಥಾ ಸವಿ ಅನುಭವಿಸಿದ ನಂತರ ಆ ಇಬ್ಬರಲ್ಲಿ ಒಬ್ಬರು ಮಿಸ್ಸಾಗಿಬಿಟ್ಟರೆ ಏನಾಗಬೇಡ?
ನಾತಿಚರಾಮಿ ಚಿತ್ರದ ಹಿನ್ನೆಲೆ ಕೂಡಾ ಇಂಥದ್ದೇ. ಲವ್ ಮಾಡಿ ಮದುವೆಯಾದ ಹುಡುಗನನ್ನು ತೀರಾ ಹಚ್ಚಿಕೊಂಡು ಬದುಕಿದವಳ ಬಾಳಲ್ಲಿ ಘೋರ ದುರಂತವೊಂದು ನಡೆಯುತ್ತೆ. ಅದೊಂದು ದಿನ ಅಪಘಾತಕ್ಕೆ ಸಿಲುಕಿ ಹುಡುಗ ಜೀವ ಬಿಟ್ಟಿರುತ್ತಾನೆ. ಈ ನಂತರ ಆಕೆ ಜೀವನೋಪಾಯಕ್ಕಾಗಿ ಐಟಿ ಕಂಪೆನಿಯಲ್ಲಿ ನೌಕರಿ ಮಾಡಿಕೊಂಡು ಕೊರೆಯುವ ನೆನಪುಗಳಿಂದ ಪರಿತಪಿಸುತ್ತಾಳೆ. ಅವನ ನೆನಪಲ್ಲೇ ಬದುಕುವ ಹೆಣ್ಣುಮಗಳು ಗೌರಿಯ ಮೂಲಕ ಗಂಡನನ್ನು ಕಳೆದುಕೊಂಡ, ಗಂಡನಿಂದ ದೂರಾಗಿ ಯಾತನೆ ಅನುಭವಿಸುತ್ತಿರುವ ಅಗಣಿತ ಹೆಣ್ಣುಮಕ್ಕಳ ತಲ್ಲಣ, ತವಕಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮನ್ಸೋರೆ.
ಜೀವವೆಂದುಕೊಂಡಿದ್ದ ಹುಡುಗ ದೈಹಿಕವಾಗಿ ಇಲ್ಲವಾದರೂ ಈಕೆಯ ಮನಸ್ಸಿನಿಂದ ದೂರವಾಗಿರುವುದಿಲ್ಲ. ಅವನಿದ್ದಾನೆಂದುಕೊಂಡೇ ದಿನ ದೂಡಿದರೂ ಸುಡುವ ನೆನಪಿಗೆ ಪದೇಪದೆ ಕಾಡುವ ದೈಹಿಕ ವಾಂಛೆ ಪೈಪೋಟಿಗೆ ಬೀಳುತ್ತದೆ. ಅದನ್ನು ತೀರಿಸಿಕೊಳ್ಳಲು ಆಕೆ ಪಡುವ ಪಡಿಪಾಟಲುಗಳು, ಸ್ನೇಹಿತರ ಸಲಹೆ, ತಾನು ಇಷ್ಟ ಪಟ್ಟವರು ತನಗೆ ದಕ್ಕದಿದ್ದಾಗ ಉಂಟಾಗುವ ಮನೋ ವ್ಯಾಕುಲ, ತನಗಿಷ್ಟವಿಲ್ಲದವರು ಮೈಮುಟ್ಟಲು ಬಂದಾಗ ಆಗುವ ಕಿರಿಕಿರಿ.. ಅವಳ ಸಂಕಟ ಒಂದೆರಡಲ್ಲ. ಈ ಎಲ್ಲದಕ್ಕೂ ಮುಕ್ತಿ ಸಿಗುತ್ತದಾ? ಆಕೆಯ ಬಯಕೆಯ ತೋಟದ ಬೇಲಿ ಮುರಿಯುವ ಗಂಡಸು ಸಿಗುತ್ತಾನಾ ಅನ್ನೋದೆಲ್ಲಾ ಸಿನಿಮಾದ ಅಂತಿಮ ಗುಟ್ಟು. ಇದರೊಟ್ಟಿಗೆ ಎಲ್ಲವೂ ಇದ್ದೂ, ಏನೂ ಇಲ್ಲದವನಂತೆ ಬದುಕುವ ಗಂಡಿನ ಅಧ್ಯಾಯವೂ ಇದೆ. ಗೋಡೆ ಮೇಲಿಂದ ನೆಲಕ್ಕೆಬಿದ್ದ ಹಲ್ಲಿಯಂತೆ ವಿಲವಿಲ ಅಂತಾ ಒದ್ದಾಡಿ ಎದ್ದೇಳುವುದಷ್ಟೇ ಲೈಂಗಿಕತೆಯಲ್ಲ, ‘ಪ್ರೀತಿ ಬೆರೆತರೆ ಮಾತ್ರ ಪೂರ್ತಿ ಸುಖ ಪ್ರಾಪ್ತಿ’ ಅನ್ನೋದನ್ನು ಮಾರ್ಮಿಕವಾಗಿ ತಿಳಿಸಲಾಗಿದೆ. ಒಟ್ಟಾರೆ ಇದು ಕಟ್ಟಿಹಾಕಿಕೊಂಡ ಮನಸ್ಸು ಮತ್ತು ಬಿಚ್ಚಿ ಬೆತ್ತಲಾಗಲು ಬಯಸುವ ದೇಹ… ಇವೆರಡರ ನಡುವಿನ ಸಂಘರ್ಷ ನಾತಿಚರಾಮಿ.
ಲೇಖಕಿ ಸಂಧ್ಯಾರಾಣಿ ಬರೆದ ಕಥೆ ಈ ಸಿನಿಮಾದ ಮೂಲ. ನಿರ್ದೇಶಕ ಮನ್ಸೋರೆ, ಸಂಧ್ಯಾರಾಣಿ ಮತ್ತು ಅಭಯ ಸಿಂಹ ಸೇರಿ ಬರೆದ ಸಂಭಾಷಣೆ ಕೂಡಾ ಅಷ್ಟೇ ಮನಮುಟ್ಟುವಂತಿದೆ. ಈ ಸಿನಿಮಾದ ಪಾತ್ರಗಳ ಮನಸ್ಸೊಳಗೆ ಕಂಟ್ರೋಲಿಗೆ ಸಿಗದಂತೆ ಒತ್ತರಿಸಿಕೊಂಡು ಬರುವ ಕಾಮನೆಯಂಥಾ ಟ್ರಾಫಿಕ್ಕಿದೆ. ಆದರೆ ಅದನ್ನು ಎಲ್ಲಿಯೂ ಅಬ್ಬರ, ಗದ್ದಲಗಳಿಲ್ಲದೆ ನಿರೂಪಿಸಿದ್ದಾರೆ. ಇಲ್ಲಿ ತೀರಾ ಕಾಲ್ಪನಿಕವೆನಿಸುವಂಥಾ ಕಥೆಯಾಗಲಿ, ಅತಿರಂಜಕ ದೃಶ್ಯಗಳಾಗಲಿ ಇಲ್ಲ. ಬದಲಿಗೆ ಈ ಸಮಾಜದಲ್ಲಿ ಅಲ್ಲಲ್ಲಿ ಕಾಣಸಿಗುವ ಪಾತ್ರಗಳು, ಮರೆಯಲ್ಲಿ ಘಟಿಸುವ ‘ವಿಚಾರ’ಗಳನ್ನೇ ದೃಶ್ಯರೂಪಕ್ಕಿಳಿಸಲಾಗಿದೆ. ಮೇಲ್ನೋಟಕ್ಕೆ ಇದು ಸಿಂಪಲ್ಲಾಗಿ ನೋಡುಗರೆದೆಗೆ ದಾಟಿಕೊಳ್ಳುತ್ತದೆ. ಆದರೆ ಇಂಥಾ ಸದ್ದಿಲ್ಲದೇ ನಡೆಯುವ, ಭಾವನೆಗಳಲ್ಲೇ ವ್ಯಕ್ತವಾಗುವ ದೃಶ್ಯಗಳನ್ನು ಕಟ್ಟಿಕೊಡೋದು ಕಷ್ಟಕರ ಕೆಲಸ. ಈ ವಿಚಾರದಲ್ಲಿ ಮನ್ಸೋರೆ ಪೂರ್ಣ ಪ್ರಮಾಣದಲ್ಲಿ ಗೆದ್ದಿದ್ದಾರೆ. ಕಸುಬುದಾರ ನಿರ್ದೇಶಕ ಮಾತ್ರ ಇಂಥಾ ಕಥೆಯನ್ನು ಜೀವಂತವಾಗಿ ತೆರೆಮೇಲೆ ಸೃಜಿಸಲು ಸಾಧ್ಯ.
ಇನ್ನು ಪಾತ್ರಧಾರಿಗಳ ವಿಚಾರಕ್ಕೆ ಬಂದರೆ ಇಲ್ಲಿ ಅಭಿನಯಿಸಿರುವ ಒಬ್ಬೊಬ್ಬರೂ ಒಬ್ಬರನ್ನೊಬ್ಬರು ನುಂಗಿಕೊಂಡವರಂತೆ ಪಾತ್ರ ನಿರ್ವಹಿಸಿದ್ದಾರೆ. ಶೃತಿಹರಿಹರನ್ ಮತ್ತು ಸಂಚಾರಿ ವಿಜಯ್ ಉತ್ತಮ ಅಭಿನಯ ನೀಡಿದ್ದಾರೆ ಅಂತಷ್ಟೇ ಹೇಳಿದರೆ ತಪ್ಪಾಗುತ್ತದೆ. ಯಾಕೆಂದರೆ, ಎಲ್ಲಿಯೂ ಇದು ನಟನೆ ಅನ್ನೋದರ ಸುಳಿವು ಕೂಡಾ ಗೊತ್ತಾಗದಂತೆ ಕ್ಯಾಮೆರಾಮುಂದೆ ಬದುಕಿ ತೋರಿಸಿದ್ದಾರೆ!
ಇದು ಮಡಿವಂತಿಕೆ ತೋರುವ ಹುಸಿಮನಸ್ಸಿನವರ ಆಳದ ಕುತೂಹಲಗಳೊಂದಿಗೆ ಮುಖಾಮುಖಿಯಾಗೋ ಕಥಾ ಹಂದರದ ಸಿನಿಮಾ. ಮಡಿವಂತಿಕೆಯೊಳಗೇ ಮಿಸುಕಾಡೋ ವಿಕೃತಿಯ ಪ್ರಶ್ನೆಗಳಿಗೆಲ್ಲ ಇಲ್ಲಿ ಮಾನವೀಯ ನೆಲೆಯಲ್ಲಿ ಉತ್ತರ ಹುಡುಕಲಾಗಿದೆ. ಹೆಣ್ಣಿನ ಮುಂದೆ ಗೆರೆ ಹಾಕಿ ಯಾವ ಭಾವನೆಗಳನ್ನೂ ಅಭಿವ್ಯಕ್ತಿಸದಂತೆ ಪಹರೆ ಕಾಯೋ ಮನಸ್ಥಿತಿ ನಮ್ಮಲ್ಲಿಯದ್ದು. ಇಂಥಾ ವಾತಾವರಣದಲ್ಲಿ ಪ್ರಕೃತಿ ಸಹಜವಾದ ದೈಹಿಕ ವಾಂಛೆಯನ್ನ ಹೆಣ್ಣು ಹೇಳಿಕೊಳ್ಳೋದನ್ನು ಸಹಿಸೋದುಂಟೇ. ಆದರೆ ಆ ಹತ್ತಿಕ್ಕಲಾರದ ಭಾವಗಳನ್ನು ಮನಸಿಗೆ ಮುತ್ತಿಕೊಳ್ಳುವಂಥಾ ಕಥಾನಕದ ಮೂಲಕ ತೆರೆದಿಟ್ಟಿರೋದು ಮನ್ಸೋರೆಯವರ ಕಲೆಗಾರಿಕೆ. ಭಿನ್ನ ದಾರಿಯ ಸಿನಿಮಾವೊಂದು ಈ ಥರ ಮನಸಿಗೆ ನಾಟುವಂತೆ ಮೂಡಿ ಬಂದಿರೋದೇ ಖುಷಿಯ ಸಂಗತಿ.
#