ಮಂಸೋರೆ ಅವರ ನಾತಿಚರಾಮಿ ತೆರೆಗಾಣಲು ಕ್ಷಣಗಣನೆ ಆರಂಭವಾಗಿದೆ. ಈ ಚಿತ್ರ ಮಂಸೋರೆಯವರ ಭಿನ್ನವಾದ ಆಲೋಚನಾ ಕ್ರಮಕ್ಕೆ, ಸಿನಿಮಾವನ್ನು ಅವರು ಪರಿಭಾವಿಸುವ ರೀತಿಗೊಂದು ಉದಾಹರಣೆಯಂತೆ ಮೂಡಿ ಬಂದಿದೆ. ಕಲಾತ್ಮಕ ಚಿತ್ರಗಳು ಪ್ರಶಸ್ತಿ ಬಾಚಿಕೊಳ್ಳಲು ಮಾತ್ರ ಸೀಮಿತ ಅಂತೊಂದು ಆರೋಪವಿದೆ. ಅದಕ್ಕೆ ಪೂರಕವಾದ ವಾತಾವರಣವೂ ಇದೆ. ಆದರೆ ಅದನ್ನು ಹರಿವು ಚಿತ್ರದ ಮೂಲಕ ಸುಳ್ಳಾಗಿಸಿ, ಸಾಮಾನ್ಯ ಪ್ರೇಕ್ಷಕರನ್ನೂ ಕೂಡಾ ತಮ್ಮ ಮಿತಿಯ ನಡುವೆಯೂ ತಾಕಿದವರು ಮಂಸೋರೆ. ಮೇಲುನೋಟಕ್ಕೆ ಮಂಸೋರೆಯದ್ದು ಅಷ್ಟು ಸಲೀಸಾಗಿ ಯಾರೂ ಹೆಜ್ಜೆಯಿಡದ ಹಾದಿ ಅಂತಲೇ ಅನ್ನಿಸೋದಿದೆ. ಇಂಥಾದ್ದೊಂದು ಪ್ರಯಾಣಕ್ಕೆ ಮುನ್ನುಡಿ ಬರೆದದ್ದು ಅವರ ತಂದೆಯಿಂದ ಸಾಧ್ಯವಾದ ಅಕ್ಷರ ಸಾಂಗತ್ಯ ಮತ್ತು ಅದರಿಂದಲೇ ಸಾಧ್ಯವಾದ ಆಲೋಚನಕ್ರಮ!
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಎಂಬ ಊರಿನವರು ಮಂಸೋರೆ. ಇಲ್ಲಿನ ವಿದ್ಯಾ ಸಂಸ್ಥೆಯೊಂದರಲ್ಲಿ ಅಟೆಂಡರ್ ಆಗಿದ್ದ ಸೋಮಕೇಶವ ರೆಡ್ಡಿ ಅವರ ತಂದೆ. ಆರಂಭದ ದಿನಗಳಿಂದಲೂ ತಂದೆಯೊಂದಿಗಿನ ಸಾಂಗತ್ಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದವರು ಮಂಸೋರೆ. ಪ್ರಾಥಮಿಕ ಶಾಲಾ ಶಕ್ಷಣವನ್ನು ಚಿಂತಾಮಣಿಯಲ್ಲಿಯೇ ಪೂರೈಸಿಕೊಂಡಿದ್ದ ಅವರ ಪಾಲಿಗೆ ನಾಲಕ್ಕನೇ ತರಗತಿಯ ಹೊತ್ತಿಗೆಲ್ಲ ಓದಿನ ಹುಚ್ಚು ಹತ್ತಿಕೊಂಡಿತ್ತು. ಆ ಹೊತ್ತಿಗೆಲ್ಲ ಕಥೆ ಕಾದಂಬರಿ ಪುಸ್ತಕಗಳನ್ನು ಮಂಸೋರೆಗೆ ತಂದೆಯೇ ತಂದು ಕೊಡಲಾರಂಭಿಸಿದ್ದರು. ಹಾಗೆ ಮಕ್ಕಳ ಸಾಹಿತ್ಯದ ಮೂಲಕವೇ ಓದಿನ ರುಚಿ ಹತ್ತಿಸಿಕೊಂಡಿದ್ದ ಮಂಸೋರೆ ಹೈಸ್ಕೂಲು ಮುಗಿಯೋ ಹೊತ್ತಿಗೆಲ್ಲ ಕುವೆಂಪು ಸಾಹಿತ್ಯವನ್ನು ಬಹುಪಾಲು ಓದಿಕೊಂಡಿದ್ದರಂತೆ.
ಆರಂಭದ ದಿನಗಳಲ್ಲಿ ಅವರ ಆಕ್ತಿ ಕೇಂದ್ರೀಕರಿಸಿಕೊಂಡಿದ್ದು ಚಿತ್ರಕಲೆಯತ್ತ. ಕಾಲೇಜು ವ್ಯಾಸಂಗದ ನಡುವೆಯೇ ಅವರು ಕಲಾ ನಿರ್ದೇಶನ ವಿಭಾಗಕ್ಕೆ, ಆ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರು ಸೆಟ್ ಅಸಿಸ್ಟೆಂಟ್ ಆಗಿಯೇ ಕಾರ್ಯಾರಂಭ ಮಾಡಿದ್ದ ಅದರಿಂದ ಒಂಚೂರಾದರೂ ಕಾಸು ಹುಟ್ಟಿ ವಿದ್ಯಾಭ್ಯಾಸಕ್ಕೆ ನೆರವಾಗಲೆಂಬ ಉದ್ದೇಶದಿಂದ. ನಂತರ ಜಾಹೀರಾತು ಕ್ಷೇತ್ರಕ್ಕೂ ಮಂಸೋರೆ ಅಡಿಯಿರಿಸಿದ್ದರು. ಈ ಹಂತದಲ್ಲಿಯೇ ಮಂಸೋರೆ ಮನಸನ್ನು ಸಿನಿಮಾಗಳ ಸುತ್ತ ಸುಳಿದಾಡುವಂತೆ ಮಾಡಿದ್ದು ಅವರ ಕಾಲೇಜಿನಲ್ಲಿ ಕಲಾ ವಿದ್ವಾಂಸರಾದ ಅನೀಲ್ ಕುಮಾರ್. ಅವರೇ ಸಿನಿಮಾ ರಂಗದ ಬಗೆಗಿನ ಗಂಭೀರ ಆಲೋಚನೆಗೆ ಪ್ರೇರಣೆ ಕೊಟ್ಟಿದ್ದರು. ಆಗಿನಿಂದಲೇ ಸಿನಿಮಾದ ಅಚ್ಚರಿಯ ಜಗತ್ತೊಂದು ಅವರ ಮುಂದೆ ತಣ್ಣಗೆ ತೆರೆದುಕೊಳ್ಳಲಾರಂಭಿಸಿತ್ತು. ಜಗತ್ತಿನ ಪ್ರಸಿದ್ಧ ನಿರ್ದೇಶಕರ ಸಿನಿಮಾಗಳನ್ನು ಅನಿಲ್ ಕುಮಾರ್ ಅವರೇ ಮಂಸೋರೆಗೆ ಪರಿಚಯ ಮಾಡಿ ಕೊಟ್ಟಿದ್ದರು. ಒಂದು ಮಟ್ಟಿಗೆ ಸಿನಿಮಾ ಬಗೆಗೆ ಅಧ್ಯಯನವನ್ನೇ ನಡೆಸಲೂ ಕೂಡಾ ಮಂಸೋರೆಯವರಿಗೆ ಅದುವೇ ಪ್ರೇರಣೆ ನೀಡಿತ್ತು.
ಹಾಗೆ ಸಾಗಿ ಬಂದ ಮಂಸೋರೆ ೨೦೧೧ರ ಸುಮಾರಿಗೆ ನಿರ್ದೇಶನದ ಕನಸು ಕಾಣಲಾರಂಭಿಸಿದ್ದರು. ಯಾವ ಗಾಡ್ಫಾದರ್ಗಳೂ ಇಲ್ಲದೆ ಸಿನಿಮಾರಂಗಕ್ಕೆ ಬರೋದು ಎಂಥಾ ಸವಾಲಿನ ಕೆಲಸ ಎಂಬುದವರಿಗೆ ತಿಳಿದಿತ್ತು. ಅದೇ ಹೊತ್ತಿನಲ್ಲಿ ನಿರ್ದೇಶನಕ್ಕೆ ಜ್ಞಾನವಿನ್ನೂ ಸಾಲದು ಅಂತ ಅವರಿಗೇ ಅನ್ನಿಸಲಾರಂಭಿಸಿತ್ತು. ಆದ್ದರಿಂದಲೇ ಆ ಬಗ್ಗೆಯೂ ಕಲಿಕೆಗೆ ಮುಂದಾಗಿದ್ದರು. ಅದೇ ವರ್ಷ ಅವರ ಬದುಕಿಗೆ ಮಹಾ ಆಘಾತವೊಂದು ಎದುರಾಗಿತ್ತು. ಮಂಸೋರೆ ನಾನೊಂದು ಸಿನಿಮಾ ಮಾಡ್ತೀನಿ ಅಂದಾಗ ಯಾವ ಥರದ ಸಿನಿಮಾ ಮಾಡ್ತೀಯೋ ನೋಡೋಣ ಅಂತ ಸೋತ ಕಣ್ಣುಗಳಲ್ಲಿಯೂ ಮಿಂಚಿಟ್ಟುಕೊಂಡು ಪ್ರತಿಕ್ರಿಯಿಸಿದ್ದವರು ತಂದೆ ಸೋಮಕೇಶವ ರೆಡ್ಡಿ. ಆದರೆ ಅದಾಗಿ ಕೆಲ ದಿನಗಳಲ್ಲಿಯೇ ಅವರು ನಿಧನರಾಗಿದ್ದರು. ತಂದೆಯನ್ನೇ ಶಕ್ತಿಯೆಂದುಕೊಂಡಿದ್ದ ಮಂಸೋರೆ ಪಾಲಿಗದು ತಡೆದುಕೊಳ್ಳಲಾಗದ ಆಘಾತ. ತಂದೆಯ ಪಾಲಿಗವರು ಭವಿಷ್ಯವಾಗಿದ್ದರು. ಆದರೆ ಅದಿನ್ನೂ ಕಣ್ತೆರೆಯೋ ಮುನ್ನವೇ ತಂದೆ ಇನ್ನಿಲ್ಲವಾಗಿದ್ದ ಮಂಸೋರೆ ಬದುಕಿನ ಆಘಾತವೂ ಹೌದು. ಟರ್ನಿಂಗ್ ಪಾಯಿಂಟ್ ಕೂಡಾ ಹೌದು!
ಹಾಗೊಂದು ದುಖಃದಲ್ಲಿದ್ದ ಮಂಸೋರೆ ಸಿನಿಮಾ ನಿರ್ದೇಶನ ಮಾಡಲೇ ಬೇಕೆಂದು ನಿರ್ಧರಿಸಿದ್ದರು. ಅದೇ ಹೊತ್ತಿನಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಒಂದು ಅಂಕಣ ಬರಹ ಅವರ ಗಮನ ಸೆಳೆದಿತ್ತು. ಡಾ. ಆಶಾ ಬೆನಕಪ್ಪ ಬರೆದಿದ್ದ ಅಂತಃಕರಣ ಅಂಕಣದ ಆ ಬರಹ ಎಂಥವರ ಅಂತಃಕರಣವನ್ನೂ ನಾಟಿಕೊಳ್ಳುವಂತಿತ್ತು. ಮಗನನ್ನು ಉಳಿಸಿಕೊಳ್ಳಲು ಕೊಪ್ಪಳದಿಂದ ಬಂದು ಕಡೆಗೂ ಅದು ಸಾಧ್ಯವಾಗಲೆ ಲಗೇಜು ಇಡೋ ಜಾಗೆಯಲ್ಲಿ ಮಗನ ಕಳೇಬರವನ್ನಿಟ್ಟು ಊರಿಗೆ ಹಿಂತಿರುಗೋ ಕಥೆಯದು. ಅದೇ ಎಳೆಯನ್ನು ಕಾಡಿಸಿಕೊಂಡ ಮಂಸೋರೆ ಕಥೆ ಬರೆದು ಹರಿವು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದು ಶುರುವಾಗಿ ಒಂದು ಹಂತದಲ್ಲಿ ನಿಂತೇ ಹೋದಾಗ ಮಂಸೋರೆ ಅದೆಂಥಾ ಡಿಫ್ರೆಷನ್ನಿಗೊಳಗಾಗಿದ್ದರೆಂದರೆ, ಸಿನಿಮಾ ಸಹವಾಸವೇ ಬೇಡ ಅಂತ ಸಂಯುಕ್ತ ಕರ್ನಾಟಕದ ಕರ್ಮವೀರ ವಿಭಾಗದಲ್ಲಿ ಒಂದಾರು ತಿಂಗಳು ಕೆಲಸ ಮಾಡಿದ್ದರಂತೆ. ಕಡೆಗೂ ಹೇಗೋ ಸುಧಾರಿಸಿಕೊಂಡು ವಾಪಾಸಾದಾಗ ಮತ್ಯಾರೋ ಬೆಂಬಲ ನೀಡಿ ಅಮತೂ ಹರಿವು ಚಿತ್ರ ತೆರೆ ಕಂಡಿತ್ತು. ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿತ್ತು.
ಅದಾದ ಬಳಿಕ ಎರಡು ವರ್ಷ ಗ್ಯಾಪ್ ತೆಗೆದುಕೊಂಡ ಅವರಿಗೆ ಮತ್ತೆ ಕಲಾತ್ಮಕ ಜಾಡಿನ ಚಿತ್ರ ಮಾಡೋದು ಬೇಕಿರಲಿಲ್ಲ. ಆದರೆ ಎಲ್ಲ ವರ್ಗದವರನ್ನೂ ಸೆಳೆಯುವಂಥಾ, ಮಾನವೀಕ ಮೌಲ್ಯವಿರೋ ಚಿತ್ರ ಮಾಡಬೇಕೆಂಬ ಧ್ಯಾನಕ್ಕೆ ಕುಳಿತಿದ್ದರು. ಅದರ ಫಲವಾಗಿ ಇಂದು ನಾತಿಚರಾಮಿ ತೆರೆ ಕಾಣಲು ಸಜ್ಜುಗೊಂಡಿದೆ. ಈ ಚಿತ್ರವೂ ಮಂಸೋರೆಗೆ ಮತ್ತೊಂದು ದಿಕ್ಕು ತೋರುವ ಸೂಚನೆಗಳಿವೆ.
#
No Comment! Be the first one.