” ಜಗತ್ತಿನ ಯಾವುದೇ ಗಂಡು ಅಥವಾ ಹೆಣ್ಣು ,ಮತ್ಯಾವುದೇ ಹೆಣ್ಣು ಅಥವಾ ಗಂಡಿನಿಂದ ಪಡೆಯಬಹುದಾದ ದೈಹಿಕ ಸುಖ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೂ ನಾವು ಇಂಥವರನ್ನೇ ಪ್ರೀತಿಸಬೇಕು , ಇಂಥವರೊಟ್ಟಿಗೇ ಬದುಕಬೇಕು ಎಂಬ ಅಂಶ ಅದೆಷ್ಟು ವಿಸ್ಮಯವನ್ನುಂಟುಮಾಡಬಲ್ಲದು ಅಲ್ಲವೆ ?”
ನಾತಿಚರಾಮಿ ಸಿನಿಮಾ ನನಗೆ ಅರ್ಥವಾಗಿದ್ದು ಹೀಗೆ . ತುಂಬಾ ಪ್ರೀತಿಸಿದ ಗಂಡನ ಅಕಾಲಿಕ ಮರಣದಿಂದ ತ್ತತ್ತರಿಸಿದ ಹೆಣ್ಣೋರ್ವಳಿಗೆ ಆತನನ್ನು ಮಾನಸಿಕವಾಗಿ ಸದಾ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕೆಂಬ ಅಸಂಗತ ಬಯಕೆ. ಆದರೆ ವಯೋಸಹಜವಾಗಿ ದೈಹಿಕವಾದ ವಾಂಛೆಗಳು ಗಂಡೊಂದರ ‘ಸಹವಾಸ’ವನ್ನು ಸಹಜವಾಗಿಯೇ ಬಯಸುತ್ತವೆ. ಅದು ಅವಳಿಗೇನು ಅರ್ಥವಾಗದ್ದಲ್ಲ. ಆದರೆ ಸಮಾಜದ Set Pattern ಅಂತ ಒಂದಿದೆಯಲ್ಲ, ಅದಕ್ಕೆ ಅಂಜುವ ಮತ್ತು ಇದರಿಂದ ತನ್ನ ತೀರಿಹೋದ ಪ್ರೇಮಿಪತಿಗೆ ತಾನು ಅನ್ಯಾಯ ಮಾಡಿದಂತಾಗುತ್ತದೆ ಎಂಬ ಆತಂಕ ಅವಳಲ್ಲಿರುವ ಕಾರಣ ಅವಳೊಬ್ಬ ತಜ್ಞನ ಸಲಹೆಯನ್ನೂ ಪಡೆಯುತ್ತಾಳೆ. ಹೃದಯ ,ಮನಸ್ಸು ಅಂತೆಲ್ಲ ಭಾವನಾತ್ಮಕವಾಗಿರುವವಳಿಗೆ ಆತ ‘ ಹೃದಯದ ಕೆಲಸ ಕೇವಲ ರಕ್ತವನ್ನು ಪಂಪ್ ಮಾಡುವುದಷ್ಟೇ’ ಎಂದು ತಿಳಿ ಹೇಳಿ ಅವಳ Sexual Desires ಗಳು ಅನೈತಿಕವಾದವುಗಳಲ್ಲ ಆಕೆ ಅವುಗಳನ್ನು ಈಡೇರಿಸಕೊಳ್ಳಬಹುದು ಎಂಬ ಸಲಹೆ ನೀಡುತ್ತಾನೆ. ಇದೊಂದು ಮೆಟಫರಿಕ್ ವಿಧಾನವಾಗಿದ್ದು ಸಿನಿಮಾಕ್ಕೆ ಕೊಂಚ ಅಸಹಜವೆನಿಸುತ್ತದೆ ಕೂಡ.
ಈ ಸಿನಿಮಾದ ಹೀರೋ ಯಾರು ಎಂದರೆ ಅದು ‘ಕಥೆ’. ನಮ್ಮ ನಡುವಿನ ಸೂಕ್ಷ್ಮ ಬರಹಗಾರ್ತಿ ಸಂಧ್ಯಾರಾಣಿಯವರ ಈ ಕಥೆಯ ಶಕ್ತಿ ಹೇಗಿದೆ ಎಂದರೆ ನೀವು ಪಕ್ಕದಲ್ಲಿ ಕೂತಿರುವವರ ಜೊತೆ ಇದರ ಬಗ್ಗೆ ಏನನ್ನೂ ಚರ್ಚಿಸಲಾರಿರಿ.ಏಕೆಂದರೆ ಇದು ನಿಮ್ಮ ಮನಸ್ಸಿನೊಳಗೆ ನಡೆಯುವ ಕಥೆ. ಅಲ್ಲಿ ಹೆಣ್ಣೊಬ್ಬಳು ತನ್ನ ಮನಸ್ಸಿನ ತಳಮಳಗಳ ಬಗ್ಗೆ ಚಿಂತಿತಳಾಗಿರಬಹುದು ಆದರೆ ಅದು ಮತ್ಯಾವುದೋ ಗಂಡಸಿನದ್ದೂ ಆಗಿರಬಹುದು. ಒಂದು ಆ್ಯಪ್ ಮೂಲಕ ತನ್ನ ವಾಂಛೆಯನ್ನು ಈಡೇರಿಸಿಕೊಳ್ಳಲು ಹೊರಟವಳಿಗೆ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಮತ್ತೊಬ್ಬನ ಪರಿಚಯ ನಿಧಾನಕ್ಕೆ ಸಲುಗೆಗೆ ತಿರುಗಿದ ಮೇಲೆ ನಿರ್ಭಿಡೆಯಿಂದ Physical pleasure ನ ಬೇಡಿಕೆ ಇಡುವ ಆಕೆಗೆ ಅವನು ಹೇಳುವ ‘ನಿಮ್ಮನ್ನು ಒಳ್ಳೆಯ ಮನೆತನದ ಹುಡುಗಿ ಅಂದುಕೊಂಡಿದ್ದೆ’ ಎಂಬ ಮಾತು ಘಾಸಿಗೊಳಿಸುತ್ತದೆ. ನೇರವಾಗಿ ತನ್ನ ಲೈಂಗಿಕಾಸಕ್ತಿಯನ್ನು ಹೇಳುವುದು ,ಅದರಲ್ಲೂ ಓರ್ವ ಹೆಣ್ಣು ಹೀಗೆ ಹೇಳಿದಾಗ ಅವಳನ್ನು ನೋಡುವ ರೀತಿಯನ್ನು ಜನರಲೈಸ್ ಮಾಡಲಾಗಿದೆ . ಆದರೆ ಇದನ್ನು ಓರ್ವ ಗಂಡು ಕೇಳಿದಾಗ ಮತ್ಯಾವ ರೀತಿಯಲ್ಲಿ ನೋಡಲಾಗುತ್ತದೆ ಎಂಬುದಕ್ಕೆ ನಾಯಕಿ ತನ್ನ ಆಫೀಸ್ ನಲ್ಲಿ ಸಹೋದ್ಯೋಗಿಯೊಬ್ಬ ಅಂಥದ್ದೇ ಬೇಡಿಕೆಯಿಟ್ಟಾಗ ನಾಯಕಿ ನಡೆದುಕೊಳ್ಳುವ ರೀತಿ ಕನ್ನಡಿ ಹಿಡಿಯುತ್ತದೆ. ಇದನ್ನು ಒಪ್ಪುವುದು ಕಷ್ಟ.ಲೈಂಗಿಕಾಸಕ್ತಿಯನ್ನು ಗಂಡು ಹೆಣ್ಣಿನ ದೃಷ್ಟಿಯಲ್ಲಿ ವಿಭಿನ್ನವಾಗಿ ನೋಡಹೋದರೆ ಸಿನಿಮಾದ ಆಶಯಕ್ಕೆ ಅದು ಹೊಂದುವುದಿಲ್ಲ ಎಂಬುದನ್ನು ನಿರ್ದೇಶಕರು ಗಮನಿಸಬಹುದಿತ್ತು. ಆದರೆ ದೈಹಿಕ ಸುಖದ ಆಸೆಯನ್ನು ಯಾರೆಂದರಲ್ಲಿ ತೀರಿಸಿಕೊಳ್ಳಲಾಗದು ಅದಕ್ಕೊಂದು ಸ್ನೇಹ -ಸಲುಗೆ ಕೂಡ ಅಗತ್ಯ ಎಂಬುದನ್ನು ಹೇಳಲು ಹೀಗೆ ದೃಶ್ಯ ಕಟ್ಟಲಾಗಿದೆ ಎಂದೆನ್ನಿಸುತ್ತದೆ. ಕೇವಲ ಲೈಂಗಿಕಾಸಕ್ತಿಗಾಗಿ ಸ್ನೇಹ ಕಳೆದುಕೊಳ್ಳಲು ಇಚ್ಛಿಸದ ಅವರಿಬ್ಬರೂ ‘ Glad that we spoke again ‘ ಎಂದು ಹೇಳಿದಾಗ ಅದು ಸ್ಪಷ್ಟವಾಗುತ್ತದೆ.
ಸಂಚಾರಿ ವಿಜಯ್ ಅವರ ಪಾತ್ರ ಸಿನಿಮಾಕ್ಕೆ ಅನೇಕ ಆಯಾಮಗಳನ್ನು ನೀಡುವಂಥದ್ದು . ಮನೆಯಲ್ಲಿನ ಹೆಂಡತಿಯನ್ನು ನಿಕೃಷ್ಟವಾಗಿ ಕಾಣುವ ಆ ಪಾತ್ರ ಹೊಸದಾಗಿ ಸಂಪಾದಿಸಿದ ಹೆಣ್ಣೋರ್ವಳ ಸ್ನೇಹದಲ್ಲಿ ತನ್ಮಯತೆಯನ್ನು ಅನುಭವಿಸುತ್ತದೆ. ಹಾಗಂತ ಅವಳನ್ನು ದೈಹಿಕವಾಗಿ ಎಂದೂ ಬಯಸಿದ್ದಲ್ಲ . ಆದರೆ ಅವಳಾಗಿಯೇ ಆ ಅಭಿಲಾಷೆಯನ್ನು ವ್ಯಕ್ತಪಡಿಸಿದ ನಂತರ ಮನಸ್ಸು ಚಂಚಲಗೊಂಡು ಆ ಕಡೆ ವಾಲುತ್ತದೆ. ಒಂದು ಸಣ್ಣ ಸುಳಿವನ್ನೂ ಕೊಡದೆ ತನ್ನ ಮುಗ್ದ ಹೆಂಡತಿಯನ್ನು ವಂಚಿಸಿ ಆಕೆಯೊಂದಿಗೆ ಸುಖಿಸಲು ತಯಾರಾಗುವ ಆ ಪಾತ್ರ ಕೆಲವು ಪ್ರೇಕ್ಷಕರನ್ನಾದರೂ ‘ಆತ್ಮನಿಂದನೆಯಿಂದ ನಾಲಗೆ ಕಚ್ಚಿಕೊಳ್ಳುವಂತೆ ಮಾಡದೇ ಇರದು. ಆದರೆ ಅದನ್ನು ಯಾರೂ ಹೇಳಿಕೊಳ್ಳಲಾರರೇನೋ. ಒಂದೆಡೆ ಇಲ್ಲದ ಗಂಡನನ್ನು ಈಗಲೂ ಫ್ಯಾಂಟಸಿಯಂತೆ ಪ್ರೀತಿಸುವ ನಾಯಕಿ ಇದ್ದರೆ ,ಮತ್ತೊಂದಡೆ ಇನ್ನಿಲ್ಲದಂತೆ ತನ್ನ ಗಂಡನನ್ನು ಪ್ರೀತಿಸುವ ಸುರೇಶನ ಹೆಂಡತಿಗೆ ತಕ್ಕ ಪ್ರೀತಿ ಮತ್ತು ಸುಖ ಸಿಗದೆ ಇರುವುದು ವೈರುಧ್ಯವೇ ಸರಿ. ಇನ್ನು ಈ ಎರಡೂ ಮನೆಗಳಿಗೆ ಕೆಲಸಕ್ಕೆ ಬರುವ ಹೆಣ್ಣಿನದು ಇಬ್ಬರಿಗೂ ಪಾಠ ಹೇಳಬಹುದಾದಂಥ ಜೀವನ . ಹೀಗೇ ಬರೆಯುತ್ತಲೇ ಹೋಗಬಹುದು…
ಈ ಕಥೆಯನ್ನು ಪರಿಣಾಮಕಾರಿಯಾಗಿ ಸಿನಿಮಾ ಆಗಿಸುವಲ್ಲಿ ನಿರ್ದೇಶಕ ಮಂಸೋರೆ ಗೆದ್ದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಕಥಾ ಚೌಕಟ್ಟಿಗೆ ಬೇಕಾದ ದೃಶ್ಯ ಮತ್ತು ಸಂಭಾಷಣೆಗಳ ಮೂಲಕ ಸರಾಗವಾಗಿ , ಸಾವಕಾಶವಾಗಿ ಕಥೆಯನ್ನು ಪ್ರೇಕ್ಷಕನ ಎದೆಗೆ ದಾಟಿಸುತ್ತಾರೆ. ಅಲ್ಲಲ್ಲಿ ನಿಧಾನ ಎನ್ನಿಸಲು ಬದುಕು ಯಾವಾಗಲೂ ಓಡದೆ ಕೆಲವೊಮ್ಮೆ ಕುಂಟುವುದೇ ಕಾರಣ. ಇಡೀ ಕಥೆಯನ್ನು ನಮ್ಮಲ್ಲಿ ಕಟ್ಟುವಂತೆ ಮಾಡುವುದು ಸಂಗೀತ.
ಇಡೀ ಸಿನಿಮಾವನ್ನು ಆವರಿಸಿರುವ ಶೃತಿ ಹರಿಹರನ್ ಅವರದ್ದು ಆ ಪಾತ್ರಕ್ಕೆ ಹೊಂದುವ ಮನೋಜ್ಞ ಅಭಿನಯ. ಸಿನಿಮಾದಲ್ಲಿ ತನ್ನ ಲೈಂಗಿಕ ಆಸಕ್ತಿಯನ್ನು ಹೇಳಿಕೊಂಡಾಗ ಆ ಪಾತ್ರಕ್ಕೆ ಎದುರಾಗುವ ಸಂಕಟ ಒಂದು ರೀತಿಯದ್ದಾದರೆ ,ಆಕೆ ಲೈಂಗಿಕ ಕಿರುಕುಳಕ್ಕೆ ಒಳಗಾದೆ ಎಂದು ದೂರಿದ್ದರ ಪರಿಣಾಮವಾಗಿ ಸಾಕಷ್ಟು ಟೀಕೆಯನ್ನು ಎದುರಿಸಬೇಕಾಯಿತು ಎಂಬುದರಲ್ಲಿಯೇ ಈ ಸಿನಿಮಾದ ಪ್ರಸ್ತುತೆಯೂ ಇದೆ.
ಇಂತಹ ಸೂಕ್ಷ್ಮ ಮತ್ತು ದಿಟ್ಟ ಕಥೆಯನ್ನು ಸಿನಿಮಾ ಮಾಡುವ ಧೈರ್ಯ ತೋರಿದ ನಿರ್ಮಾಪಕರ, ನಿರ್ದೇಶಕರಿಬ್ಬರೂ ಅಭಿನಂದನಾರ್ಹರು. ಆದರೆ ಚಿತ್ರಕ್ಕೆ ‘ನಾತಿಚರಾಮಿ’ ಎಂಬ ಯಾರಿಗೂ ಸುಲಭವಾಗಿ ಅರ್ಥವಾಗದ ಅಥವಾ ಉಚ್ಚರಿಸಲೂ ಕಷ್ಟವಾಗುವಂಥ ಕ್ಲಿಷ್ಟವಾದ ಹೆಸರಿಡುವ ಅವಶ್ಯಕತೆ ಇರಲಿಲ್ಲ ಎಂದು ನನಗನ್ನಿಸುತ್ತದೆ. ಪ್ರೇಕ್ಷಕರನ್ನು ಲಿಮಿಟ್ ಮಾಡಿಕೊಳ್ಳುವುದೇ ಇಂತಹ ಅಂಶಗಳಿಂದ.
ಪ್ರೇಮವೋ -ಕಾಮವೋ? ದೇಹವೋ-ಮನಸ್ಸೋ ? ನೈತಿಕವೋ – ಅನೈತಿಕವೋ ?
ವಿವಾಹವೋ – ವಿವಾಹೇತರವೋ ?
ಸ್ವತಂತ್ರವೋ- ಸ್ವೇಚ್ಛೆಯೋ ?
ಇವುಗಳನ್ನೆಲ್ಲ ಶೋಧಿಸುವುದರೊಳಗೆ ಮುಪ್ಪು ಬಾಗಿಲು ತಟ್ಟಿರುತ್ತದೆ ಎಂಬುದು ಬೇರೆ ಮಾತು…
ಅದೇನೋ ಗೊತ್ತಿಲ್ಲ ಕೆ.ಜಿ.ಎಫ್. ಸಿನಿಮಾ ‘ ಆ ದಿನಗಳು’ ಸಿನಿಮಾದ ಹಾಗೆ ಕಾಡಲಿಲ್ಲ. ಹಾಗೆಯೇ ‘ಆ ದಿನಗಳು’ ಎಂಬ ಸಿನಿಮಾ ‘ ನಾತಿಚರಾಮಿ’ ಹಾಗೆ ಕಾಡುವುದಿಲ್ಲ. ಆದರೆ ಮೂರೂ ರೀತಿಯ ಸಿನಿಮಾಗಳನ್ನು ನಾನು ನೋಡುತ್ತೇನೆ ಮತ್ತು ವಿಮರ್ಶಿಸಿಕೊಳ್ಳುತ್ತೇನೆ.
ವರ್ಷಾಂತ್ಯದಲ್ಲಿ ನೀವೂ ಈ ಸಿನಿಮಾ ನೋಡಿ ಮತ್ತು ಕಾಡಿಸಿಕೊಳ್ಳಿ…
– ಶಿವಕುಮಾರ್ ಮಾವಲಿ
#
No Comment! Be the first one.