ಮೊದಲ ಚಿತ್ರದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆಯೋ ಮೂಲಕ ಸಂಚಲನಕ್ಕೆ ಕಾರಣವಾಗಿದ್ದವರು ಮಂಸೋರೆ. ಅವರು ಆ ನಂತರದಲ್ಲಿ ಎರಡು ವರ್ಷಗಳ ಧ್ಯಾನದ ಫಲವಾಗಿ ನಾತಿಚರಾಮಿ ತಯಾರಾಗಿ ಬಿಡುಗಡೆಗೆ ಸಜ್ಜುಗೊಂಡಿದೆ. ಲೇಖಕಿ ಎನ್. ಸಂಧ್ಯಾರಾಣಿ ಕಥೆ ಮತ್ತು ಸಂಭಾಷಣೆ ಬರೆದಿರೋ ಈ ಚಿತ್ರದ ಬಗ್ಗೆ ಎಲ್ಲಾ ವರ್ಗದ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ. ಇದುವೇ ಈ ವಾರ ತೆರೆ ಕಾಣಲಿರೋ ಹೊಸಾ ಅಲೆಯ ನಾತಿಚರಾಮಿ ಗೆಲ್ಲುವ ಮುನ್ಸೂಚನೆಯಂತೆಯೂ ಭಾಸವಾಗುತ್ತಿದೆ.
ಮಂನ್ಸೋರೆ ನಿರ್ದೇಶನ ಮಾಡಿದ್ದ ಮೊದಲ ಚಿತ್ರ ಹರಿವು ಕಲಾತ್ಮಕ ಪ್ರಾಕಾರದ್ದು. ಸಾಮಾನ್ಯವಾಗಿ ಕಲಾತ್ಮಕ ಹಣೆಪಟ್ಟಿ ಹೊತ್ತ ಸಿನಿಮಾಗಳು ಜನಸಾಮಾನ್ಯರ ಸಂಪರ್ಕಕ್ಕೆ ಬರೋದೇ ವಿರಳ. ಆದರೆ ಹರಿವು ವಿಚಾರದಲ್ಲದು ತದ್ವಿರುದ್ಧ. ತನ್ನ ಅನಾರೋಗ್ಯ ಪೀಡಿತ ಮಗುವನ್ನು ಬದುಕಿಸಿಕೊಳ್ಳಲು ಬೆಂಗಳೂರಿಗೆ ಬರೋ ಬಡ ಅಪ್ಪ, ಕಡೆಗೂ ಅದು ಸಾಧ್ಯವಾಗದೆ ಟ್ರಂಕಿನಲ್ಲಿ ಮಗನ ಕಳೇಬರವಿಟ್ಟು ಕೊಪ್ಪಳದತ್ತ ಬೆಳೆಸೋ ಪ್ರಯಾಣ, ಆ ಯಾನದ ತುಂಬಾ ಜೀವ ವೀಣೆ ಮಿಡಿದಂತೆ ಚಲಿಸೋ ದೃಷ್ಯಗಳು… ಹರಿವು ಇಂಥಾ ಗುಣಗಳಿಂದಲೇ ಜನಸಾಮಾನ್ಯರನ್ನು ತಲುಪಿ ಅವರೊಳಗೂ ಪ್ರವಹಿಸಿದ್ದು ಕಡಿಮೆ ಸಾಧನೆಯೇನಲ್ಲ.
ನಿಜ, ಮೊದಲ ಚಿತ್ರ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. ಹಾಗಂತ ಎರಡನೇ ಚಿತ್ರದಲ್ಲಿಯೂ ಮತ್ತದೇ ಜಾಡಿನಲ್ಲಿ ಮುನ್ನಡೆಯೋದು ಮಂಸೋರೆ ಅವರಿಗಿಷ್ಟವಿರಲಿಲ್ಲ. ಆದ್ದರಿಂದಲೇ ಎರಡು ವರ್ಷಗಳ ಕಾಲ ನಾತಿಚರಾಮಿಗಾಗಿ ಅವರು ಧ್ಯಾನಿಸಿದ್ದರು. ಅದರಂತೆಯೇ ಈಟಿ ಸೆಕ್ಟರಿನಲ್ಲಿ ಕೆಲಸ ಮಾಡೋ ವಿಧವೆ ಹೆಣ್ಣೊಬ್ಬಳ ಸುತ್ತ ನಡೆಯೋ ಕಥೆಯೊಂದು ನಾತಿಚರಾಮಿಯಾಗಿ ಹೊಸಾ ಅಲೆಯೊಂದಿಗೆ ಪ್ರೇಕ್ಷಕರನ್ನು ಮುಟ್ಟಲು ರೆಡಿಯಾಗಿದೆ.
ಇಷ್ಟಾದರೂ ಇದು ಯಾವ ಪ್ರಾಕಾರದ ಚಿತ್ರವೆಂಬುದಕ್ಕೆ ಮಂಸೋರೆ ನಾತಿಚರಾಮಿಯ ಕಥೆಯಂಥಾದ್ದೇ ಕೌತುಕದ ಉತ್ತರವನ್ನೇ ಕೊಡುತ್ತಾರೆ. ಅವರ ಪ್ರಕಾರ ಈ ಕಮರ್ಶಿಯಲ್, ಕಲಾತ್ಮಕ ಚೌಕಟ್ಟುಗಳಿಗೆಲ್ಲ ಅರ್ಥವಿಲ್ಲ. ಜಗತ್ತಿನಲ್ಲಿರೋದು ಒಳ್ಳೆ ಚಿತ್ರಗಳು ಮತ್ತು ಕೆಟ್ಟ ಚಿತ್ರಗಳು ಮಾತ್ರ. ನಾತಿಚರಾಮಿ ಮೊದಲ ಕೆಟಗರಿಯ ಚಿತ್ರ ಎಂಬುದು ಅವರ ಭರವಸೆ. ಈಗಾಗಲೇ ಮುಂಬೈನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ನಾತಿಚರಾಮಿ ಪ್ರದರ್ಶನಗೊಂಡಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿರೋ ಮೆಚ್ಚುಗೆಯಿಂದ ಮಂಸೋರೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದಷ್ಟೇ ಖುಷಿಯಿಂದಿದ್ದಾರೆ. ಇದೇ ಶುಕ್ರವಾರ ಒಟ್ಟಾರೆ ನಾತಿಚರಾಮಿಯ ಎಲ್ಲ ನಿಗೂಢಗಳೂ ಅನಾವರಣಗೊಳ್ಳಲಿವೆ
#
Leave a Reply
You must be logged in to post a comment.