ಮಂಸೋರೆ ನಿರ್ದೇಶನದ ನಾತಿಚರಾಮಿ ಹೆಣ್ಣಿನ ಸಂವೇದನೆಗಳ ಪದರುರುಗಳನ್ನು ತೆರೆದಿಡುವ ಭಿನ್ನ ಬಗೆಯ ಚಿತ್ರ. ಈ ವಾರ ಬಿಡುಗಡೆಗೊಳ್ಳಲಿರೋ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಸಕ್ತಿ ಹೊಂದಲು ದಂಡಿ ದಂಡಿ ಕಾರಣಗಳಿವೆ. ಎಲ್ಲವೂ ನೈಜತೆಗೆ ಹತ್ತಿರಾಗಿರಬೇಕೆಂದುಕೊಂಡ ಮಂಸೋರೆ ತಮ್ಮೊಳಗೆ ಚಿಗಿತುಗೊಂಡ ಕಥಾ ಎಳೆಯೊಂದನ್ನು ಲೇಖಕಿ ಸಂಧ್ಯಾರಾಣಿಯವರ ಸುಪರ್ದಿಗೊಪ್ಪಿಸಿದ್ದರ ಹಿಂದೆ, ಅದು ಆ ಮೂಲಕವೇ ಕಥೆಯಾಗಿ ಮೈದಾಳಿದ್ದರ ಹಿಂದೆಯೂ ಅಂಥಾದ್ದೇ ಕಾರಣಳಿದ್ದಾವೆ.
ಮಂಸೋರೆ ಪ್ರಕಾರ ಹೆಣ್ಣನ್ನು ಅರ್ಥ ಮಾಡಿಕೊಂಡೆ ಅಂತಂದುಕೊಂಡರೆ ಅದೊಂದು ಭಯಾನಕ ಭ್ರಮೆ. ಅದು ಕಡಲಿನ ತಡಿಯಲ್ಲಿ ನಿಂತು ಬಳಿ ಬಂದ ಅಲೆಯೊಂದನ್ನು ಸೋಕಿ ಇಡೀ ಸಮುದ್ರವೇ ಮುಷ್ಟಿಗೆ ಸಿಕ್ಕಿತೆಂದುಕೊಂಡಷ್ಟೇ ಅತಿಶಯ. ಒಂದು ಸ್ಥಿತಿಗೆ ಹೆಣ್ಣೊಬ್ಬಳು ಹೇಗೆಲ್ಲಾ ಪ್ರತಿಕ್ರಿಯಿಸುತ್ತಾಳೆ, ಆ ಕ್ಷಣದಲ್ಲಿ ಆಕೆಯ ಮನೋಪಲ್ಲಟ ಹೇಗಿರುತ್ತೆ ಅನ್ನೋದನ್ನೆಲ್ಲ ಕಲ್ಪಿಸಿಕೊಂಡೇ ಬರೆದರೆ ಕೃತ್ರಿಮ ಅನ್ನಿಸದಿರೋದಿಲ್ಲ. ಇದು ಕಥೆಯಾಗಿ ಅಚ್ಚಾಗೋ ಹಂತಕ್ಕೆ ಮಾತ್ರವೇ ಒಪ್ಪಬಹುದು. ಆದರೆ ಒಂದು ಚಿತ್ರವಾಗಿ, ಪಾತ್ರವಾಗಿ ಪ್ರೇಕ್ಷಕರೊಂದಿಗೆ ಸಂವಹನ ನಡೆಸೋ ಹೊತ್ತಿಗೆ ಕಲ್ಪನೆಯ ಲೋಕ ಕುಸಿದು ಬಿದ್ದಿರುತ್ತದೆ.
ನಾತಿಚರಾಮಿಯ ವಿಧವೆ ಹೆಣ್ಣೊಬ್ಬಳ ಒಳತೋಟಿಗಳು ನೈಜವಾಗಿ ಮೂಡಿ ಬರಬೇಕೆಂಬ ಉದ್ದೇಶದಿಂದಲೇ ಮಂಸೋರೆ ಸಂಧ್ಯಾರಾಣಿಯವರಿಗೆ ಆ ಜವಾಬ್ದಾರಿ ಒಪ್ಪಿಸಿದ್ದರು. ಸಂಧ್ಯಾರಾಣಿ ಅಂಕಣಕಾರ್ತಿಯಾಗಿ, ಲೇಖಕಿಯಾಗಿ ತಮ್ಮ ಸೂಕ್ಷ್ಮ ಬರಹದಿಂದಲೇ ಚಿರಪರಿಚಿತರಾಗಿರುವವರು. ಸಿನಿಮಾ ಎಂಬುದು ಎಳವೆಯಿಂದಲೇ ಅವರನ್ನು ಸೆಳೆದುಕೊಂಡಿದ್ದ ಸೂಜಿಗಲ್ಲಿನಂಥಾದ್ದು. ಓದನ್ನು ಬಿಟ್ಟರೆ ಅವರ ಪಾಲಿಗೆ ತುಂಬಾ ಆಪ್ಯಾಯವಾದದ್ದು ಸಿನಿಮಾ ವೀಕ್ಷಣೆ. ಅದು ಅವರ ಪಾಲಿಗೆ ಹೊಸಾ ಜಗತ್ತೊಂದರತ್ತ ಮುಖಾಮಿಖಿಯಾದಂಥಾದ್ದೇ ಬೆರಗು. ವಿಶ್ವದ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಾ, ಜಿ ಎನ್ ಮೋಹನ್ ಅವರ ಅವಧಿಯಲ್ಲಿ ಓದುರುಗರಿಗೂ ಹೊಸಾ ಬಗೆಯ ಸಿನಿಮಾ ನೋಡುವಿಕೆಯ ರುಚಿ ಹತ್ತಿಸಿದ್ದವರು ಸಂಧ್ಯಾರಾಣಿ.
ಒಂದು ವಿಶಿಷ್ಟವಾದ ಸಿನಿಮಾ ನೋಡಿದಾಗ ಚಿತ್ರವಿಚಿತ್ರ ತಲ್ಲಣಗಳು ಎದೆಗೆ ನಾಟಿಕೊಳ್ಳುತ್ತವೆ. ಅದರೆ ಅದನ್ನು ಮಾತಾಗಿಸೋದಾಗಲಿ, ಅಕ್ಷರವಾಗಿಸೋದಾಗಲಿ ಕಷ್ಟದ ಕೆಲಸ. ಅದೊಂಥರಾ ಮುಂಜಾವದ ಸವಿ ನಿದ್ರೆಯಲ್ಲಿ ಬಿದ್ದ ಸುಂದರ ಸ್ವಪ್ನವಿದ್ದಂತೆ. ಆದರೆ ಅದನ್ನೆಲ್ಲ ಸಾಮಾನ್ಯ ವೀಕ್ಷಕರಿಗೂ ತಲುಪುವಂತೆ ಅವಧಿಯಲ್ಲಿಯೇ ಜನಪ್ರಿಯ ಅಂಕಣವೊಂದನ್ನು ಬರೆಯುವ ಮೂಲಕವೂ ಸಂಧ್ಯಾರಾಣಿ ಬೆರಗು ಹುಟ್ಟಿಸಿದ್ದರು. ಇದನ್ನೆಲ್ಲ ನೋಡುತ್ತಾ ಬಂದಿದ್ದರಿಂದಲೇ ಮಂಸೋರೇ ನಾತಿಚರಾಮಿಯ ಕಥೆಗೆ ಅವರೇ ಜೀವತುಂಬ ಬೇಕೆಂದು ಬಯಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ.
ಆರಂಭದಲ್ಲಿ ಮಂಸೋರೆ ಇಂಥಾದ್ದೊಂದು ಪ್ರಸ್ತಾಪವಿಟ್ಟಾಗ ಸಂಧ್ಯಾರಾಣಿ ಹಿಂದೇಟು ಹಾಕಿದ್ದರಂತೆ. ಹೇಗೋ ಒಪ್ಪಿಕೊಂಡು ಅಹೋಕಾಲ ಅದನ್ನೇ ಧ್ಯಾನಿಸಿ ಮೊದಲ ವರ್ಷನ್ ಬರೆದು ನಿರಾಳವಾದರಾದರೂ ಮಂಸೋರೆ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದರಂತೆ. ಮತ್ತೊಂದು ವರ್ಷನ್ ಬರೆಯಲು ಕುಳಿತ ಅವರು ಅದೊಂದು ಮಧ್ಯರಾತ್ರಿಯಲ್ಲಿ ತನಗಿದನ್ನು ಬರೆಯಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಮಂಸೋರೆಗೂ ಅದನ್ನೇ ಹೇಳಿದ್ದರಂತೆ. ಆದರೆ ಮಂಸೋರೆ ಕಡೆಯಿಂದ ಬಂದದ್ದು ಇದನ್ನು ನೀವೇ ಮಾಡುತ್ತೀರಿ, ನಿಮಗೆ ಆ ಕಸುವಿದೆ ಎಂಬ ಭರವಸೆ. ಅಲ್ಲಿಂದಾಚೆಗೆ ಸಂಧ್ಯಾರಾಣಿ ಕಥಾ ನಾಯಕಿ ಗೌರಿಯನ್ನು ಆವಾಹಿಸಿಕೊಂಡು ಕಥೆ ಬರೆಯಲಾರಂಭಿಸಿದ್ದರು. ಕಥೆ ಮುಗಿಯೋ ಹೊತ್ತಿಗೆಲ್ಲ ಗೌರಿಯೇ ಆಗಿಹೋದಂತೆ ಅದರೊಳಗೇ ಇಳಿದು ಹೋಗಿದ್ದರು. ಅದು ಮಂಸೋರೆಗೆ ಮೆಚ್ಚುಗೆಯಾಗಿ ಕಡೆಗೆ ಸಂಭಾಷಣೆಯನ್ನೂ ಕೂಡಾ ಸಂಧ್ಯಾರಾಣಿಯವರೇ ಬರೆದಿದ್ದರು.
ಈ ಚಿತ್ರ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದೂ ಕೂಡಾ ವಿಶಿಷ್ಟವಾದ ಕಥಾ ಹಂದರ ಹೊಂದಿದ ಸಿನಿಮಾ ವಿಭಾಗದಲ್ಲಿಯೇ. ಅದು ಸಂಧ್ಯಾರಾಣಿಯವರ ಶ್ರಮ ಮತ್ತು ಪ್ರತಿಭೆಗೆ ಸಿಕ್ಕ ಮನ್ನಣೆಯೂ ಹೌದು. ಇದುವರೆಗೆ ಸಾಹಿತ್ಯಕ ಸಾಹಚರ್ಯದಲ್ಲಿ ಬೆರೆತಿದ್ದ ಅವರು ನಾತಿಚರಾಮಿಯ ಮೂಲಕ ಚಿತ್ರರಂಗಕ್ಕೂ ಅಡಿಯಿರಿಸಿದ್ದಾರೆ. ಆರಂಭದ ಹೆಜ್ಜೆಗೇ ಗೆಲುವಿನ ಸೂಚನೆಯ ಸ್ವಾಗತ ಸಿಕ್ಕಿದೆ. ಬಹುಶಃ ಮುಂದೆ ಅವರು ಕನ್ನಡ ಚಿತ್ರರಂಗದಲ್ಲಿ ವಿರಳವಾಗಿರೋ ಮಹಿಳಾ ನಿರ್ದೇಶಕಿಯಾಗಿ ಹೊಸಾ ಯಾನ ಆರಂಭಿಸಲೂ ಬಹುದು. ಹಾಗಾಗಲೆಂಬುದು ಹಾರೈಕೆ…
#
No Comment! Be the first one.