ಬಹುಭಾಷಾ ತಾರೆ, ಲೇಡಿ ಸೂಪರ್ ಸ್ಟಾರ್ ನಯನತಾರ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ನಯನತಾರಾ ಮದುವೆ ಆಗುವ ಪ್ಲ್ಯಾನ್ ಮಾಡಿದ್ದಾರಂತೆ.
ನಯನತಾರಾ ಸದ್ಯ ರಜನಿಕಾಂತ್ ಅಭಿನಯದ ‘ದರ್ಬಾರ್’ ಮತ್ತು ಜಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಹನ್ನೊಂದರಿಂದ ಹನ್ನೆರಡು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ನಯನತಾರಾ ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ಮತ್ತು ಬ್ಯುಸಿಯಸ್ಟ್ ನಟಿ ಕೂಡ. ಅಲ್ಲದೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ. ಅಂದಹಾಗೆ ನಯನಾ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಜೊತೆ ಸದ್ಯದಲ್ಲೆ ಹಸೆಮಣೆ ಏರಲಿದ್ದಾರಂತೆ. ಕೆಲವು ವರ್ಷಗಳ ಹಿಂದೆಯೆ ನಯನಾ ಮದುವೆ ಆಗುತ್ತಿರುವುದಾಗಿ ಹೇಳಿ ಚಿತ್ರರಂಗವನ್ನೆ ಬಿಡುವ ನಿರ್ಧಾರ ಮಾಡಿದ್ದರು. ಅಲ್ಲದೆ ಚಿತ್ರತಂಡ ಅದ್ಧೂರಿ ಸೆಂಡ್ ಅಪ್ ಕೂಡ ನೀಡಿತ್ತು. ಈಗ ಮತ್ತೆ ನಯನತಾರಾ ಮದುವೆ ವಿಚಾರ ಸದ್ದು ಮಾಡುತ್ತಿದೆ.
ಸುಮಾರು ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿರುವ ಈ ಜೋಡಿ ಹಕ್ಕಿ ಇದೇ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಂತೆ. ಹೀಗಂತ ಕಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. ಸುಮಾರು ಐದು ವರ್ಷಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದ ಈ ಜೋಡಿಹಕ್ಕಿ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪಾರ್ಟಿ, ಫಾರಿನ್ ಟ್ರಿಪ್ ಅಂತ ಓಡಾಡಿಕೊಂಡಿದ್ದ ಇವರು ಈಗ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಇವರ ಮದುವೆಗೆ ಇಬ್ಬರು ಕುಟುಂಬದವರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆಯಂತೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಒಬ್ಬರಿಗೊಬ್ಬರು 2015ರಲ್ಲಿಯೇ ಪರಿಚಯವಾಗಿದ್ದರು. ನಯನತಾರಾ ಅಭಿನಯದ ‘ನಾನುಮ್ ರೌಡಿ ಧಾನ್’ ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದರು. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗಿ ಈಗ ಮದುವೆ ಹಂತಕ್ಕೆ ಬಂದಿದೆ. ‘ನಾನುಮ್ ರೌಡಿ ಧಾನ್’ ವಿಘ್ನೇಶ್ ಮತ್ತು ನಯನತಾರಾ ಕಾಂಬಿನೇಶನ್ ನ ಮೊದಲ ಸಿನಿಮಾ. ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡಿದ್ದರು.
ಈ ಹಿಂದೆ 2009ರ ಸಮಯದಲ್ಲಿ ನಯನತಾರಾ ಹೆಸರು ನಟ, ನಿರ್ದೇಶಕ, ಡ್ಯಾನ್ಸರ್ ಪ್ರಭುದೇವ ಜತೆಯಲ್ಲಿಯೂ ತಗುಲಿಹಾಕಿಕೊಂಡಿತ್ತು. ಆ ಸಮಯದಲ್ಲಿ ಪ್ರಭುದೇವ ಮೊದಲ ಪತ್ನಿಯಿಂದ ದೂರವಾದ ಕಾರಣ ನಯನತಾರಾ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಇಬ್ಬರ ಈ ಸ್ನೇಹವನ್ನು ನೋಡಿ ಈ ಜೋಡಿ ಮದುವೆಯಾಗುತ್ತಿದ್ದಾರೆಂಬ ಗುಸು ಗುಸು ಕೇಳಿಬರುತ್ತಿತ್ತು. ಅಲ್ಲದೆ ಪ್ರಭುದೇವ ಕೂಡ ನಯನತಾರ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇಬ್ಬರ ನಡುವೆ ಅದೇನಾಯ್ತೊ ಮೂರು ವರ್ಷದ ಇಬ್ಬರ ಸಂಬಂದ ದಿಢೀರನೆ ಮುರಿದು ಬಿತ್ತು. ಆ ನಂತರ ನಯನಾ ವಿಘ್ನೇಶ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ.
No Comment! Be the first one.