ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಒಂದು ಗಿಡ ಮತ್ತು ಪುಸ್ತಕವನ್ನು ನೀಡುವ ಮೂಲಕ ತಮ್ಮ ಪರಿಸರ ಪ್ರೇಮದ ಜೊತೆಗೆ ಪುಸ್ತಕ ಪ್ರೀತಿಯನ್ನು ಸಾರಿದ್ದವರು ನಟ ಯಶ್. ಸಾಮಾನ್ಯವಾಗಿ ಕನ್ನಡದ ಹೀರೋಗಳು ಸಾಹಿತ್ಯ, ಓದು, ಬರಹಗಳನ್ನೆಲ್ಲಾ ಅಂಟಿಸಿಕೊಳ್ಳೋದು ಅಪರೂಪ. ದುನಿಯಾ ವಿಜಯ್ ತಾವು ತುಂಬಾ ಪುಸ್ತಕಗಳನ್ನು ಓದುವುದಾಗಿ ಹಿಂದೊಮ್ಮೆ ಹೇಳಿಕೊಂಡಿದ್ದರು. ನೆನಪಿರಲಿ ಪ್ರೇಮ್ ಮನೆ ತುಂಬಾ ಪುಸ್ತಕ ಜೋಡಿಸಿಕೊಂಡಿರೋದಾಗಿ ಆಗಾಗ ಹೇಳುತ್ತಿರುತ್ತಾರೆ. ಯಾವ ಕಾರಣಕ್ಕೆ ಪುಸ್ತಕಗಳನ್ನು ಕೂಡಿಟ್ಟುಕೊಂಡಿದ್ದಾರೆ ಅನ್ನೋದರ ಬಗ್ಗೆ ಮಾತ್ರ ಮಾಹಿತಿಯಿಲ್ಲ.
ಇನ್ನು ಯಶ್ ಹೇಳಿ ಕೇಳಿ ರಂಗಭೂಮಿ ಹಿನ್ನೆಲೆಯಿಂದ ಬಂದ ಪ್ರತಿಭೆ. ನಾಟಕಗಳ ಗೀಳಿರುವವರು ಸಾಹಿತ್ಯ ಸಾಂಗತ್ಯವನ್ನೂ ಹೊಂದಿರುತ್ತಾರೆ ಅನ್ನೋದರಲ್ಲಿ ಡೌಟಿಲ್ಲ. ಇಷ್ಟೆಲ್ಲಾ ಹೇಳುತ್ತಿರೋದಕ್ಕೂ ಕಾರಣವಿದೆ. ಮೊನ್ನೆ ದಿನ ಅಂಕಿತ ಪುಸ್ತಕ ಪ್ರಕಟಿಸಿರುವ ಮೂರು ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಯಶ್ ಆಗಮಿಸಿದ್ದರು. ಜೋಗಿಯವರ ಸಲಾಂ ಬೆಂಗಳೂರು, ಶರತ್ ಭಟ್ ಸೇರಾಜೆಯ ‘ಬಾಗಿಲು ತೆಗೆಯೇ ಸೇಸಮ್ಮ ಮತ್ತು ಸಚಿನ್ ತೀರ್ಥಹಳ್ಳಿ ಬರೆದಿರುವ ‘ನವಿಲು ಕೊಂದ ಹುಡುಗ ಪುಸ್ತಕಗಳನ್ನು ಯಶ್ ಲೋಕಾರ್ಪಣೆ ಮಾಡಿದ್ದಾರೆ.
ಕನ್ನಡ ಸಿನಿಮಾರಂಗಕ್ಕೆ ಪುಸ್ತಕದ ಅಭಿರುಚಿ ಹೊಂದಿರೋ ಹೀರೋಗಳ ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ಸ್ಟಾರ್ ನಟನೊಬ್ಬ ಪುಸ್ತಕ ಸಂಸ್ಕೃತಿ ಬೆಳೆಯಲು ಕೈ ಜೋಡಿಸಿದರೆ ಅವರ ಎಷ್ಟೋ ಅಭಿಮಾನಿಗಳು ಸಾಹಿತ್ಯದ ಸಾಹಚರ್ಯ ಹೊಂದುತ್ತಾರೆ. ಆ ಮೂಲಕ ಹೊಸ ಓದುಗರು ಜನ್ಮವೆತ್ತಿದಂತಾಗುತ್ತದೆ….
#