ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ನಿರ್ದೇಶಕ ರಾಕೇಶ್ ಹೊಸಾ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಅದಕ್ಕೆ ಆಕರ್ಷಕ ಶೀರ್ಷಿಕೆಯೂ ಪಕ್ಕಾ ಆಗಿದೆ. ಹಳ್ಳಿಗಾಡಿನಿಂದ ಬಂದು ಅಂಥಾದ್ದೇ ವಾತಾವರಣದ ಕಥೆಗಳತ್ತ ಒಲವು ಹೊಂದಿರೋ ರಾಕೇಶ್ ಈ ಬಾರಿ ಹಳ್ಳಿ ಘಮಲಿನ ನವಿರಾದೊಂದು ಕಥೆಯೊಂದಿಗೆ ರೆಡಿಯಾಗಿದ್ದಾರೆ. ಇದಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಶೀರ್ಶಿಕೆಯಿಡಲಾಗಿದೆಯಂತೆ!
ಫ್ಯಾನ್ ಆಫ್ ರೆಬೆಲ್ ಸ್ಟಾರ್ ಹೆಸರೇ ಸೂಚಿಸುವಂತೆ ಅಂಬರೀಶ್ ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರ. ಇದರಲ್ಲಿ ನಾಯಕ ಯಾರಾಗ್ತಾರೆಂಬುದನ್ನು ಸಸ್ಪೆನ್ಸ್ ಆಗಿಡಲಾಗಿದೆ. ಆದರೆ ಹೀರೋ ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಪ್ತ ವಲಯದಲ್ಲಿದ್ದವರು. ಎಲ್ಲರಿಗೂ ಚಿರಪರಿಚಿತವಾಗಿರುವವರು. ಅವರ್ಯಾರೆಂಬ ವಿಚಾರವನ್ನು ರಾಕೇಶ್ ಇನ್ನೊಂದಷ್ಟು ಸಮಯದ ನಂತರ ಜಾಹೀರು ಮಾಡಲಿದ್ದಾರೆ. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಆಪ್ತ ವಲಯದಲ್ಲಿದ್ದ ಆ ಹೀರೋ ಯಾರೆಂಬ ಬಗ್ಗೆ ಈಗಾಗಲೇ ಜನ ನಾನಾ ರೀತಿಯಲ್ಲಿ ಗೆಸ್ ಮಾಡಲಾರಂಭಿಸಿದ್ದಾರೆ. ಆದರೆ ಅವರ್ಯಾರೆಂದು ಕಂಡು ಹಿಡಿಯೋದು ಅಷ್ಟು ಸಲೀಸಿನ ವಿಚಾರವಲ್ಲ!
ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದಲ್ಲಿ ಅಂಬಿ ಬದುಕಿನ ಕಥೆ ಇದೆಯಾ? ಅದು ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರವಾ ಅನ್ನೋದೂ ಕೂಡಾ ಹೀರೋ ಯಾರೆಂಬಷ್ಟೇ ನಿಗೂಢ. ಆದರೆ ಇದು ಮಂಡ್ಯಾ ಸೀಮೆಯ ಹಳ್ಳಿ ವಾತಾವರಣದಲ್ಲಿ ನಡೆಯೋ ಪಕ್ಕಾ ಗ್ರಾಮೀಣ ಫ್ಲೇವರಿನ ಕಥೆ ಹೊಂದಿರೋ ಚಿತ್ರ ಅನ್ನೋದಂತೂ ಸತ್ಯ. ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯದ ಫೀಲ್ಡಿನಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತಲ್ಲಾ? ಅದೇ ಮೈದಾನದಲ್ಲಿ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದ ಆರಂಭಿಕ ಕಾರ್ಯ ಕ್ರಮ ಅದ್ದೂರಿಯಾಗಿ ನಡೆಯಲಿದೆಯಂತೆ. ಕಡೇ ಘಳಿಗೆಯವರೆಗೂ ಅಂಬರೀಶ್ ಅವರು ವಿಪರೀತ ಪ್ರೀತಿಸಿದ್ದು, ಹಚ್ಚಿಕೊಂಡಿದ್ದದ್ದು ಮಂಡ್ಯ ಸೀಮೆಯನ್ನು. ಅಲ್ಲಿಂದಲೇ ಟೇಕಾಫ್ ಆಗಲಿರೋ ಈ ಸಿನಿಮಾ ಆ ವಾತಾವರಣದಲ್ಲಿಯೇ ಚಿತ್ರೀಕರಣವನ್ನೂ ನಡೆಸಲಿದೆಯಂತೆ.
ಈ ಸಿನಿಮಾವನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳೇ ಸೇರಿ ನಿರ್ಮಿಸುತ್ತಿರೋದು ಮತ್ತೊಂದು ವಿಶೇಷ. ಉದ್ಯಮಿಯೊಬ್ಬರು ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಅವರು ಕೂಡಾ ಅಂಬಿ ಅಭಿಮಾನಿಯಂತೆ.
ಟ್ಟಾರೆ ಶೀರ್ಷಿಕೆಯಂತೂ ಸದ್ಯ ರಿಜಿಸ್ಟರ್ ಆಗಿದೆ ಅನ್ನೋದು ಬಿಟ್ಟರೆ ಮತ್ತಿನ್ಯಾವ ವಿವರಗಳನ್ನೂ ನಿರ್ದೇಶಕ ರಾಕೇಶ್ ಬಿಟ್ಟುಕೊಡದೆ ನಿಗೂಢವಾಗಿಟ್ಟಿದ್ದಾರೆ. ಇಷ್ಟರಲ್ಲೇ ಸಿನಿಮಾದ ಹೀರೋ ಯಾರು? ಎಂಬುದರಿಂದ ಹಿಡಿದು ಒಂದೊಂದೇ ವಿವರಗಳು ಹೊರಬೀಳಲಿವೆ!
No Comment! Be the first one.