ಸೂರ್ಯ ಅಭಿನಯದ ’ಎನ್ಜಿಕೆ’ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದು ನಂದ ಗೋಪಾಲನ್ ಕುಮಾರನ್ (ಎನ್ಜಿಕೆ) ಕತೆ. ಟೀಸರ್ ಉದ್ದಕ್ಕೂ ಹೀರೋನ ಸುತ್ತುವರಿಯುವ ಜನರು ಆತನ ಹೆಸರನ್ನು ಪಠಿಸುತ್ತಾರೆ. ಊರಿಗೆ ಉಪಕಾರಿಯಂತೆ ಮನೆಮನೆಗೆ ಹೋಗಿ ಜನರ ಕಷ್ಟಸುಖ ವಿಚಾರಿಸುತ್ತಾನೆ ಹೀರೋ. ಜನರ ಸಂಕಷ್ಟ ಪರಿಹರಿಸುವುದು, ಅವರಲ್ಲಿ ಅರಿವು ಮೂಡಿಸುವುದು ಎನ್ಜಿಕೆ ಕೆಲಸ. ಇಂತಿಪ್ಪ ಹೀರೋಗೆ ರಾಜಕೀಯ ಪ್ರವೇಶಿಸಿ ಸಮಾಜ ಸೇವೆ ಮಾಡುವ ಹುಕಿ. ಟೀಸರ್ನ ಮತ್ತೆ ಕೆಲವೆಡೆ ಪಕ್ಕಾ ಕಾಲಿವುಡ್ ಹೀರೋಗಳ ಥರ ಹೊಡೆದಾಡುತ್ತಾನೆ.
ಸೆಲ್ವರಾಘವನ್ ನಿರ್ದೇಶನದ ಈ ಚಿತ್ರದ ನಾಯಕಿಯರಾಗಿ ಸಾಯಿ ಪಲ್ಲವಿ ಮತ್ತು ರಾಕುಲ್ ಪ್ರೀತ್ ಸಿಂಗ್ ಇದ್ದಾರೆ. ’ಇರಂದಾಮ್ ಉಳಗಂ’ (೨೦೧೩) ನಂತರ ಸೆಲ್ವರಾಘವನ್ ನಿರ್ದೇಶಿಸಿರುವ ಚಿತ್ರವಿದು. ಅವರ ಮತ್ತೆರೆಡು ಚಿತ್ರಗಳು ’ನೆಂಜಮ್ ಮರಪ್ಪತಿಲ್ಲೈ’ ಮತ್ತು ’ಮನ್ನವನ್ ವಂಥಾನಾದಿ’ ಬಿಡುಗಡೆಯಾಗಬೇಕಿದೆ. ಸೂರ್ಯ ಜೊತೆ ಇದು ಅವರಿಗೆ ಮೊದಲ ಸಿನಿಮಾ. ತಮಿಳು ನಟ ಧನುಷ್ ಟೀಸರ್ ಮೆಚ್ಚಿಕೊಂಡು, “ಪವರ್ಫುಲ್ ಟೀಸರ್. ಚಿತ್ರದ ಬಿಡುಗಡೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾದ ಬಿಡುಗಡೆ ದಿನಾಂಕವನ್ನೂ ನಿಗಧಿಯಾಗಿಲ್ಲ.