ಈ ನೆಲದ ಸಮಸ್ಯೆಗಳಿಗೆ, ಜನಸಾಮಾನ್ಯರ ದುಮ್ಮಾನಗಳಿಗೆ ಕಣ್ಣಾಗುವ ಚಿತ್ರಗಳ ಕೊರತೆ ಕನ್ನಡದಲ್ಲಿದೆ. ಅದನ್ನು ನೀಗುವಂತೆ ತಯಾರಾಗಿರುವ ಸಿನಿಮಾಗಳಲ್ಲಿ ‘ನೀರು ತಂದವರು’ ಮತ್ತು ಅನುತ್ತರ ಮುಖ್ಯವಾದವು. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಈ ಸಿನಿಮಾಗಳೀಗ ಎಂಎಕ್ಸ್ ಪ್ಲೇಯರ್, ಹಂಗಾಮಾ ಪ್ಲೇ, ಏರ್ಟೆಲ್ ಎಕ್ಸ್ ಸ್ಟ್ರೀಮ್, ವೋಡಾಫೋನ್ ಪ್ಲೇಗಳಲ್ಲಿ ಉಚಿತವಾಗಿ ಲಭ್ಯವಿದೆ.
ಕನ್ನಡದ ಖ್ಯಾತ ಕಥೆಗಾರರಾದ ಅಮರೇಶ್ ನುಗಡೋಣಿ ಅವರ ಕಥೆಯೊಂದನ್ನು ಆಧರಿಸಿರುವ ನೀರು ತಂದವರು ಚಿತ್ರ ಉತ್ತರ ಕರ್ನಾಟಕದ ಜನ ಜೀವನವನ್ನು ಪರಿಣಾಮಕಾರಿಯಾಗಿ, ಸೃಜನಾತ್ಮಕವಾಗಿ ತೆರೆದಿಟ್ಟಿದೆ. ಕಲಾತ್ಮಕ ದೃಷ್ಯಗಳ ಮೂಲಕವೇ ಗಮನ ಸೆಳೆದಿರು ಈ ಚಿತ್ರ ಗುಣಮಟ್ಟದ ಕಾರಣದಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರದರ್ಶನ ಕಾಣಲು ಆಯ್ಕೆಯಾಗಿತ್ತು.
ಮಲೆನಾಡಿನ ದಟ್ಟ ಕಾಡಿನಲ್ಲಿ ಆ ರಾತ್ರಿ ಆಗಂತುಕನೊಬ್ಬನ ಕಾರು ಕೆಟ್ಟು ನಿಲ್ಲುತ್ತದೆ. ಆಕಸ್ಮಿಕವಾಗಿ ಅದೇ ದಾರಿಯಲ್ಲಿ ಬಂದ ಮಂಜಪ್ಪಯ್ಯನವರಿಗೆ ಆತ ಎದುರಾಗುತ್ತಾನೆ. ಅವರ ಮನೆಗೂ ಎಂಟ್ರಿ ಕೊಡುತ್ತಾನೆ. ಅಲ್ಲಿ ಅವನ ಹಿಂದಿನ ನೆನಪುಗಳು ಬಿಚ್ಚಿಕೊಳ್ಳುತ್ತದೆ. ಮಂಜಪ್ಪಯ್ಯನವರ ಆಶ್ರಯ ಕೇಳಿ ಅಲ್ಲಿಗೆ ಮತ್ತಿಬ್ಬರು ಯುವಕರು ಬರುತ್ತಾರೆ. ಅವರನ್ನು ಹುಡುಕಿಕೊಂಡು ನಡುರಾತ್ರಿಯಲ್ಲಿ ಪೊಲೀಸರೂ ಆಗಮಿಸುತ್ತಾರೆ. ಇಡೀ ರಾತ್ರಿ ಮನೆಯಲ್ಲಿ ನಡೆಯುವ ಮಾತುಕತೆಗಳು ಕೇವಲ ಬಹಿರಂಗದ ಹಿಂಸೆಗೆ ಒಳಪಡೆದೆ ಅಂತರಂಗದ ಹಿಂಸೆಗೆ, ನೋವಿಗೆ ಉತ್ತರ ಕಂಡುಕೊಳ್ಳುತ್ತಾ ಮಹಾತ್ಮ ಗಾಂಧಿಯವರ ಸಮನ್ವಯತೆಯ ದೃಷ್ಟಿಕೋನದಲ್ಲಿ ಕಥೆ ಮುಗಿಯುತ್ತದೆ – ಇದು ಅನುತ್ತರ ಸಿನಿಮಾದ ಸಾರಾಂಶ.
ಸಾಹಿತಿಯಾಗಿ, ಪುಸ್ತಕ ಪ್ರಕಾಶಕರಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಿಡಸಾಲೆ ಪುಟ್ಟಸ್ವಾಮಯ್ಯನವರು ತಮ್ಮ ಚಿಗುರು ಕ್ರಿಯೇಶನ್ಸ್ ಮೂಲಕ ನೀರು ತಂದವರು ಮತ್ತು ಅನುತ್ತರ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನೀರು ತಂದವರು ಸಿನಿಮಾವನ್ನು ಆಸಿಫ್ ಕ್ಷತ್ರಿಯ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಮಠ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಅತ್ಯುತ್ತಮ ನಟ ಅಂತಲೇ ಹೆಸರಾಗಿರುವವರು ಆಸಿಫ್. ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದ ಗಾರ್ಗಿ ಕಾರೇಹಕ್ಲು ʻಅನುತ್ತರʼದ ನಿರ್ದೇಶಕರಾಗಿದ್ದಾರೆ.
ಚಲನ ಚಿತ್ರ ಎಂಬುದು ಯಾವತ್ತಿದ್ದರೂ ಪರಿಣಾಮಕಾರಿ ಮಾಧ್ಯಮ. ಅದರ ಮೂಲಕವೇ ಜನರ ಬದುಕನ್ನು ಹಸಿಯಾಗಿ ತೆರೆದಿಟ್ಟು ಅವರ ದುಃಖ ಧಾವಂತಗಳನ್ನು ಮುಖ್ಯಭೂಮಿಕೆಗೆ ದಾಟಿಸುವ ಚಿತ್ರವಾಗಿ ನೀರು ತಂದವರು ಮತ್ತು ಅನುತ್ರತ ಸಿನಿಮಾಗಳು ಗಮನಾರ್ಹವಾಗಿವೆ. ಈಗ ಒಟಿಟಿಯಲ್ಲಿ ಬಿಡುಗಡೆಯಾಗಿ ಗಮನ ಸೆಳೆಯುತ್ತಿವೆ.
No Comment! Be the first one.