ಇವು ಫೋಟೋಗಳಲ್ಲ… ಪೇಂಟಿಂಗ್ಸ್!‌

ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಆಸಕ್ತಿ. ತಾವಿಷ್ಟ ಪಟ್ಟ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರವಲ್ಲ, ಅದನ್ನು ಧ್ಯಾನದಂತೆ ಸ್ವೀಕರಿಸಿ, ಶ್ರದ್ಧೆಯಿಂದ ತೊಡಗಿಸಿಕೊಂಡರೆ ಗೆಲುವು ತಂತಾನೇ ದಕ್ಕುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯಂತಿರುವವರು ಕಲಾವಿದೆ ನಿಧಿ ಮಂಜುನಾಥ್!

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಚನ್ನಪಟ್ಟಣಕ್ಕೆ ಎಂಟ್ರಿ ಕೊಡುತ್ತಿದ್ದಂತೇ ಸಿಗುವ ಶಿವಳ್ಳಿ ಹೊಟೇಲಿನ ಪಕ್ಕದಲ್ಲೇ ಮೈಲ್‌ ಸ್ಟೋನ್‌ 67 ಹೆಸರಿನ ರೆಸ್ಟಾರೆಂಟ್‌ ಇದೆ. ಅದನ್ನು ಸ್ವತಃ ನಿಧಿ ನಡೆಸುತ್ತಿದ್ದಾರೆ. ಅದರ ಎದುರಲ್ಲೇ ಇರುವ ಆರ್ಟಿಸ್ಟ್‌ ಫಾರ್‌ ವೈಲ್ಡ್‌ ಲೈಫ್‌ ಕನ್ಸರ್ವೇಶನ್ ಕರ್ನಾಟಕ‌ ಎನ್ನುವ ಆರ್ಟ್‌ ಗ್ಯಾಲರಿ ಮತ್ತು ಮಾರಾಟ ಮಳಿಗೆ ಇದೆ. ಅದೂ ಕೂಡಾ ನಿಧಿ ಮಂಜುನಾಥ್‌ ಅವರೇ ಸ್ಥಾಪಿಸಿರುವ ಸಂಸ್ಥೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು ನಿಧಿ. ಮೌಂಟ್‌ ಕಾರ್ಮೆಲ್ಸ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಸೆಂಟರ್‌ ಫಾರ್‌ ಮ್ಯಾನೇಜ್‌ ಮೆಂಟ್‌ ಸ್ಟಡೀಸ್‌ ಕೋರ್ಸಿಗೆ ಸೇರಿದರು. ಇದರ ವ್ಯಾಸಂಗದ ಕಾರಣಕ್ಕೆ ‌ಕೆಲ ತಿಂಗಳು ಸಿಂಗಪೂರ್‌, ಆಸ್ಟ್ರೇಲಿಯಾ, ಲಂಡನ್‌ ಮುಂತಾದ ಕಡೆ ಓಡಾಡಬೇಕಾದ ಸಂದರ್ಭವೂ ಎದುರಾಗಿತ್ತು. ಆಗೆಲ್ಲಾ ನಿಧಿಗೆ ಮತ್ತೆ ಇಂಡಿಯಾಗೆ ಹೋಗಬೇಕು. ಇದು ತನ್ನಿಷ್ಟದ ಕ್ಷೇತ್ರವಲ್ಲ. ತಾನು ಸಾಧಿಸಬೇಕಿರುವುದೇ ಬೇರೆ ಅಂತಾ ಕಾಡಲು ಶುರುವಾಗಿತ್ತು. ಹಾಗೆಯೇ ಭಾರತಕ್ಕೆ ಬಂದವರೇ ಕೆಲ ದಿನಗಳ ಕಾಲ ಮುಂಬೈನಲ್ಲೂ ನೆಲೆಸಿದ್ದರು. ಆ ಸಂದರ್ಭದಲ್ಲಿ ಪೇಂಟಿಂಗ್‌ ಅನ್ನೋದು ನಿಧಿ ಅವರಿಗೆ ವಿಪರೀತ ಸೆಳೆಯುತ್ತಿತ್ತು. ಹವ್ಯಾಸಿ ಚಿತ್ರಕಲೆಯ ಕೋರ್ಸಿಗೂ ನಿಧಿ ಸೇರಿದ್ದರು. ಏನಾದರೊಂದು ಪೇಂಟಿಗ್‌ ಮಾಡಿ ಸಹಪಾಠಿ ಅಮೃತಾ ಜೋಷಿಗೆ ತೋರಿಸುತ್ತಿದ್ದರು. ನಿಧಿಯ ಪೇಂಟಿಂಗುಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಅಮೃತಾ ʻನಿನ್ನ ಕಲಾಕೃತಿಗಳಲ್ಲಿ ಏನೋ ಒಂದು ಕೊರತೆ ಎದ್ದು ಕಾಣುತ್ತಿದೆ. ನೀನು ಕಾಡುಗಳನ್ನು ಸುತ್ತಾಡಿ, ಕೆಲವು ಎಲಿಮೆಂಟುಗಳನ್ನು ಸೇರಿಸು. ಆಗ ಕಲೆಗೆ ಮತ್ತಷ್ಟು ಮೆರುಗು ಸಿಗುತ್ತದೆ ಎಂದಿದ್ದರಂತೆ.

ಗೆಳತಿ ಅಮೃತಾ ಹೇಳಿದಂತೆ ಪ್ರವಾಸಿಯಂತೆ ಕಾಡುಗಳಿಗೆ ಭೇಟಿ ನೀಡುವ ಪರಿಪಾಠವನ್ನು ನಿಧಿ ಬೆಳೆಸಿಕೊಂಡರು. ಹಾಗೊಮ್ಮೆ ಇವರು ಕಲಾವಿದೆ ಅನ್ನೋದನ್ನು ಗುರುತಿಸಿದವರು ಫಾರೆಸ್ಟ್‌ ಆಫೀಸರ್‌ ವೇಣುಗೋಪಾಲ್.‌ ʻನಿಮ್ಮಷ್ಟಕ್ಕೆ ನೀವು ಚಿತ್ರ ಬಿಡಿಸಿದರೆ ಏನು ಪ್ರಯೋಜನ, ಅದರಿಂದ ಸಮಾಜಕ್ಕೆ ಏನಾದರೂ ಒಳಿತಾಗಬೇಕು ಅಂದರಂತೆ. ಪೆಂಚ್‌ ಟೈಗರ್‌ ರಿಸರ್ವ್‌ ಫಾರೆಸ್ಟಿನ ಅಧಿಕಾರಿ ವೇಣುಗೋಪಾಲ್‌ ಅವರೇ ಸ್ವತಃ ಒಂದು ಐಡಿಯಾವನ್ನೂ ಕೊಟ್ಟರಂತೆ. ಅದೇನೆಂದರೆ, ಪೇಂಟಿಂಗುಗಳನ್ನು ಮಾರಿ ಅದರಿಂದ ಬರುವ ಹಣದಲ್ಲಿ ಫಾರೆಸ್ಟ್‌ ಗಾರ್ಡ್‌ ಗಳಿಗೆ ಅಗತ್ಯವಿರುವ ಟಾರ್ಚ್‌ ಲೈಟ್‌, ಫೋಟೋ ಎವಿಡೆನ್ಸ್ ಕ್ಯಾಮೆರಾ ಮುಂತಾದವುಗಳನ್ನು ಕೊಡಿಸುವುದು. ವೇಣುಗೋಪಾಲ್‌ ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸಿದ ನಿಧಿ ತಮ್ಮ ಮೊದಲ ಪೇಂಟಿಂಗನ್ನು ಮಾರಿ, ಅದರಿಂದ ಬಂದ ಹಣದಿಂದ ಅರಣ್ಯ ರಕ್ಷಕರಿಗೆ ಬೇಕಾದ ಅಗತ್ಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದರು.

ಹೀಗೆ ಹವ್ಯಾಸಿ ಕಲಾವಿದೆಯಾಗಿದ್ದ ನಿಧಿ 2012ರಿಂದ ಪೂರ್ಣಪ್ರಮಾಣದಲ್ಲಿ, ಪ್ರೊಫೆಷನಲ್‌ ಆರ್ಟಿಸ್ಟ್‌ ಆಗಿ ರೂಪಾಂತರಗೊಂಡರು. ಈ ವರೆಗೆ ನಿಧಿ ಕೈಲಿ ಅರಳಿದ ವನ್ಯಜೀವಿ ಕಲಾಕೃತಿಗಳಲ್ಲಿ ಶೇ. 50ರಷ್ಟು ಹೊರ ದೇಶಗಳಿಗೆ ಮಾರಾಟವಾಗಿವೆ. ಇನ್ನು ಚನ್ನಪಟ್ಟಣದ ಒಂದು ಕುಟುಂಬ, ಮೈಸೂರು ಮಹಾರಾಜರ ಸಂಬಂಧಿಕರು ಸೇರಿದಂತೆ ಭಾರತೀಯರಲ್ಲೂ ಅನೇಕರು ನಿಧಿ ಮಂಜುನಾಥ್‌ ರೂಪಿಸಿದ ಕಲಾಕೃತಿಗಳನ್ನು ಖರೀದಿಸಿದ್ದಾರೆ. 2018ರಲ್ಲಿ ಆರ್ಟಿಸ್ಟ್‌ ಫಾರ್‌ ವೈಲ್ಡ್‌ ಲೈಫ್‌ ಕನ್ಸರ್ವೇಶನ್ ಕರ್ನಾಟಕ ಆರಂಭಿಸಿದ ನಿಧಿ ಆ ಮೂಲಕ ಅರಣ್ಯ ವಾಸಿಗಳು ತಯಾರಿಸಿದ ಕರಕುಶಲ ವಸ್ತುಗಳು, ಪರಿಸರ ಸ್ನೇಹಿ ಸಾಮಗ್ರಿಗಳನ್ನು ಮಾರಾಟ ಮಾಡುವ ಕೆಲಸವನ್ನೂ ಆರಂಭಿಸಿದರು. ಜೊತೆಗೆ ಕಾಡಿನ ಉತ್ಪನ್ನಗಳಾದ ಕಾಫಿ, ಟೀ, ಮೆಣಸು, ಜೇನುತುಪ್ಪದಂಥಾ ಪದಾರ್ಥಗಳನ್ನೂ ಇಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಆದಿವಾಸಿ, ಅರಣ್ಯ ಕಾರ್ಮಿಕರ ಬದುಕಿಗೂ ಆಸರೆಯಾಗಿದ್ದಾರೆ. ಮಾರಾಟದಿಂದ ಬಂದ ಹಣದಲ್ಲಿ ಶೇ 10% ರಿಂದ 20%ಷ್ಟು ಹಣವನ್ನು ಅರಣ್ಯ ರಕ್ಷಕರ ಅಗತ್ಯಗಳಿಗೆ ವ್ಯಯಿಸುತ್ತಿದ್ದಾರೆ.

ಅಂದಹಾಗೆ ನಿಧಿ ತೀರಾ ವಿರಳ ಎನ್ನಿಸಿಕೊಂಡಿರುವ ಸಾಫ್ಟ್‌ ಪಾಸ್ಟಲ್ ಮಾದರಿಯ ಚಿತ್ರಕಲೆಯಲ್ಲಿ ಹೆಸರು ಮಾಡಿದ್ದಾರೆ. ಈ ಪೇಂಟಿಂಗುಗಳನ್ನು ರೂಪಿಸಲು ಮಾಮೂಲಿ ಬಣ್ಣಕ್ಕಿಂತಾ ಹೆಚ್ಚು ಖರ್ಚಾಗುತ್ತದೆ. ದುಬಾರಿ ಬೆಲೆಯ ಈ ಹೈಪರ್‌ ರಿಯಲಿಸ್ಟಿಕ್‌ ಆರ್ಟ್ ವರ್ಕ್‌‌ ಗಳನ್ನು ಜೋಪಾನ ಮಾಡುವುದೂ ಕಷ್ಟ. ಒಂದು ಕಲಾಕೃತಿಯನ್ನು ಪೂರ್ಣಗೊಳಿಸಲು ಏಳು ದಿನಗಳಿಂದ ಮೂರು ವಾರಗಳ ದೀರ್ಘ ಸಮಯ ಕೂಡಾ ಬೇಕಾಗುತ್ತದೆ. ಅಷ್ಟು ತಾಳ್ಮೆಯಿಂದ ಬಿಡಿಸುವ ಕಾರಣಕ್ಕೇ ಈ ಚಿತ್ರಗಳು ಕ್ಯಾಮೆರಾದ ಫೋಟೋಗಳೂ ನಾಚುವಷ್ಟು ನ್ಯಾಚುರಲ್‌ ಆಗಿ ಮತ್ತು ಆಕರ್ಷಕವಾಗಿ ಮೂಡಿಬರುತ್ತವೆ. ನಿಧಿ ಅವರ ತಂದೆ ಮಂಜುನಾಥ್.‌ ತಾಯಿ ಭಾರತಿ. ಬೆಂಗಳೂರು ಮೈಸೂರು ಹೈವೇಯಲ್ಲಿ ಇಂದ್ರ ಧನುಷ್‌ ಎನ್ನುವ ರೆಸ್ಟೋರೆಂಟ್‌ ನಡೆಸುತ್ತಿದ್ದರು. ಕೋವಿಡ್‌ ಕಾರಣಕ್ಕೆ ಅದನ್ನು ನಿಲ್ಲಿಸಲಾಗಿದೆ. ವನ್ಯಜೀವಿ ಛಾಯಾಗ್ರಾಹಕ ರಾಗಿರುವ ಪತಿ ಮಂಜು ಆಚಾರ್ಯ ನಿಧಿ ಅವರ ಕಲಾಸಕ್ತಿಯನ್ನು ಮತ್ತಷ್ಟು ಹೆಚ್ಚಾಗಿಸಿದ್ದಾರೆ. ಮಂಜು ಆಚಾರ್ಯ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಸಾಕಷ್ಟು ಕಾಡು ಪ್ರಾಣಿ, ಪಕ್ಷಿಗಳು ನಿಧಿಯವರ ಕ್ಯಾನ್ವಾಸಿನಲ್ಲಿ ಕಲೆಯ ರೂಪದಲ್ಲಿ ಮರುಜೀವ ಪಡೆದಿವೆ.

2019ರ ಪ್ರತಿಷ್ಠಿತ ಆರ್ಟಿಸ್ಟ್‌ ಫಾರ್‌ ವೈಲ್ಡ್‌ ಲೈಫ್‌ ಅಂಡ್‌ ನೇಚರ್‌ ಪ್ರಶಸ್ತಿಯ ಕೀರ್ತಿ ಕೂಡಾ ನಿಧಿ ಅವರ ಮುಡಿಗೇರಿದೆ. ಈ ಕ್ಷೇತ್ರದಲ್ಲಿ ನಿಧಿ ಮಂಜುನಾಥ್‌ ಇನ್ನೂ ಹೆಸರು ಗಳಿಸಲಿ. ಆ ಮೂಲಕ ವನ್ಯಜೀವಿಗಳ ಉಳಿವಿಗೆ ಕಾರಣರಾಗಲಿ…


Posted

in

by

Tags:

Comments

Leave a Reply