ಕಳೆದ ವರ್ಷ ಕೇರಳದಲ್ಲಿ ವಿಪರೀತ ಭೀತಿ ಹುಟ್ಟಿಸಿ, ಸಾಕಷ್ಟು ಮಂದಿಯನ್ನು ಬಲಿ ಪಡೆದುಕೊಂಡ ನಿಫಾ ವೈರಸ್ ನ ಕುರಿತು ಮಲಯಾಳಂ ನಲ್ಲಿ ಸಿನಿಮಾವೊಂದು ರೆಡಿಯಾಗಿದೆ.
ತೀರಾ ಆಯಾಸಗೊಂಡ ವ್ಯಕ್ತಿಯೊಬ್ಬ ಕೆಮ್ಮುತ್ತಾ ಆಟೋ ಹತ್ತಿ ಕುಳಿತುಕೊಳ್ಳುತ್ತಾನೆ. ಆಟೋ ಚಾಲಕ ತಕ್ಷಣ ಕೆಳಗಿಳಿದು ಆ ವ್ಯಕ್ತಿಯನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾನೆ. ಅಲ್ಲದೇ ಅಲ್ಲಿಂದ ಹೊರಡುವಂತೆಯೂ ಗದರುತ್ತಾನೆ. ಆ ವ್ಯಕ್ತಿ ರಸ್ತೆ ಬದಿಗೆ ಬಂದು ಮತ್ತೊಂದು ಕಡೆಯಿಂದ ಬರುತ್ತಿದ್ದ ಬೈಕ್ ಗೆ ಕೈ ತೋರಿಸಿ ಡ್ರಾಪ್ ಕೇಳುತ್ತಾನೆ. ಇನ್ನೇನು ಬೈಕ್ ಸವಾರ ಡ್ರಾಪ್ ಕೊಡಬೇಕೆನ್ನುವಷ್ಟರಲ್ಲಿ ಆಟೋ ಚಾಲಕ ದೂರದಿಂದ ಬೇಗ ತಪ್ಪಿಸಿಕೋ ಆತನಿಗೆ ನಿಫಾ ಇದೆ ಎಂದು ಕೂಗುತ್ತಾನೆ. ಸವಾರ ಪ್ರಾಣ ಭಯದಿಂದ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಾ ಕಾಲ್ಕೀಳುತ್ತಾನೆ ಇದು ಸಿನಿಮಾದ ಟ್ರೇಲರ್ ನಲ್ಲಿ ಕಾಣಬಹುದಾದ ದೃಶ್ಯ.
ರಿಯಲ್ ಸ್ಟೋರಿಗಳನ್ನು ಬೇಸ್ ಆಗಿಟ್ಟುಕೊಂಡು ಮಾಲಿವುಡ್ ನಲ್ಲಿ ನಿರ್ಮಾಣವಾದ ಸಿನಿಮಾಗಳಿಗೇನು ಬರವಿಲ್ಲ. ಅವುಗಳ ಪೈಕಿ ಸಾಕಷ್ಟು ಪತ್ತೇದಾರಿ ಕಾದಂಬರಿಗಳಿಗೆ ಸಂಬಂಧಪಟ್ಟಿರುವಂತಹವು. ಆದರೆ ನಿಫಾ ವೈರಸ್ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ವೈರಸ್ ಸಿನಿಮಾ ಇದಕ್ಕೆ ತದ್ವಿರುದ್ಧ. ಇತ್ತೀಚಿಗೆ ಬಿಡುಗಡೆಯಾದ ಚಿತ್ರದ ಟ್ರೇಲರ್ ನಿಫಾ ವೈರಸ್ ಸೃಷ್ಟಿಸಿದ್ದ ಭೀಕರತೆಯನ್ನು ಪ್ರೇಕ್ಷಕರ ಮುಂದಿಟ್ಟಿದೆ. ಸಾಕ್ಷ್ಮ ಚಿತ್ರಗಳ ಮಾದರಿಯಲ್ಲಿ ತಯಾರಾಗಿರುವ ವೈರಸ್ ಆಸ್ಪತ್ರೆಗಳಲ್ಲಿ ರೋಗಿಗಳ ನರಳಾಟ, ಅವರ ಸಂಬಂಧಿಕರ ಪರದಾಟ, ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ನಿಫಾದ ಕುರಿತು ನೀಡುವ ವಿವರಣೆ ಮುಂತಾದ ಮನ ತಟ್ಟಬಹುದಾದ ಸಂಗತಿಗಳನ್ನು ಈ ಸಿನಿಮಾ ಒಳಗೊಂಡಿದೆ.
ಇನ್ನು ನಿಫಾ ವೈರಸ್ ಗೆ ಮೊದಲ ಬಲಿಯಾದ ಯುವತಿಯ ತಾಯಿ ಹೇಳುವ ನನ್ನ ಮಗಳಿಂದಾಗಿ ಎಲ್ಲರಿಗೂ ಈ ರೋಗ ಬಂತಲ್ಲವೇ ಎಂಬ ಮಾತು ನೋಡುಗರನ್ನು ಕಣ್ಣೀರಾಡುವಂತೆ ಮಾಡುತ್ತದೆ. ಬಹುತೇಕ ನವನಟರೇ ತುಂಬಿರುವ ಈ ಸಿನಿಮಾದಲ್ಲಿ ಕುಂಜಾಕೊ ಬೋಬನ್, ಇಂದ್ರಜಿತ್, ಟೊವಿನೋ ಥಾಮಸ್, ಪಾರ್ವತಿ, ರೀಮಾ ಕಲ್ಲಿಂಗಲ್, ಆಸಿಫ್ ಅಲಿ, ಜೋಜು ಜಾರ್ಜ್, ರಮ್ಯಾ ನಂಬೀಶನ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಆಶಿಕ್ ಅಬು ನಿರ್ದೇಶನ ಮಾಡಿದ್ದಾರೆ.
No Comment! Be the first one.