ನೈಟ್ ಔಟ್ ಸಿನಿಮಾಕ್ಕೆ ಇಬ್ಬರು ನಾಯಕರು. ಅವರಲ್ಲಿ ಭರತ್ ಒಬ್ಬರು. ಚಿಕ್ಕಪುಟ್ಟ ಪಾತ್ರ ಮಾಡಿಕೊಂಡಿದ್ದ ತನಗೆ ರಾಕೇಶ್ ಒಂದು ದೊಡ್ಡ ಅವಕಾಶ ಕಲ್ಪಿಸಿದರು ಎಂದು ಕೃತಜ್ಞರಾಗುತ್ತಾರೆ ಭರತ್.
“ರಾಕೇಶ್ ಅಡಿಗ ಸ್ವತಃ ತಾವೇ ಒಬ್ಬ ನಟ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ನಿರ್ದೇಶನದ ಸಿನಿಮಾದಲ್ಲಿ ನನಗೆ ನಾಯಕ ನಟನಾಗಿ ಬಣ್ಣ ಹಚ್ಚುವ ಅವಕಾಶ ಬಂದಿದ್ದು ವಿಶೇಷ ಸಂಗತಿ. ರಾಕೇಶರಿಗಿದ್ದ ನಟನಾ ಸಾಮರ್ಥ್ಯ, ಅವರ ಇನ್ಪುಟ್ಸ್ ನಾನು ನಟಿಸುವಾಗ ಸಾಕಷ್ಟು ನೆರವಾಯ್ತು. ಎಲ್ಲರೂ ಸಮಾನವಯಸ್ಕರು. ಹಾಗಾಗಿ ಕೆಲಸವೂ ಸ್ನೇಹಮಯ ವಾತಾವರಣದಲ್ಲೇ ನಡೆದುಹೋಯ್ತು…
ನನ್ನ ಹಿನ್ನೆಲೆ ಬಗ್ಗೆ ಹೇಳಬೇಕಂದರೆ, ಇದಕ್ಕೂ ಮುಂಚೆ ನಾನು ಕೆಲವೊಂದು ಡ್ರಾಮಾಗಳಲ್ಲಿ ಅಭಿನಯಿಸಿದ್ದೆ. ಸಿನಿಮಾದಲ್ಲಿ ನಟಿಸಿದ್ದೆನಾದರೂ ಅವೆಲ್ಲಾ ಹೀಗೆ ಬಂದು ಹಾಗೆ ಹೋಗುವ ರೋಲ್ಗಳು. ಈ ನಡುವೆ ಮುಂಬೈನಲ್ಲಿ ನಡೆದ ಒಂದು ವರ್ಕ್ಶಾಪ್ ಅಟೆಂಡ್ ಮಾಡಿದ್ದೆ. ಆಗಲೇ ನನಗೆ ರಾಕೇಶ್ ಪರಿಚಯವಾಗಿದ್ದು. ಅಷ್ಟೊತ್ತಿಗಾಗಲೇ ರಾಕೇಶ್ ಅಡಿಗ ಬಳಿ ಕಥೆ ರೆಡಿ ಇತ್ತು. ಕುಳಿತು ಡಿಸ್ಕಷನ್ ಕೂಡಾ ಮಾಡಿದ್ದೆವು.
ಯಾವಾಗ ಸಿನಿಮಾ ಶುರುವಾಯ್ತೋ.. ಅದೆಲ್ಲವೂ ತುಂಬಾ ನೆರವಿಗೆ ಬಂತು. ನನ್ನ ಪಾತ್ರವನ್ನ ನಾನು ಎಷ್ಟರ ಮಟ್ಟಿಗೆ ಸಮರ್ಥವಾಗಿ ನಿಭಾಯಿಸಿದ್ದೇನೋ ಗೊತ್ತಿಲ್ಲ.. ಆದರೆ ನಾನಂತೂ ಪ್ರಾಮಾಣಿಕವಾಗಿ ನನ್ನ ಪ್ರಯತ್ನ ಮಾಡಿದ್ದೇನೆ. ನಮ್ಮ ನಿರ್ದೇಶಕರಿಗೂ ಅದು ಇಷ್ಟವಾಗಿದ್ದರೆ, ಪ್ರೇಕ್ಷಕರಿಗೂ ಹಿಡಿಸಿದರೆ ನಾನು ಹ್ಯಾಪಿ.
ಪ್ರತೀ ಶಾಟ್ ಆದಾಗಲೂ ’ಚೆನ್ನಾಗಿ ಬಂತಾ, ಇನ್ನೂ ಏನಾದರೂ ಅವಶ್ಯಕತೆ ಇತ್ತಾ?’ ಅಂತ ನಿರ್ದೇಶಕರನ್ನ ಹೋಗಿ ಕೇಳುತ್ತಿದ್ದೆ. ಅವರೂ ಸರಿಯಾಗಿ ಬರದಿದ್ದದ್ದನ್ನ ಹೀಗಲ್ಲ ಹಾಗೆ ಎಂದು ಹೇಳಿ ತಿದ್ದುತ್ತಿದ್ದರು. ತೆರೆಯ ಮೇಲೆ ಕಾಣಿಸುವ ಎಲ್ಲಾ ಒಳ್ಳೆಯದ್ದಕ್ಕೂ ಅವರೇ ಕಾರಣ”
No Comment! Be the first one.