ರಾಕೇಶ್ ಅಡಿಗ ನಟನಾಗಿ ಗೆದ್ದವರು. ಅವರ ಅಭಿನಯವಿದ್ದ ಜೋಶ್, ಅಲೆಮಾರಿ ಸಿನಿಮಾಗಳಲ್ಲಿನ ಅವರ ಅಭಿನಯ ಪ್ರೇಕ್ಷಕರಿಗೆ ಹಿಡಿಸಿತ್ತು. ಸುಮಾರು ಹದಿಮೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಪಾತ್ರ ಮಾಡಿರುವ ರಾಕೇಶ್, ಇದೀಗ ಒಂದು ಹೊಸ ಸಾಹಸ ಮಾಡಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನೈಟ್ ಔಟ್ ಎಂಬ ಚಿತ್ರವೊಂದು ಇದೇ ಏಪ್ರಿಲ್ 12ಕ್ಕೆ ತೆರೆ ಕಾಣಲಿದ್ದು ಈ ಚಿತ್ರವನ್ನ ನಿರ್ದೇಶನ ಮಾಡಿರುವುದು ರಾಕೇಶ್ ಅಡಿಗ.
ನಟನೆ ಮಾಡಿಕೊಂಡಿದ್ದವರು, ಹೀರೋ ಆಗಿ ಬಣ್ಣ ಹಚ್ಚಿದ್ದವರು ಇದೀಗ ದಿಢೀರನೆ ಸಿನಿಮಾ ನಿರ್ದೇಶನದ ಕಡೆ ಹೊರಳಿಕೊಂಡಿದ್ದು ಹೇಗೆ ಎಂಬ ಕುತೂಹಲ ಮೂಡುವುದು ಸಹಜ. ಅದಕ್ಕೆ ಅಡಿಗ ವಿವರಣೆ ನೀಡುತ್ತಾರೆ. ‘ಏನಿಲ್ಲ, ನಾನು ನಿರ್ದೇಶಕನಾಗಬೇಕು ಅಂತಲೇ ಚಿತ್ರರಂಗಕ್ಕೆ ಬಂದವನು. ನಟನಾಗುವುದಕ್ಕೂ ಮುಂಚೆ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಆದರೆ ಜೋಷ್ ನಂತರ ನಟನೆಗೆ ಅವಕಾಶಗಳು ಹೆಚ್ಚಾದ್ದರಿಂದ ಅದೇ ದಿಕ್ಕಿನಲ್ಲಿ ಮುಂದುವರಿದೆ. ಅದರ ನಡುವೆಯೂ ನನ್ನದೇ ಆದ ಕಥೆ ಮಾಡಿಕೊಳ್ಳಬೇಕು, ಅದನ್ನ ನಿರ್ದೇಶನ ಮಾಡಬೇಕು ಎಂಬ ಆಸೆ ಮನದ ಮೂಲೆಯಲ್ಲಿ ಜಾಗೃತವಾಗಿ ಇದ್ದೇ ಇತ್ತು. ನೈಟ್ ಔಟ್ ಮೂಲಕ ಅದು ನೆರವೇರಿರುವುದರಿಂದ ಸಹಜವಾಗೇ ಸಂಭ್ರಮದಲ್ಲಿದ್ದೇನೆ’ ಎನ್ನುತ್ತಾರೆ ರಾಕೇಶ್ ಅಡಿಗ.
ಈಗಾಗಲೇ ತನ್ನ ಟ್ರೇಲರ್ ಹಾಗೂ ಹಾಡುಗಳಿಂದ ಪ್ರೇಕ್ಷಕರ ಗಮನವನ್ನ ಸೆಳೆದುಕೊಂಡಿರುವ ನೈಟ್ ಔಟ್ ಹೊಸತನ ನೀಡುವ ಭರವಸೆಯೊಂದಿಗೆ ಬಿಡುಗಡೆಗೆ ಅಣಿಯಾಗಿದೆ. ಇದೊಂದು ಯೂಥ್ಫುಲ್ ಎಂಟರ್ಟೈನರ್, ಸೈಕಲಾಜಿಕಲ್ ಥ್ರಿಲ್ಲರ್ ಅನ್ನೋದು ರಾಕೇಶ್ ನೀಡುವ ವಿವರಣೆ.
ನೈಟ್ ಔಟ್ ನೀವಂದ್ಕಂಡಂಗಲ್ಲ!’
ನೈಟ್ಔಟ್ ಎಂದ ಮಾತ್ರಕ್ಕೆ ಯಾವುದೋ ಪಬ್ಬು, ಪಾರ್ಟಿ ಕಥೆ, ರಾತ್ರಿ ಜೀವನದ ಮೋಜಿನ ಕಥೆ ಅಂತನ್ನಿಸುವುದು ಸಹಜ. ನಾನು ಈ ಟೈಟಲ್ ಅನೌನ್ಸ್ ಮಾಡಿದಾಗಲೂ ಅದೇ ಅಭಿಪ್ರಾಯಗಳು ವ್ಯಕ್ತವಾದವು. ಆದರೆ ನನ್ನ ಪ್ರಕಾರದ, ನನ್ನ ಸಿನಿಮಾದ ನೈಟ್ ಔಟ್ ಬೇರೆ. ಇದು ಪಾರ್ಟಿಗಷ್ಟೇ ಸೀಮಿತವಾಗಿ ಉಳಿದುಕೊಳ್ಳುವ ನೈಟ್ಔಟ್ ಅಲ್ಲ. ಇಲ್ಲಿ ಬೇರೆಯದೇ ಆದ ಕಥಾನಕವಿದೆ. ಓರ್ವ ಜರ್ನಲಿಸ್ಟ್ ಪಾಲಿಗೆ ನೈಟ್ ಔಟ್ ಅಂದರೆ ಅದು ಮೋಜಿನ ಸುತ್ತಾಟವಾಗಿರುವುದಿಲ್ಲ. ಆತ ಯಾವುದೋ ಅಸೈನ್ಮೆಂಟ್ಗೋಸ್ಕರ ಆಚೆ ಹೋಗಿರಬಹುದು. ಒಬ್ಬ ಪೊಲೀಸ್ ನೈಟ್ ಔಟ್ ಶೋಕಿಗಾಗಿ ನಡೆಯುವಂಥದ್ದಲ್ಲ. ಕರ್ತವ್ಯದ ಮೇಲೆ ಹೋಗಿರಬಹುದು. ನಮ್ಮ ನೈಟ್ಔಟ್ ಕೂಡಾ ಇಂಥ ಬೇರೆ ನೆಲೆಯತ್ತ ದೃಷ್ಟಿಹರಿಸುವಂಥ ಪ್ರಯತ್ನ. ಇದೊಂದು ಎಂಗೇಜಿಂಗ್ ಸೈಕಲಾಜಿಕಲ್ ಥ್ರಿಲ್ಲರ್..’ ಎನ್ನುತ್ತಾರೆ ರಾಕೇಶ್.
ಇಬ್ಬರು ಗೆಳೆಯರ ಜೀವನದಲ್ಲಿ ನಡೆಯುವಂಥ ಘಟನಾವಳಿಗಳೇ ಈ ಚಿತ್ರದ ಭೂಮಿಕೆಯಂತೆ. ಒಂದು ರಾತ್ರಿ ಕಳೆದು ಹಗಲಾಗುವುದರೊಳಗಾಗಿ ಅವರಲ್ಲೊಬ್ಬ ಮಾನಸಿಕ ಅಸ್ವಸ್ಥನಂತಾಡುವುದು, ಅದರ ಮೂಲ ಅರಸಿ ಇನ್ನೋರ್ವ ಒದ್ದಾಡುವುದು, ಆ ಹೊತ್ತಿಗೆ ಎದುರಾಗುವ ಅಚ್ಚರಿಗಳು, ತಿರುವುಗಳು ನೈಟ್ ಔಟ್ ಸಿನಿಮಾದ ಮೂಲದ್ರವ್ಯ.
ಒಳ್ಳೇ ತಂಡ ಸಿಕ್ತು ಒಳ್ಳೇ ಸಿನಿಮಾವಾಯ್ತು..
’ಸಿನಿಮಾ ನಿರ್ದೇಶನವೆಂಬುದು ಸುಲಭವಾಗಿ ಸಿದ್ಧಿಸಿಬಿಡುವಂಥದ್ದಲ್ಲ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಫ್ರೀ ಪ್ರೊಡಕ್ಷನ್ ಹಂತದಲ್ಲಿ ಕೆಲಸ ನಡೆದು, ಅದರ ಬಗ್ಗೆ ವಿಶ್ವಾಸ ಹುಟ್ಟಿದ ಮೇಲಷ್ಟೇ ಸಿನಿಮಾ ಶೂಟಿಂಗ್ ಪ್ರಾರಂಭಿಸಿದ್ದು. ಎಲ್ಲದಕ್ಕಿಂತ ಮುಂಚೆ ಗಟ್ಟಿ ಕಥೆಯಿರಬೇಕು, ಅದಕ್ಕೊಂದು ಉತ್ತಮ ಸ್ಕ್ರೀನ್ಪ್ಲೇ ಇರಬೇಕು, ಬೆನ್ನೆಲುಬಾಗಿ ನಿಲ್ಲುವಂಥ ಗಟ್ಟಿ ತಂಡ ಜೊತೆಗಿರಬೇಕು.. ಹೀಗೆ ಸಾಕಷ್ಟು ಸಿದ್ಧತೆಗಳೊಡನೆಯೇ ನೈಟ್ ಔಟ್ ಚಿತ್ರ ಶುರುವಾಯ್ತು. ಅದರ ಫಲವೋ ಏನೋ.. ಇವತ್ತು ನೈಟ್ ಔಟ್ ಸಿನಿಮಾದ ಪ್ರಥಮ ಕಾಪಿ ನೋಡಿದಾಗ ಮನಸ್ಸಿಗೆ ಸಮಾಧಾನ, ಸಂತೋಷ ಎರಡೂ ಸಿಗುತ್ತಿದೆ. ಈ ಚಿತ್ರ ಇಂದಿನ ಕಾಲಮಾನದ ಯುವಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂಬ ಭರವಸೆ ಬಂದಿದೆ..’ ಎಂದರು ರಾಕೇಶ್ ಅಡಿಗ.
ಕ್ಯಾರೆಕ್ಟರ್ಸ ಆಗಲಿ ಇಲ್ಲಿ ನಡೆಯುವ ಸನ್ನಿವೇಶಗಳಾಗಲಿ ಎಲ್ಲವೂ ನೈಜ ಬದುಕಿನಲ್ಲಿ ನಡೆದಂಥವು. ಅದನ್ನೇ ಆಧರಿಸಿ ಕಥೆ ಮಾಡಿಕೊಂಡಿದ್ದೇನೆ. ಹೆಸರೇ ನೈಟ್ ಔಟ್. ಹಾಗಾಗಿ ಸನ್ನಿವೇಶಗಳೂ ರಾತ್ರಿ ನಡೆಯುವಂಥದ್ದು. ಡೇ ಶೂಟಿಂಗ್ಗಿಂತ ನೈಟ್ ಶೂಟೇ ಜಾಸ್ತಿ. ಹಾಡು, ಫೈಟ್ಸ್ ಎಲ್ಲವೂ ಹದವಾಗಿರುವಂಥ ಸಿನಿಮಾವಿದು. ಸಾಹಸ ದೃಶ್ಯಗಳನ್ನ ಥ್ರಿಲ್ಲರ್ ಮಂಜು ಮತ್ತು ಪವರ್ ಪುಷ್ಪರಾಜ್ ನಿರ್ದೇಶನ ಮಾಡಿದ್ದಾರೆ. ಒಟ್ಟು ನಲವತ್ತು ದಿನಗಳ ಶೆಡ್ಯೂಲ್ ಪ್ಲಾನ್ ಮಾಡಿದ್ದೆ. ಅದರಂತೇ ಚಿತ್ರ ಪೂರ್ಣಗೊಳಿಸಿದ್ದೇನೆ”
ಪ್ಲಾನ್ ಪಕ್ಕಾ ಇರ್ಬೇಕು ಕಣ್ರೀ..
ನೈಟ್ ಔಟ್ ಸಿನಿಮಾದ ಎರಡು ಪ್ರಧಾನ ಪಾತ್ರಗಳನ್ನ ನವನಟ ಭರತ್, ಅಕ್ಷಯ್ ನಿರ್ವಹಿಸಿದ್ದಾರೆ. ಇನ್ನು ನಾಯಕಿಯಾಗಿ ಬಣ್ಣ ಹಚ್ಚಿರುವುದು ಸಂಕಷ್ಟಕರ ಗಣಪತಿ ಸಿನಿಮಾದ ಮೂಲಕ ಪರಿಚಯವಾದ ಶ್ರುತಿ ಗೊರಾಡಿಯಾ. ಲಕ್ಷ್ಮಿ ನವೀನ್ ಮತ್ತು ನವೀನ್ ಕೃಷ್ಣ ಈ ಚಿತ್ರದ ನಿರ್ಮಾಪಕರು. ನಗರ ಪ್ರದೇಶದಲ್ಲೇ ನಡೆಯುವ ಕಥೆಯಾದ್ದರಿಂದ ಹೊರ ಭಾಗಗಳಲ್ಲಿ ಶೂಟ್ ಮಾಡುವಂಥ ಪ್ರಸಂಗ ಎದುರಾಗಿಲ್ಲ.
ಹೆಸರುಘಟ್ಟ, ಕನಕಪುರ ರೋಡ್ ಬೆಂಗಳೂರು ಸುತ್ತಾಮುತ್ತವೇ ಚಿತ್ರೀಕರಣ ನಡೆಸಲಾಗಿದೆ. ಅಂದುಕೊಂಡ ಬಜೆಟ್ಟಿನೊಳಗೇ, ಅಂದುಕೊಂಡ ದಿವಸದೊಳಗೇ ಸಿನಿಮಾ ಪೂರ್ಣಗೊಳಿಸಿರುವುದರಿಂದ ರಾಕೇಶ್ ಅಡಿಗ ನಿರ್ಮಾಪಕರ ನಂಬಿಕೆಯನ್ನೂ ಉಳಿಸಿಕೊಂಡಿದ್ದಾರೆ. ಪ್ಲಾನಿಂಗ್ ಪಕ್ಕಾ ಆಗಿದ್ದರೆ ನಿರ್ಮಾಪಕರು ಸಂಕಷ್ಟಕ್ಕೆ ಬೀಳುವ ಪ್ರಸಂಗಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ರಾಕೇಶ್ ಅಡಿಗ.