ವ್ಯಾಪಾರವಾಗುತ್ತದೋ ಇಲ್ಲವೋ? ಸಿನಿಮಾ ಥೇಟರಿಗೆ ಬಂದಮೇಲೆ ಏನಾಗುತ್ತದೋ ಗೊತ್ತಿರೋದಿಲ್ಲ. ಆದರೂ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡುವ ನಿರ್ಮಾಪಕರಿದ್ದಾರೆ. ಇಡೀ ಬದುಕನ್ನೇ ಪಣಕ್ಕಿಟ್ಟು ಚಿತ್ರ ನಿರ್ಮಾಣ ಮಾಡುವ ಇಂಥ ಒಬ್ಬೊಬ್ಬ ನಿರ್ಮಾಪಕರಿಂದ ನೂರಾರು ಜನ ಕಾರ್ಮಿಕರ ಮನೆಯಲ್ಲಿ ಅನ್ನ ಬೇಯುತ್ತದೆ, ದೀಪ ಉರಿಯುತ್ತದೆ.

ದುಡ್ಡು ಕೈ ಸೇರುತ್ತದೆ ಅಂತಾ ಕನಸಿಟ್ಟುಕೊಂಡೇ ಬಹುತೇಕ ಕಮರ್ಷಿಯಲ್ ಸಿನಿಮಾದ ನಿರ್ಮಾಪಕರು ಹಣ ಸುರಿಯುವುದು, ನಿರ್ದೇಶಕರು ಕಸುಬು ಮಾಡುವುದು. ಆದರೆ ಅದರಲ್ಲಿನ ಗೆಲುವಿನ ಅಂಶ ತೀರಾ ಕಡಿಮೆ. ಇದರ ಜೊತೆಗೇ ಜನ ನೋಡದ ಸಿನಿಮಾಗಳನ್ನು ತೆಗೆದು, ಬರೀ ಪ್ರಶಸ್ತಿ, ಫಲಕ, ಸಬ್ಸಿಡಿ ಕಾಸಿಗಾಗಿಯೇ ರೀಲು ಸುತ್ತೋ ಜನ ಸಾಕಷ್ಟಿದ್ದಾರೆ. ಸಿನಿಮಾ ಮಾಡುವುದಕ್ಕಿಂತಾ ಹೆಚ್ಚು ತಲೆ ಉಪಯೋಗಿಸಿ, ಲಾಭಿ ಮಾಡಿ ಲಾಭ ದಕ್ಕಿಸಿಕೊಳ್ಳುವ ಕಲೆ ಇವರಿಗೆ ಕರಗತವಾಗಿರುತ್ತದೆ. ಸಾಕಷ್ಟು ಬಾರಿ ಹಿರಿಯ ಸಾಹಿತಿಗಳ ಮಹತ್ವದ ಕೃತಿಯನ್ನು ಆಯ್ಕೆ ಮಾಡಿಕೊಂಡು, ಅದನ್ನು ಕಳಪೆ ಗುಣಮಟ್ಟದಲ್ಲಿ ಚಿತ್ರೀಕರಿಸಿ ಅವಾರ್ಡು ಇತ್ಯಾದಿಗಳನ್ನು ಪಡೆಯುವವರೂ ಇದ್ದಾರೆ. ಇಂಥವರಿಂದ ಕನ್ನಡ ಚಿತ್ರರಂಗಕ್ಕಾಗಲಿ, ತಂತ್ರಜ್ಞರು-ಕಾರ್ಮಿಕರಿಗೆ ನಯಾ ಪೈಸೆಯ ಪ್ರಯೋಜನವಿಲ್ಲ. ಸಿನಿಮಾರಂಗಕ್ಕಾಗಿ ಸಿಗುವ ಸವಲತ್ತುಗಳನ್ನು ಕಬಳಿಸುವುದಷ್ಟೇ ಇವರ ಮೂಲ ಉದ್ದೇಶ.

ನಿಖಿಲ್ ಮಂಜು ಅನ್ನೋ ನಿರ್ದೇಶಕರೊಬ್ಬರಿದ್ದಾರೆ. ಒಂದಾನೊಂದು ಕಾಲದಲ್ಲಿ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಿಖಿಲ್ ಮಂಜು ಈಗ ಫುಲ್ ಟೈಂ ‘ಅವಾರ್ಡ್’ ಸಿನಿಮಾ ಡೈರೆಕ್ಟರ್… ಇವರ ನಿರ್ದೇಶನದ ಪ್ರತಿಯೊಂದು ಸಿನಿಮಾಗೂ ಯಾವುದಾದರೊಂದು ಪ್ರಶಸ್ತಿ ಬಂದೇ ಬರುತ್ತದೆ. ಜನರಿಗಾಗಿ ಸಿನಿಮಾ ತಯಾರಾಗಬೇಕು, ಅದಕ್ಕೆ ಅರ್ಹತೆಯಿದ್ದರೆ ಪ್ರಶಸ್ತಿ ಕೂಡಾ ದೊರಕಬೇಕು. ಆದರೆ ನಿಖಿಲ್ ಮಂಜು ಸಿನಿಮಾ ಮಾಡೋದೇ ಅವಾರ್ಡಿಗಾಗಿ ಎನ್ನುವಷ್ಟರ ಮಟ್ಟಿಗೆ ಬ್ರಾಂಡ್ ಆಗಿದ್ದಾರೆ. ಗಿರೀಶ್ ಕಾಸರವಳ್ಳಿ, ಶೇಷಾದ್ರಿ, ಲಿಂಗದೇವ್ರು, ಬರಗೂರು, ಈಗ ದಯಾಳ್ ಪದ್ಮನಾಭನ್ ಥರದ ನಿರ್ದೇಶಕರ ಸಿನಿಮಾಗಳಿಗೆ ಜಗತ್ತಿನ ದೊಡ್ಡ ಮಟ್ಟದ ಪ್ರಶಸ್ತಿಗಳು ಬರುತ್ತವೆ. ಒಂದು ವರ್ಗದ ಜನ ಇವರ ಸಿನಿಮಾಗಾಗಿ ಕಾಯುತ್ತಾರೆ; ನೋಡುತ್ತಾರೆ. ಆದರೆ ತೀರಾ ಪ್ರಶಸ್ತಿ ಮತ್ತು ಅದರಿಂದ ಗಿಟ್ಟುವ ಸೌಲಭ್ಯಗಳಿಗಾಗಿಯೇ ಸಿನಿಮಾ ಮಾಡೋದು ಅಂದರೆ ಹೇಗೆ? ನಿಖಿಲ್ ಮಂಜು ಥರದ ಕೆಲವು ನಿರ್ದೇಶಕರು ಪ್ಯಾಕೇಜು ಪಡೆದು ವರ್ಷಕ್ಕೆ ಡಜನ್ನುಗಟ್ಟಲೆ ಸಿನಿಮಾ ಸುತ್ತಿಕೊಡುವ ಕಾಯಕ ನಡೆಸುತ್ತಿದ್ದಾರೆ.

ಹಿರಿಯ ಗೀತರಚನೆಕಾರ, ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ. ದೊಡ್ಡರಂಗೇಗೌಡರನ್ನು ನಿರ್ದೇಶಕರನ್ನಾಗಿಸಿ ಸಿನಿಮಾ ಮಾಡಿಸುತ್ತೀನಿ ಅಂತಾ ವಾಸು ಪ್ರಸಾದ್ ಎಂಬುವವರ ಬಳಿ ಹದಿನಾಲ್ಕೂವರೆ ಲಕ್ಷ ರುಪಾಯಿ ಪ್ಯಾಕೇಜ್ ಪಡೆದಿದ್ದ ನಿಖಿಲ್ ಮಂಜು. ಐವತ್ತೈದು ವರ್ಷಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿರುವ ದೊಡ್ಡರಂಗೇಗೌಡರು ‘ಇಷ್ಟು ವರ್ಷ ನಾನು ನಿರ್ದೇಶನಕ್ಕೆ ಕೈ ಇಟ್ಟವನಲ್ಲ. ಈ ವಯಸ್ಸಲ್ಲಿ ಯಾಕ್ರೀ ಬೇಕು’ ಅಂತಲೇ ಅಂದಿದ್ದರು. ಆದರೂ ಅವರನ್ನು ಕಾಡಿ ಬೇಡಿ ’ನಾನು ಎಲ್ಲವನ್ನೂ ನೋಡ್ಕೋತೀನಿ’ ಅಂತಾ ಪುಸಲಾಯಿಸಿ ನಿರ್ದೇಶನಕ್ಕೆ ಒಪ್ಪಿಸಿದ. ‘ಹಾರುವ ಹಂಸಗಳು’ ಹೆಸರಿನ ಸಿನಿಮಾ ಶುರುವಾಗಿ ಮುಕ್ತಾಯ ಕೂಡಾ ಆಯಿತು. ಎಲ್ಲ ಮುಗೀತಲ್ಲ ಸಿನಿಮಾದ ಹಾರ್ಡ್ ಡಿಸ್ಕ್ ಕೊಡಿ ಅಂತಾ ಕೇಳಿದರೆ  ನಿಖಿಲ್ ಮಂಜು ದಿನಕ್ಕೊಂದು ಕತೆ ಹೇಳಲು ಶುರು ಮಾಡಿದ್ದಾನೆ. ಸ್ವತಃ ದೊಡ್ಡರಂಗೇಗೌಡರು ಫೋನು ಮಾಡಿದರೂ ರಿಸೀವ್ ಮಾಡದೇ ಆಟವಾಡಿಸಿದ್ದಾನೆ. ಹದಿನಾಲ್ಕೂವರೆ ಲಕ್ಷ ಹಣ ಪಡೆದ ನಿಖಿಲ್ ಮಂಜು ಸಿನಿಮಾಗೆ ಮೂರೂವರೆ ನಾಲ್ಕು ಲಕ್ಷ ಖರ್ಚು ಮಾಡಿದ್ದರೆ ಹೆಚ್ಚು. ಈ ಚಿತ್ರವನ್ನು ೨ಕೆ ರೆಸಲ್ಯೂಷನ್ನಿನಲ್ಲಿ ಚಿತ್ರೀಕರಿಸಿದ್ದಾನೆ. ಡಿಐ ಮತ್ತು ೫.೧ ಇತ್ಯಾದಿ ಯಾವುದನ್ನೂ ಮಾಡಿಸಿಲ್ಲ. ನಾವು ಥೇಟರಲ್ಲಿ ರಿಲೀಸ್ ಮಾಡಲು ಡಿಪಿಎಕ್ಸ್ ಬೇಕು ಅಂದರೆ, ಇರೋದನ್ನೇ ರಿಲೀಸ್ ಮಾಡಿಕೊಳ್ಳಿ ಅಂತಾನಂತೆ. ಪೋಸ್ಟರ್ ಡಿಸೈನ್ ಕಳಿಸಿ ಅಂದರೆ, ಮುದ್ರಣಕ್ಕೆ ಸಾಧ್ಯವೇ ಇಲ್ಲದ, ತನ್ನದೇ ಮೊಬೈಲಲ್ಲಿ ಸೃಷ್ಟಿಸಿದ ವಿನ್ಯಾಸಗಳನ್ನು ಕಳಿಸುವಷ್ಟು ಉಡಾಫೆ. ಮತ್ತೇನಾದರೂ ಮಾತಾಡಿದರೆ, ‘ಏನ್ರೀ… ನಾನು ನ್ಯಾಷನಲ್ ಅವಾರ್ಡ್ ವಿನ್ನರ್ ಡೈರೆಕ್ಟ್ರು. ನನ್ನ ಹತ್ರಾನೇ ಹಿಂಗೆಲ್ಲಾ ಕೇಳಕ್ಕೆ ಎಷ್ಟ್ರೀ ಧೈರ್ಯ’ ಅಂತಾ ಅವಾಜು ಬಿಡುತ್ತಾನಂತೆ!

ಸದ್ಯ ಪೂರ್ಣಗೊಂಡಿರುವ ಸಿನಿಮಾದ ಹಾರ್ಡ್ ಡಿಸ್ಕಲ್ಲಿರೋದೆಲ್ಲಾ ಡಿಲೀಟ್ ಆಗಿದೆ, ಕಾಸು ಕೊಟ್ಟರೆ ಅದನ್ನು ರಿಕವರ್ ಮಾಡಿಕೊಡ್ತೀನಿ ಅಂತಾ ಹೊಸಾ ಕತೆ ಶುರು ಮಾಡಿದ್ದಾನಂತೆ. ಹೀಗೆ ಒಂದಲ್ಲಾ ಒಂದು ಕತೆ ಬಿಡುತ್ತಾ, ಹಂಸದ ಹೆಸರಿನಲ್ಲಿ ಕಾಗೆ ಹಾರಿಸುತ್ತಿರುವ ನಿಖಿಲ್ ಮಂಜು ವಿರುದ್ಧ ಸ್ವತಃ ದೊಡ್ಡರಂಗೇಗೌಡರೇ ದೂರು ದಾಖಲಿಸಲು ರೆಡಿಯಾಗಿದ್ದಾರೆ ಎನ್ನುತ್ತಿದೆ ಮೂಲ. ನಿಖಿಲ್ ಮಂಜು ವಾರ್ತಾ ಇಲಾಖೆಯಲ್ಲಿನ ತನ್ನ ಗೆಣೆಕಾರರೊಂದಿಗೆ ಸೇರಿ ನಡೆಸುವ ಡೀಲಿಂಗುಗಳು, ಸಬ್ಸಿಡಿ ದಂಧೆ, ಅವಾರ್ಡು ಲಾಭಿ- ಇವುಗಳ ಬಗೆಗೆಲ್ಲಾ ಹೇಳುತ್ತಾ ಹೋದರೆ ಗ್ರಂಥಕ್ಕಾಗುವಷ್ಟು ಸರಕು ಗುಡ್ಡೆ ಬೀಳುತ್ತವೆ. ಸದ್ಯ ಈತನಿಂದ ನೊಂದಿರುವ ದೊಡ್ಡರಂಗೇಗೌಡರಂಥಾ ಹಿರಿಯ ಜೀವಕ್ಕೆ ನ್ಯಾಯ ಸಿಗಬೇಕಿದೆ. ಆ ನಂತರ ವಾರ್ತಾ ಇಲಾಖೆಯ ಗೇಟಿನಿಂದ ಇಂಥವರನ್ನು ಹೊರಕ್ಕಿಡುವ ಕೆಲಸ ಕೂಡಾ ಜರೂರಾಗಿ ನಡೆಯಬೇಕಿದೆ.

CG ARUN

ಒಡೆಯನನ್ನು ಮೀಟ್ ಮಾಡಬೇಕು ಅನ್ನೋ ಬಯಕೆ ಇವರಿಗೆ…

Previous article

You may also like

Comments

Leave a reply

Your email address will not be published. Required fields are marked *