ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ರಾಕೇಶ್ ನಿರ್ದೇಶನ ಮಾಡುತ್ತಿರೋ ಚಿತ್ರ ಫ್ಯಾನ್ ಆಫ್ ರೆಬೆಲ್ ಸ್ಟಾರ್. ಇದರಲ್ಲಿ ನಟಿಸುತ್ತಿರೋ ನಿಜವಾದ ಅಂಬಿ ಅಭಿಮಾನಿ ಸ್ಟಾರ್ ನಟನ್ಯಾರೆಂಬುದನ್ನು ರಾಕೇಶ್ ಇನ್ನೂ ಗೌಪ್ಯವಾಗಿಟ್ಟಿದ್ದಾರೆ. ನಿಜಕ್ಕೂ ಆ ನಟ ಯಾರೆಂದು ಸಮಸ್ತರೂ ತಲೆ ಕೆರೆದುಕೊಳ್ಳುತ್ತಿರುವಾಗಲೇ ಮತ್ತಷ್ಟು ತಲೆ ಕೆಡಿಸುವಂಥಾ ಫಸ್ಟ್ ಲುಕ್ ಪೋಸ್ಟರ್ ಒಂದನ್ನು ರಾಕೇಶ್ ಬಿಡುಗಡೆಗೊಳಿಸಿದ್ದಾರೆ.
ಈ ಪೋಸ್ಟರ್ ನಲ್ಲಿ ಅಂಬರೀಶ್ ಅವರ ಮುಖದಲ್ಲಿಯೇ ಸ್ಯಾಂಡಲ್ ವುಡ್ನ ಸ್ಟಾರ್ ನಟರನೇಕರ ಫೋಟೋವನ್ನು ಆಕರ್ಷಕವಾಗಿಯೇ ಡಿಸೈನು ಮಾಡಲಾಗಿದೆ. ಈ ಅಫಿಶಿಯಲ್ ಪೋಸ್ಟರನ್ನು ಖುದ್ದು ನಿರ್ದೇಶಕ ರಾಕೇಶ್ ಬಿಡುಗಡೆಗೊಳಿಸಿದ್ದಾರೆ. ದರ್ಶನ್, ರಾಕಿಂಗ್ ಸ್ಟಾರ್ ಯಶ್, ಶ್ರೀನಗರ ಕಿಟ್ಟಿ ಸೇರಿದಂತೆ ಅದರಲ್ಲಿ ಬಹುತೇಕ ನಟರ ಬಿಂಬವೂ ಕಾಣಿಸುತ್ತಿದೆ. ಆದರೆ ಒಂದು ಫೋಟೋ ಮಾಸ್ ಮಿಸ್ ಆಗಿದೆ. ಅದು ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರ್ ಅವರದ್ದು!
ಫ್ಯಾನ್ ಆಫ್ ಅಂಬರೀಶ್ ಫಸ್ಟ್ ಲುಕ್ ಪೋಸ್ಟರಿನಲ್ಲೀಗ ಎಲ್ಲರೂ ನಿಖಿಲ್ ಎಲ್ಲಿ ಅಂತ ಹುಡುಕುತ್ತಿದ್ದಾರೆ. ಇದು ಕಣ್ತಪ್ಪಿನಿಂದಾಗಿರೋ ವಿಚಾರವಾ ಅಥವಾ ಮಂಡ್ಯ ಚುನಾವಣೆಗೂ, ಪೋಸ್ಟರಿನಲ್ಲಿ ನಿಖಿಲ್ ಫೋಟೋ ಮಿಸ್ ಆಗಿದ್ದಕ್ಕೂ ನಂಟಿದೆಯಾ ಎಂಬ ಸಂದೇಹ ಎಲ್ಲರನ್ನೂ ಕಾಡುತ್ತಿದೆ.
ಯುವರಾಜ ನಿಖಿಲ್ ಕುಮಾರಸ್ವಾಮಿ ಕೂಡಾ ಸದ್ಯ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿರೋ ಹೀರೋ ಆಗಿದ್ದಾರೆ. ಆದರೆ ಎಲ್ಲ ನಾಯಕನಟರ ನಡುವೆ ನಿಖಿಲ್ ಇಲ್ಲದಿರೋದನ್ನು ನೋಡಿ ಜನ ‘ನಿಖಿಲ್ ಎಲ್ಲಿ’ ಎಂದು ಪ್ರಶ್ನಿಸುವಂತಾಗಿದೆ.
ಎಲ್ಲವನ್ನೂ ಕುತೂಹಲ ಹುಟ್ಟಿಸುವಂತೆಯೇ ಮಾಡೋ ಕ್ರಿಯೇಟಿವಿಟಿ ಹೊಂದಿರೋ ರಾಕೇಶ್, ನಿಖಿಲ್ ಫೋಟೋ ಕಾಣೆಯಾಗಿದ್ದರ ಹಿಂದೆಯೂ ಒಂದು ಟ್ವಿಸ್ಟ್ ಇಟ್ಟಿರಬಹುದಾ ಅನ್ನೋದು ಸದ್ಯದ ಕುತೂಹಲ. ಮಂಡ್ಯದಲ್ಲಿ ಅದ್ದೂರಿ ಮುಹೂರ್ತ ಸಮಾರಂಭ ನಡೆಸುವ ಮೂಲಕ ಈ ಸಿನಿಮಾವನ್ನು ಆರಂಭಿಸಲಾಗುತ್ತಿದೆ. ಇಷ್ಟರಲ್ಲಿಯೇ ನಡೆಯಲಿರುವ ಈ ಮುಹೂರ್ತ ಸಮಾರಂಭದಲ್ಲಿ ನಿಖಿಲ್ ಕಾಣೆಯಾಗಿರೋದರ ಅಸಲೀ ಕಾರಣ ಜಾಹೀರಾಗಬಹುದೇನೋ…
No Comment! Be the first one.