ಸೆಲೆಬ್ರೆಟಿಗಳು ಶಂಖದಿಂದ ಬಂದ ತೀರ್ಥದ ಥರ. ನಮ್ಮ ಜನಗಳಿಗೆ ಅವರು ಏನೇ ಮಾಡಿದ್ರೂ ಮಾದರಿನೇ. ನೆಚ್ಚಿನ ನಟ ಗಿಡ ನೆಡಲಿ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಿ, ಸಿಗರೇಟ್ ಬಿಡಿ ಎನ್ನಲಿ, ಕುಡಿತ ನಿಯಂತ್ರಣ ಮಾಡಿಕೊಳ್ಳಿ ಎನ್ನಲಿ ಇತ್ಯಾದಿಯಾಗಿ ಸಾಕಷ್ಟು ವಿಚಾರಗಳು ಅವರೇಳಿದ್ದೇ ವೇದ ವಾಕ್ಯ.

ಈ ಹಿಂದೆ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಪಟ್ಟಣದಲ್ಲಿ ಸೆಟಲ್‌ ಆಗಿದ್ದ ಎಷ್ಟೋ ಆಧುನಿಕ ರೈತರು ಪುನಃ ತಮ್ಮ ಊರಿಗೆ ಹಿಂತಿರುಗಿ ವ್ಯವಸಾಯ ಆರಂಭಿಸಿದ ಉದಾಹರಣೆಗಳಿವೆ. ದೇಹ ದಾನ ಮಾಡಿದರೆಂದು, ಕಣ್ಣು ದಾನ ಮಾಡಿದರೆಂದು ತಮ್ಮನ್ನು ಸಮಾಜೋದ್ಧಾರ್ಮಿಕ ಕೆಲಸಗಳಿಗೆ ಅರ್ಪಿಸುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದನ್ನು ಮನಗಂಡ ಎಷ್ಟೋ ಸಹೃದಯ ಸಿನಿ ತಾರೆಯರು ಮಾದರಿ ಕೆಲಸಗಳನ್ನು ಮಾಡಿ ಕೈಲಾದ ಮಟ್ಟಿಗೆ ಜಾಗೃತಿ ತರುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಸದ್ಯದ‌ ವಿಚಾರ ಏನಂದ್ರೆ ಬ್ರಹ್ಮಚಾರಿ ನೀನಾಸಂ ಸತೀಶ್ ಅಂತಹುದೇ ಕಳಕಳಿ‌ ಮೆರೆದಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮಗಿರುವ ಶ್ವಾನ ಪ್ರೇಮದ ಕುರಿತು ಬರೆದುಕೊಂಡಿರುವ ಅವರು ಬೀದಿ ನಾಯಿಗಳ ರಕ್ಷಣೆ ಕುರಿತು ಕಳಕಳಿ ವ್ಯಕ್ತಪಡಿಸಿದ್ದಾರೆ.

ಆರ್ ಆರ್ ನಗರದಲ್ಲಿ ನೀನಾಸಂ ಸತೀಶ್ ಮನೆ ಮಾಡಿದಾಗ ಅವರಿಗೆ ಜೊತೆಯಾದದ್ದು ಮಿಣ್ಣಿ ಎಂಬ ಬೀದಿ ನಾಯಿ. ಅದನ್ನು ಲಘುಬಗೆಯಿಂದಲೇ ಸಾಕುತ್ತಿದ್ದರಂತೆ. ಆದರೆ ಕೆಲಸಕ್ಕೆ ಬಾರದ ಒತ್ತಡದಲ್ಲೊಬ್ಬ ಅದಕ್ಕೆ ಅಪಘಾತವನ್ನು ಮಾಡಿ ಅದರ ಸೊಂಟವನ್ನು ಮುರಿಯುವಂತೆ ಐಬು ಮಾಡಿದ್ದನಂತೆ. ಅದಾದ ಮೇಲೆ ಅದಕ್ಕೆ ತಕ್ಕ ಚಿಕಿತ್ಸೆ ಕೊಡಿಸಿದರೂ ಮಿಣ್ಣಿಗೆ ನೋವು ಕಡಿಮೆಯಾಗದೇ ಸರಿಯಾಗಿ ನಡೆಯಲಾಗುತ್ತಿಲ್ಲವಂತೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ನೀನಾಸಂ ಸತೀಶ್ “ವಿದೇಶಿ ನಾಯಿಗಳ ವ್ಯಾಮೋಹದಲ್ಲಿ ಆಹಾರವಿಲ್ಲದೆ ಸಾಕಷ್ಟು ಬೀದಿನಾಯಿಗಳು ಹಸಿವಿನಿಂದ ಒದ್ದಾಡುತ್ತವೆ. ಬೀದಿನಾಯಿಗಳ ಬಗ್ಗೆ ಸ್ವಲ್ಪ ಗಮನ ಹರಿಸಿ, ಕನಿಷ್ಠ ದಾರಿಯಲ್ಲಿ ಓಡಾಡುವಾಗ ವಾಹನ ಚಾಲಕರಿಗೆ ಪ್ರಜ್ಞೆ ಇರಲಿ, ನಮ್ಮಂತೆ ಅವಕ್ಕೂ ನೋವಾಗುತ್ತೆ, ಅನ್ನೋ ಪ್ರಜ್ಞೆ ನಮಗಿರಬೇಕು. ಭೂಮಿ ಬರೀ ಮನುಷ್ಯರಿಗೆ ಸೇರಿದ್ದಲ್ಲ ಪ್ರಾಣಿಪಕ್ಷಿಗಳು ಎಲ್ಲಾ ಜೀವರಾಶಿಗಳಿಗೂ ಸೇರಿದ್ದು. ಬುದ್ಧಿ ಇರುವ ನಾವೇ ಪ್ರಜ್ಞಾಹೀನರಾಗಿ ಬದುಕಿದರೆ ಹೇಗೆ ನಮ್ಮ ಬದುಕಿಗೆ ಅರ್ಥವೇನು..ಇನ್ನಾದರೂ ಪ್ರಾಣಿಗಳಿಗೂ ಜೀವಿಸಲು ಜಾಗ ಕೊಡೋಣ…” ಎಂದಿದ್ದಾರೆ.ನಿಜವಲ್ಲವೇ ಜಗತ್ತು ಎಲ್ಲರಿಗೂ ಸೇರಿದ ಸ್ವತ್ತು ಎಂಬ ತಿಳಿವಳಿಕೆ ಪ್ರತಿಯೊಬ್ಬ ಮನುಷ್ಯನಲ್ಲಿ ಇದ್ದರೆ ಅವನು ಮನುಷ್ಯ ಎನಿಸಿಕೊಳ್ಳುತ್ತಾನೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಏಳು ಬ‍ಣ್ಣಗಳ ಸಮಾಗಮ `ಮಳೆಬಿಲ್ಲು’

Previous article

ಕೀರ್ತಿ ಸುರೇಶ್ ಕಾಲೆಳೆದ ಶ್ರೀರೆಡ್ಡಿ!

Next article

You may also like

Comments

Leave a reply

Your email address will not be published. Required fields are marked *