ನೂರಾರು ಕನಸುಗಳನ್ನಿಟ್ಟುಕೊಂಡು, ಬದುಕು ಕಟ್ಟಿಕೊಳ್ಳಲು ಬಂದವರನ್ನೆಲ್ಲಾ ಪ್ರೀತಿಯಿಂದ ಪೊರೆದು ಜೋಪಾನ ಮಾಡೋ ಕರ್ಮಸ್ಥಳ ಈ ಬೆಂಗಳೂರು. ಇಲ್ಲಿಗೆ ಬರುವ ಜೀವಗಳು ತಮ್ಮ ಮನಸ್ಸಿಗೆ ಹಿಡಿಸೋ ಜೋಡಿಯನ್ನು ಹುಡುಕಿಕೊಳ್ತಾವೆ. ಈ ಪ್ರೇಮಿಗಳು ತಮ್ಮ ಸಂಬಂಧದಲ್ಲಿ ಖುಷಿಯಾಗಿರಲಿ ಅಥವಾ ನೊಂದಿರಲಿ, ತಮ್ಮ ಪರಿಸ್ಥಿತಿಯ ಬಗ್ಗೆ ತರ್ಕ ಮಾಡೋದಕ್ಕೆ ಹೋಗುವ ಪುಣ್ಯಸ್ಥಳ ಅಂದ್ರೆ ಬಾರು. ಆದರೆ ಈ ಪುಣ್ಯ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳೋರು ಖುಷೀಲಿರೋರೂ ಅಲ್ಲ, ನೊಂದಿರೋರೂ ಅಲ್ಲ, ಈ ಎರಡರ ನಡುವೆ ಇರುವ ಒಂದು ವಿಭಿನ್ನವಾದ ವರ್ಗ; ಕಾಂಪ್ಲಿಕೇಟೆಡ್ ರಿಲೇಷನ್ʼಶಿಪ್ಪಲ್ಲಿ ಇರೋರು. ಇಂಥದ್ದೇ ಒಂದು ಪುಣ್ಯಸ್ಥಳದಲ್ಲಿ ಆರಂಭವಾದ ಕತೆ ಇದು..– ಎಂದು ಬೆಂಗಳೂರು, ಬಾರು, ಜೋಡಿ ಜೀವಗಳ ಬಗ್ಗೆ ಸಣ್ಣದೊಂದು ಪೀಠಿಕೆಯೊಂದಿಗೆ ಆರಂಭವಾಗುವ ಸಿನಿಮಾ ʼನಿನ್ನ ಸನಿಹಕೆʼ!
ಹುಡುಗಿ ಹೆಸರು ಅಮೃತಾ. ಮನೆಯವರು ಪ್ರೀತಿಯಿಂದ ಡಿಂಪಿ ಅಂತಾ ಕರೀತಾರೆ… ಅವನ ಹೆಸರು ಆದಿ. ಮನೆಯಲ್ಲಿ ಪ್ರೀತಿಯಿಂದ ಕತ್ತೆ, ಕೋತಿ, ನಾಯಿ ಅಂತೆಲ್ಲಾ ಕರೀತಾರೆ.. ಈ ಡಿಂಪಿ & ಲವ್ಲಿ ಡಾಂಕಿಗೂ ಒಬ್ಬರಮೇಲೊಬ್ಬರಿಗೆ ಒಟ್ಟೊಟ್ಟಿಗೇ ಒಲವಾಗುತ್ತದೆ. ಅದೂ ಬಾರಲ್ಲಿ. ಸ್ನೇಹಿತೆಯ ಬ್ಯಾಚುಲರೇಟ್ ಪಾರ್ಟಿಗೆ ರೆಸ್ಟೋರೆಂಟಿನಲ್ಲಿ ಸೇರಿರುತ್ತಾರೆ. ಅಲ್ಲಿ ತಮಾಷೆಗಾಗಿ ಆರಂಭವಾಗುವ ಕೃತಕ ಸನ್ನಿವೇಶ ಕ್ಷಣಮಾತ್ರದಲ್ಲಿ ಗಾಢತೆಗೆ ತಿರುಗುತ್ತದೆ.
ಆಕೆ ವೃತ್ತಿಯಲ್ಲಿ ವೈದ್ಯೆ. ಚಿಕ್ಕಮಗಳೂರಿನಿಂದ ಬಂದು ಒಬ್ಬಂಟಿಯಾಗಿ ಬದುಕು ಸಾಗಿಸುತ್ತಿರುತ್ತಾಳೆ. ಅಕ್ಕನ ಬದುಕಿನಲ್ಲಾದ ಘೋರ ವಿಪತ್ತು ಈಕೆಯನ್ನೂ ಅಪಾರವಾಗಿ ಘಾಸಿಗೊಳಿಸಿರುತ್ತದೆ. ಆಕೆಯ ಬದುಕು ಹಸನಾಗುವ ತನಕ ತಾನು ಮದುವೆಯಾಗಬಾರದು ಅನ್ನೋದು ಈಕೆಯ ನಿರ್ಧಾರ. ಇನ್ನು, ಆತ ಕೂಡಾ ಹಳ್ಳಿಯಿಂದ ಬಂದು ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿರುತ್ತಾನೆ. ಬ್ಯಾಂಕಿನಲ್ಲಿ ಸಾಲ ಪಡೆದು ಅಪ್ಪ ಅಡವಿಟ್ಟ ಮನೆಯನ್ನು ಬಿಡಿಸಿ ತಾಯಿಯ ಕೈಗೊಪ್ಪಿಸಬೇಕು. ಆ ಮೂಲಕ ದುಷ್ಟ ಗಂಡನನ್ನು ಕಟ್ಟಿಕೊಂಡು ಜೀವನವಿಡೀ ಹೆಣಗಾಡಿದ ತಾಯಿಗೆ ನೆಮ್ಮದಿಯ ಬದುಕು ರೂಪಿಸಬೇಕು ಅನ್ನೋದು ಇವನ ಸಂಕಲ್ಪ.
ಹೀಗೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿಯಿರಿಸಿಕೊಂಡ ಇಬ್ಬರೂ ಜೊತೆಯಾಗುತ್ತಾರೆ. ಮದುವೆಗೆ ಮುಂಚೆಯೇ ಒಟ್ಟಿಗೇ ಬಾಳ್ವೆ ನಡೆಸುತ್ತಾರೆ. ಚಂದ್ರನಿಗೆ ಮುಖ ಮಾಡಿ ಮಲಗಿ ʻಈ ಊರಲ್ಲಿ ಅವಕಾಶಗಳ ಹಿಂದೆ ಓಡ್ತಾ ಓಡ್ತಾ ಆಕಾಶ ನೋಡೋದನ್ನೇ ಮರೆತುಬಿಡ್ತೀವಿ ಅಲ್ವಾ?ʼ ಅಂತಾ ಮುದ್ದಾಗಿ ಮಾತಾಡಿಕೊತ್ತಾರೆ. ಇಂಥಾ ಕಣ್ಮಣಿಗಳ ಕತೆ ಎತ್ತೆತ್ತ ಸಾಗುತ್ತದೆ? ಇವರಿಬ್ಬರ ಪ್ರೀತಿಗೆ ಎದುರಾಗುವ, ಬಿಟ್ಟೂ ಬಿಡದೆ ಕಾಡುವ ಅಂಶ ಯಾವುದು ಅನ್ನೋದನ್ನು ತೆರೆಮೇಲೆ ನೋಡಿಯೇ ತಿಳಿದುಕೊಳ್ಳಬೇಕು!
ʻನಿನ್ನ ಸನಿಹಕೆʼ ಧನ್ಯಾ ರಾಮ್ ಕುಮಾರ್ ನಟನೆಯ ಮೊದಲ ಸಿನಿಮಾ ಅನ್ನೋದು ಮಾತ್ರವಲ್ಲದೆ, ಅಣ್ಣಾವ್ರ ಕುಟುಂಬದಿಂದ ಬಂದು ಹೀರೋಹಿನ್ ಆಗಿ ಬಣ್ಣ ಹಚ್ಚುತ್ತಿರುವ ಮೊದಲ ಹುಡುಗಿ ಅನ್ನೋದು ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ಒಳಗೂ ಕುತೂಹಲಕ್ಕೆ ಕಾರಣವಾಗಿತ್ತು. ಮೇರು ನಟ ರಾಜ್ ಕುಮಾರ್ ಕರ್ನಾಟಕದ ಸಾರ್ವಕಾಲಿಕ ಹೀರೋ. ಮೂವರು ಮಕ್ಕಳೂ ಹೀರೋಗಳಾಗಿದ್ದಾರೆ. ಈಗ ಮೊಮ್ಮಕ್ಕಳೂ ಅಖಾಡಕ್ಕಿಳಿದಿದ್ದಾರೆ. ಅಳಿಯ ರಾಮ್ ಕುಮಾರ್ ಕೂಡಾ ಆ ಕಾಲದ ಲವ್ಲಿಸ್ಟಾರ್! ಈಗ ರಾಮ್ ಕುಮಾರ್ ಮಗಳು ತೆರೆ ಮೇಲೆ ಹೇಗೆ ಕಾಣಿಸಿಕೊಂಡಿರಬಹುದು ಎನ್ನುವ ದೊಡ್ಡ ಕೌತುಕಕ್ಕೆ ʻನಿನ್ನ ಸನಿಹಕೆʼ ತೆರೆ ಎಳೆದಿದೆ.
ಮೊದಲ ಚಿತ್ರದಲ್ಲೇ ಧನ್ಯಾ ಎಲ್ಲರನ್ನೂ ಆವರಿಸಿಕೊಳ್ಳುವಂತೆ ನಟಿಸಿದ್ದಾಳೆ. ಈಕೆಯ ಭಾವಾಭಿವ್ಯಕ್ತಿಯಲ್ಲಿ ರಂಜಿಸುವ ಗುಣವಿದೆ. ಸೂರಜ್ ಗೌಡ ಈ ತನಕ ನಟನಾಗಿ ಒಂದು ಮಟ್ಟಕ್ಕೆ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದವರು. ಈ ಸಲ ತಾವೇ ಕಣಕ್ಕಿಳಿದು ನಿರ್ದೇಶನವನ್ನೂ ಮಾಡಿದ್ದಾರೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಸೂರಜ್ ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಅನೇಕ ದೃಶ್ಯಗಳಲ್ಲಿ ಸೂರಜ್ ಕನ್ನಡದ ದೇವರಕೊಂಡನಂತೆ ಪ್ರತಿಫಲಿಸುತ್ತಾರೆ.
ಈ ಕಾಲಘಟ್ಟದ ಹುಡುಗ-ಹುಡುಗಿಯರ ಪ್ರೀತಿ, ಪ್ರೇಮ, ಪ್ರಣಯ, ಲಿವಿನ್ ರಿಲೇಷನ್ ಶಿಪ್ಪು, ನಂಬಿಕೆ, ಅಪನಂಬಿಕೆಗಳು, ಹುಡುಗಿಯರ ವಿಪರೀತ ಪೊಸೆಸಿವ್ನೆಸ್, ಹುಡುಗರ ಉಡಾಫೆಗಳೆಲ್ಲವೂ ʻನಿನ್ನ ಸನಿಹಕೆʼಯಲ್ಲಿ ಅನಾವರಣಗೊಂಡಿದೆ. ಬದುಕಲ್ಲಿ ಏನೆಲ್ಲಾ ಘಟಿಸಿದ ನಂತರವೂ ಬದುಕು ಮುಗಿದುಹೋಗೋದಿಲ್ಲ ಎನ್ನುವ ಸೂಕ್ಷ್ಮ ಸಂದೇಶವೂ ಇಲ್ಲಿದೆ. ಯಾರದ್ದೋ ಊನವೂ ಮತ್ತೊಬ್ಬರಿಗೆ ಬಂಡವಾಳವಾಗಬಲ್ಲದು ಎನ್ನುವ ಕಣ ಕೂಡಾ ಇಲ್ಲಿ ಇಣುಕಿದೆ. ಹಾಲು ಮಾರುವ ಹುಡುಗನ ವಿಚಾರಪ್ರಿಯತೆ, ಮನೆಗೆಲಸದವಳ ಕಣ್ಣಿನ ಕ್ಯೂರಿಯಾಸಿಟಿ, ಓನರ್ ಆಂಟಿಯ ಕಿತಾಪತಿಯ ಜೊತೆಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳಬಲ್ಲ ಅಂಕಲ್ ಕೂಡಾ ಇಲ್ಲಿದ್ದಾರೆ. ಕೇಡುಗರ ಜಾಲಕ್ಕೆ ಸಿಲುಕಿದ ಹುಡುಗಿಯ ಆತಂಕ ಕೂಡಾ ತೆರೆದುಕೊಂಡಿದೆ. ತಾಯಿಯ ಸೆಂಟುಮೆಂಟು, ತಂದೆಯ ಕಕ್ಕುಲಾತಿಯೂ ಬೆಸೆದುಕೊಂಡಿದೆ.
ಕ್ಯೂಟ್ ಎನಿಸುವ ಕಥೆಯ ಎಳೆ, ಚೆಂದದ ಫೋಟೋಗ್ರಫಿ, ಮನಸ್ಸಿನ ಸನಿಹಕೆ ಬಂದು ತಾಕುವ ಸಂಭಾಷಣೆ ಎಲ್ಲವೂ ಇರುವ ಈ ಚಿತ್ರದಲ್ಲಿ ಕೊರತೆಯೂ ಇದೆ. ಎಲ್ಲವೂ ಇದ್ದೂ ಅವುಗಳನ್ನು ಒಪ್ಪವಾಗಿ ಜೋಡಿಸುವಲ್ಲಿ ಸೂರಜ್ ಸ್ವಲ್ಪ ಎಡವಿದ್ದಾರೆ. ಒಳ್ಳೇ ಹುಡುಗ ಅಂತಾ ಗೊತ್ತಾದಮೇಲೂ ಮತ್ತೆ ಮತ್ತೆ ಅನುಮಾನಿಸುವ ಹುಡುಗಿಯ ಮನಸ್ಥಿತಿ ರೇಜಿಗೆ ಹುಟ್ಟಿಸುತ್ತದೆ. ಒಂದಿಷ್ಟು ದೃಶ್ಯಗಳಲ್ಲಿ ಧನ್ಯಾ ಮೇಕಪ್ಪು ಅತಿ ಅನಿಸುತ್ತದೆ. ಉತ್ತಮ ಕಲಾವಿದ ಅನ್ನಿಸಿಕೊಂಡಿರುವ ಮಂಜುನಾಥ ಹೆಗಡೆ ಯಾಕೆ ಇದ್ದಕ್ಕಿದ್ದಂತೆ ಓವರ್ ಆಕ್ಟಿಂಗ್ ಮಾಡುತ್ತಾರೋ ಗೊತ್ತಿಲ್ಲ. ರಜನೀಕಾಂತ್ ಮತ್ತು ನಂದಗೋಪಾಲ್ ನಟನೆ ಇಷ್ಟವಾಗುತ್ತದೆ. ಅಲ್ಲಲ್ಲಿ ನಿಶ್ಯಬ್ದಕ್ಕೂ ಮೌಲ್ಯ ನೀಡಿರುವ ರಘು ದೀಕ್ಷಿತ್ ಹಿನ್ನೆಲೆ ಸಂಗೀತ ಚಿತ್ರದ ಶಕ್ತಿ. ಸಿನಿಮಾದ ಶೀರ್ಷಿಕೆಯಷ್ಟೇ ವಿನ್ಯಾಸವೂ ಮುದ್ದಾಗಿದೆ…
Comments